ಬೆಂಗಳೂರು: ಕನ್ನಡ ರಾಜ್ಯೋತ್ಸವದ(Karnataka Rajyotsava) ಶುಭ ಸಂದರ್ಭದಲ್ಲಿ ಕನ್ನಡಿಗರಿಗೆ ಹಾಗೂ ಬೆಂಗಳೂರು-ಮುಂಬೈ(Bengaluru-Mumbai) ಮಾರ್ಗದ ರೈಲು ಪ್ರಯಾಣಿಕರಿಗೆ ಭಾರತೀಯ ರೈಲ್ವೆಯಿಂದ(Indian Railways) ಭರ್ಜರಿ ಸಿಹಿಸುದ್ದಿಯೊಂದು ಸಿಗುವ ಸಾಧ್ಯತೆಯಿದೆ. ಬಹುನಿರೀಕ್ಷಿತ ಬೆಂಗಳೂರು-ಮುಂಬೈ ನಡುವಿನ ವಂದೇ ಭಾರತ್ ಸ್ಲೀಪರ್ ರೈಲಿಗೆ(Vande Bharat Sleeper Train) ನವೆಂಬರ್ 1 ರಂದು ಅಧಿಕೃತವಾಗಿ ಚಾಲನೆ ದೊರೆಯುವ ನಿರೀಕ್ಷೆಯಿದೆ.
ರಾಜ್ಯದ ರಾಜಧಾನಿ ಬೆಂಗಳೂರು ಮತ್ತು ದೇಶದ ಆರ್ಥಿಕ ರಾಜಧಾನಿ ಮುಂಬೈ ನಡುವಿನ 1,118 ಕಿಲೋಮೀಟರ್ ದೂರವನ್ನು ಈ ಸೆಮಿ-ಹೈಸ್ಪೀಡ್ ಸ್ಲೀಪರ್ ರೈಲು ಕೇವಲ 16 ಗಂಟೆಗಳಲ್ಲಿ ಕ್ರಮಿಸಲಿದೆ.
ಪ್ರಸ್ತುತ ಚಾಲ್ತಿಯಲ್ಲಿರುವ ಉದ್ಯಾನ ಎಕ್ಸ್ಪ್ರೆಸ್ನಂತಹ ಸಾಂಪ್ರದಾಯಿಕ ರೈಲುಗಳು ಬೆಂಗಳೂರು ಮತ್ತು ಮುಂಬೈ ನಡುವಿನ ಪ್ರಯಾಣಕ್ಕೆ ಸುಮಾರು 22 ರಿಂದ 24 ಗಂಟೆಗಳನ್ನು ತೆಗೆದುಕೊಳ್ಳುತ್ತವೆ. ಆದರೆ, ಅತ್ಯಾಧುನಿಕ ತಂತ್ರಜ್ಞಾನದ ವಂದೇ ಭಾರತ್ ಸ್ಲೀಪರ್ ರೈಲು ಈ ದೂರಾಂತರವನ್ನು ಕೇವಲ 15 ರಿಂದ 16 ಗಂಟೆಗಳಲ್ಲಿ ಕ್ರಮಿಸಲಿದೆ. ಇದನ್ನೂ ಓದಿ: ರೈಲು ಪ್ರಯಾಣದ ವೇಳೆ ಜೋರಾಗಿ ಹಾಡು ಹಾಕಿದ್ರೆ 6 ತಿಂಗಳು ಜೈಲು
ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ನಿಂದ (SMVT) ಈ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರ ಆರಂಭಿಸಲಿದೆ ಎಂದು ಮೂಲಗಳು ತಿಳಿಸಿವೆ. ಕನ್ನಡ ರಾಜ್ಯೋತ್ಸವದಂದೇ ಈ ಅತ್ಯಾಧುನಿಕ, ಸುಖಕರ ಸೌಲಭ್ಯಗಳುಳ್ಳ ಸ್ಲೀಪರ್ ರೈಲಿಗೆ ಹಸಿರು ನಿಶಾನೆ ತೋರಲು ರೈಲ್ವೆ ಇಲಾಖೆ ಸಿದ್ಧತೆ ನಡೆಸುತ್ತಿದ್ದು, ದಿನದಿನಕ್ಕೂ ಪ್ರಯಾಣಿಕರಲ್ಲಿ ಕುತೂಹಲ ಹೆಚ್ಚುತ್ತಿದೆ.
