ನವದೆಹಲಿ: ಪದೇ ಪದೇ ಪ್ರತಿಭಟನೆಗೆ ಕರೆ ನೀಡಿ ಕಾನೂನು ಸುವ್ಯವಸ್ಥೆಗೆ ಭಂಗ ತಂದು ಬಾಂಡ್ ಷರತ್ತು ಉಲ್ಲಂಘಿಸಿದ್ದಕ್ಕೆ ಕಾಕ್ರೋಚ್ ಜನತಾ ಪಾರ್ಟಿ (CJP) ನಾಯಕರಾದ ಅಶುತೋಷ್ ರಾಂಕಾ (Ashutosh Ranka) ಮತ್ತು ಸೌರವ್ ದಾಸ್(Sourav Das) ಅವರ ನ್ಯಾಯಾಂಗ ಬಂಧನವನ್ನು (JC) ಅಕ್ಟೋಬರ್ 21 ರವರೆಗೆ ವಿಸ್ತರಿಸಿ ನವದೆಹಲಿ ಜಿಲ್ಲೆಯ ಮಂದಿರ್ ಮಾರ್ಗ್ ಪೊಲೀಸ್ ಠಾಣೆಯ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ (SEM) ರಿತು ರಾಜ್ ಆದೇಶಿಸಿದ್ದಾರೆ.
ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯ ಎಸ್ಎಚ್ಒ (SHO) ಅವರು ಆರೋಪಿಗಳ ನ್ಯಾಯಾಂಗ ಬಂಧನವನ್ನು 5 ದಿನಗಳ ಕಾಲ ವಿಸ್ತರಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಹಿಂದಿನ ಮ್ಯಾಜಿಸ್ಟ್ರೇಟ್ಗೆ ವಾಟ್ಸಪ್ ಮೂಲಕ ಅನಾಮಧೇಯ ಬೆದರಿಕೆ ಸಂದೇಶಗಳು ಬಂದಿರುವ ಕುರಿತು ಪ್ರತ್ಯೇಕ ಡಿಡಿ ಎಂಟ್ರಿ ದಾಖಲಾಗಿರುವುದನ್ನು ತನಿಖಾಧಿಕಾರಿ ನ್ಯಾಯಾಲಯದ ಗಮನಕ್ಕೆ ತಂದರು.
ಆರೋಪಿಗಳು ನಿಷೇಧಿತ ಪ್ರದೇಶವಾದ ಜಂತರ್ ಮಂತರ್ ಹಾಗೂ ಕನ್ನಾಟ್ ಪ್ಲೇಸ್ನಲ್ಲಿ ಸಾರ್ವಜನಿಕರನ್ನು ಒಗ್ಗೂಡಿಸಿ ಪದೇ ಪದೇ ಪ್ರತಿಭಟನೆಗೆ ಕರೆ ನೀಡುವ ಮೂಲಕ ಶಾಂತಿ ಸುವ್ಯವಸ್ಥೆಗೆ ಭಂಗ ತರುತ್ತಿದ್ದಾರೆ ಮತ್ತು ಅಕ್ಟೋಬರ್ 11 ರಂದು ನೀಡಿದ್ದ ಬಾಂಡ್ ಮುಚ್ಚಳಿಕೆಯನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿದ್ದಾರೆ ಎಂದು ಪೊಲೀಸರು ವಾದಿಸಿದರು.
ಆರೋಪಿಗಳ ಪರ ವಕೀಲರು, “ತಮ್ಮ ಕಕ್ಷಿದಾರರು ಇನ್ನು ಮುಂದೆ ಇಂತಹ ಕೃತ್ಯ ಮರುಕಳಿಸುವುದಿಲ್ಲ, ಅಕ್ಟೋಬರ್ 10ರ ಬಳಿಕ ಯಾವುದೇ ಪ್ರತಿಭಟನೆಗೆ ಕರೆ ನೀಡಿಲ್ಲ, ಹೀಗಾಗಿ ತಕ್ಷಣ ಬಿಡುಗಡೆ ಮಾಡಬೇಕು” ಎಂದು ಮನವಿ ಮಾಡಿದರು.
ಆರೋಪಿಗಳ ನಡವಳಿಕೆ ಹಾಗೂ ಪೊಲೀಸರು ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಲಯ, “ಆರೋಪಿಗಳು ಮತ್ತೆ ಇಂತಹ ಕೃತ್ಯ ಎಸಗುವುದಿಲ್ಲ ಎಂಬ ಹೇಳಿಕೆಯು ವಿಶ್ವಾಸಾರ್ಹವಾಗಿಲ್ಲ, ಕಾನೂನಿನ ಬಗ್ಗೆ ಗೌರವವಿಲ್ಲದಂತೆ ವರ್ತಿಸುತ್ತಿದ್ದಾರೆ” ಎಂದು ಅಭಿಪ್ರಾಯಪಟ್ಟಿತು.
ಇದೇ ವೇಳೆ ಆರೋಪಿಗಳ ಪರವಾಗಿ ಹಾಜರುಪಡಿಸಲಾದ ಶ್ಯೂರಿಟಿಗಳ (Sureties) ವಿವರಗಳನ್ನು ಪರಿಶೀಲಿಸಿದ ಮ್ಯಾಜಿಸ್ಟ್ರೇಟ್, ಅವರ ದಾಖಲೆಗಳಲ್ಲಿನ ಫೋಟೋ ಹೊಂದಾಣಿಕೆಯಾಗದಿರುವುದು, ಅಸಮರ್ಪಕ ಉತ್ತರಗಳು ಹಾಗೂ ಆರೋಪಿಗಳ ಮೇಲೆ ಯಾವುದೇ ನಿಯಂತ್ರಣ ಹೊಂದಿರದಿರುವುದನ್ನು ಕಂಡು ಅವರನ್ನು ಅನರ್ಹಗೊಳಿಸಿ ಹೊಸ ಶ್ಯೂರಿಟಿಗಳನ್ನು ಒದಗಿಸಲು ನಿರ್ದೇಶಿಸಿದರು.
ಬಾಂಡ್ನಲ್ಲಿರುವ ಭಾವಚಿತ್ರ ಹಾಗೂ ಶ್ಯೂರಿಟಿಯ ಆಧಾರ್ ಕಾರ್ಡ್ನ ಭಾವಚಿತ್ರದಲ್ಲಿ ವ್ಯತ್ಯಾಸ ಕಂಡುಬಂದಿದೆ. ಅವರು ಯಾವುದೇ ಇತರ ಮಾನ್ಯವಾದ ಗುರುತಿನ ಪುರಾವೆಗಳನ್ನು ಹಾಜರು ಪಡಿಸಿರಲಿಲ್ಲ. ವೈಯಕ್ತಿಕ ವಿಚಾರಣೆಯ ವೇಳೆ, ಶ್ಯೂರಿಟಿ ಬಾಂಡ್ನಲ್ಲಿ ನಮೂದಿಸಲಾದ ಮೂಲಭೂತ ವಿವರಗಳನ್ನು (ಅಂದರೆ ತಂದೆಯ ಹೆಸರು, ವಿಳಾಸ ಇತ್ಯಾದಿ) ನೀಡಲು ವಿಫಲರಾಗಿದ್ದಾರೆ. ಸೌರವ್ ದಾಸ್ ಪರವಾಗಿ ಜಾಮೀನುದಾರರಾಗಿ ನಿಂತಿದ್ದಾರೋ ಅವರ ವಿವರಗಳನ್ನೇ ನೀಡದ್ದಕ್ಕೆ ಹೊಸ ಶ್ಯೂರಿಟಿಗಳನ್ನು ಹಾಜರುಪಡಿಸಲು ಸೂಚಿಸಿದೆ.
ಅಕ್ರಮ ಪ್ರವೇಶ ಕೇಸ್:
ಅಶುತೋಷ್ ರಾಂಕಾ ಮತ್ತು ಸೌರವ್ ದಾಸ್ ವಿರುದ್ಧ ದಾಖಲಾಗಿರುವ ಅಕ್ರಮ ಪ್ರವೇಶ (Trespassing) ಪ್ರಕರಣದ ತನಿಖೆಯನ್ನು ಕ್ರೈಂ ಬ್ರಾಂಚ್ಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನಿಷೇಧಿತ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿ ಪ್ರತಿಭಟನೆ ನಡೆಸಿದ ಹಾಗೂ ಸಾರ್ವಜನಿಕ ಶಾಂತಿಗೆ ಭಂಗ ತಂದ ಆರೋಪದಡಿ ಈ ಇಬ್ಬರೂ ನಾಯಕರ ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ರಕರಣದ ಗಂಭೀರತೆ ಮತ್ತು ತನಿಖೆಯ ವಿಸ್ತಾರವನ್ನು ಪರಿಗಣಿಸಿ, ಇದನ್ನು ಸ್ಥಳೀಯ ಪೊಲೀಸರಿಂದ ದೆಹಲಿ ಪೊಲೀಸರ ಅಪರಾಧ ವಿಭಾಗಕ್ಕೆ (Crime Branch) ವರ್ಗಾಯಿಸಲು ತೀರ್ಮಾನಿಸಲಾಗಿದೆ.
ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವ ನಾಯಕರ ವಿರುದ್ಧ ದಾಖಲಾಗಿರುವ ಎಲ್ಲಾ ಆರೋಪಗಳು, ಪ್ರತಿಭಟನೆಯ ಹಿನ್ನೆಲೆ ಹಾಗೂ ಸಂಚಿನ ಕುರಿತು ಕ್ರೈಂ ಬ್ರಾಂಚ್ ಅಧಿಕಾರಿಗಳು ತೀವ್ರ ತನಿಖೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
