ಚೆನ್ನೈ: ರೈಲು ಪ್ರಯಾಣದ ವೇಳೆ ಮೊಬೈಲ್ನಲ್ಲಿ (Mobile Phone) ಜೋರಾಗಿ ಮಾತನಾಡುವುದು ಅಥವಾ ಸ್ಪೀಕರ್ಗಳಲ್ಲಿ ಹಾಡು, ವಿಡಿಯೋಗಳನ್ನು ಹಾಕಿ ಸಹಪ್ರಯಾಣಿಕರ ನಿದ್ದೆ ಮತ್ತು ನೆಮ್ಮದಿಗೆ ಭಂಗ ತಂದರೆ ಇನ್ಮುಂದೆ ಜೈಲು ಪಾಲಾಗಬೇಕಾಗಬಹುದು ಅಥವಾ ಭಾರಿ ದಂಡ ತೆರಬೇಕಾಗುತ್ತದೆ. ರೈಲಿನಲ್ಲಿ ಇಂತಹ ಉಪದ್ರವ ನೀಡುವ ಪ್ರಯಾಣಿಕರಿಗೆ ಬಿಸಿ ಮುಟ್ಟಿಸಲು ದಕ್ಷಿಣ ರೈಲ್ವೆ (Southern Railway) ಮಹತ್ವದ ಹೆಜ್ಜೆಯಿಟ್ಟಿದೆ.
ರೈಲಿನಲ್ಲಿ ಪ್ರಯಾಣಿಸುವಾಗ ಹಾಗೂ ರೈಲ್ವೆ ಆವರಣದಲ್ಲಿ ಸ್ಪೀಕರ್ ಮೂಲಕ ಆಡಿಯೋ-ವಿಡಿಯೋಗಳನ್ನು(Audio-Video) ಪ್ಲೇ ಮಾಡುವುದು ಮತ್ತು ಜೋರಾಗಿ ಫೋನ್ನಲ್ಲಿ ಮಾತನಾಡುವುದನ್ನು ತಡೆಯಲು ಸೂಕ್ತ ಜಾಗೃತಿ ಮೂಡಿಸುವಂತೆ ಚೆನ್ನೈನಲ್ಲಿರುವ ದಕ್ಷಿಣ ರೈಲ್ವೆ ಪ್ರಧಾನ ಕಚೇರಿಯು ತನ್ನ ಎಲ್ಲಾ ವಿಭಾಗಗಳಿಗೆ ಅಕ್ಟೋಬರ್ 6ರಂದು ಕಟ್ಟುನಿಟ್ಟಿನ ಸುತ್ತೋಲೆ ಹೊರಡಿಸಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ರೈಲ್ವೆ ಕಾಯ್ದೆಯ ಸೆಕ್ಷನ್ 145 ರ ಅಡಿಯಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.
ರೈಲ್ವೆ ಆವರಣದಲ್ಲಿ ಅಥವಾ ಪ್ರಯಾಣದ ವೇಳೆ ಜೋರಾಗಿ ಮಾತನಾಡುವುದು ಮತ್ತು ಸ್ಪೀಕರ್ನಲ್ಲಿ ವಿಡಿಯೋ/ಆಡಿಯೋ ಹಾಕುವುದು ಸಹಪ್ರಯಾಣಿಕರಿಗೆ ತೊಂದರೆ ಉಂಟುಮಾಡುತ್ತದೆ. ಇಂತಹ ಕೃತ್ಯಗಳು ರೈಲ್ವೆ ಕಾಯ್ದೆಯ ಸೆಕ್ಷನ್ 145ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದ್ದು, ತಪ್ಪಿತಸ್ಥರಿಗೆ 1,000 ರೂ. ವರೆಗೆ ದಂಡ ಅಥವಾ 6 ತಿಂಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು. ಪ್ರಯಾಣಿಕರು ಕಡ್ಡಾಯವಾಗಿ ಇಯರ್ಫೋನ್ (Earphones) ಬಳಸಬೇಕು ಎಂದು ರೈಲು ನಿಲ್ದಾಣಗಳು ಮತ್ತು ರೈಲುಗಳಲ್ಲಿ ಪ್ರಕಟಣೆ ಹೊರಡಿಸಲು ಸೂಚಿಸಲಾಗಿದೆ. ಇದನ್ನೂ ಓದಿ: ಸಿಜೆಪಿ ಪ್ರತಿಭಟನೆಯಲ್ಲಿ ಹಿಂದೂ ಧರ್ಮದ ಅವಹೇಳನ – 300 ಜಿರಳೆಗಳ ವಿರುದ್ಧ ಎಫ್ಐಆರ್
ಸ್ಥಳೀಯ ಭಾಷೆಗಳು, ಹಿಂದಿ ಹಾಗೂ ಇಂಗ್ಲಿಷ್ನಲ್ಲಿ ಧ್ವನಿವರ್ಧಕಗಳ ಮೂಲಕ ಪ್ರಯಾಣಿಕರಿಗೆ ಈ ಬಗ್ಗೆ ನಿರಂತರ ಜಾಗೃತಿ ಮೂಡಿಸಲು ಮತ್ತು ರೈಲು ಬೋಗಿಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲು ನಿರ್ದೇಶನ ನೀಡಲಾಗಿದೆ. ಟಿಕೆಟ್ ಪರೀಕ್ಷಕ (TTE) ಅಥವಾ ಅದಕ್ಕಿಂತ ಉನ್ನತ ದರ್ಜೆಯ ವಾಣಿಜ್ಯ ಸಿಬ್ಬಂದಿಗೆ ಇಂತಹ ಕಿರಿಕಿರಿ ಉಂಟುಮಾಡುವ ಪ್ರಯಾಣಿಕರ ಮೇಲೆ ಸ್ಥಳದಲ್ಲೇ 1,000 ರೂ. ದಂಡ ವಿಧಿಸುವ ಅಧಿಕಾರ ನೀಡಲಾಗಿದೆ.
ಹಿಂದೆ 2012ರಲ್ಲೇ ರೈಲ್ವೆ ಮಂಡಳಿಯು ಎಸಿ ಬೋಗಿಗಳಲ್ಲಿ ಅತಿಯಾಗಿ ಫೋನ್ ಮಾತನಾಡುವುದು, ಕಿರಿಕಿರಿ ಉಂಟುಮಾಡುವ ರಿಂಗ್ಟೋನ್ಗಳ ಬಳಕೆಯನ್ನು ನಿಯಂತ್ರಿಸಲು ಮೊಬೈಲ್ಗಳನ್ನು ಸೈಲೆಂಟ್ ಅಥವಾ ವೈಬ್ರೇಷನ್ ಮೋಡ್ನಲ್ಲಿ ಇಡುವಂತೆ ಸೂಚಿಸಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಎಲ್ಲರಿಗೂ ಸುಲಭವಾಗಿ ಮೊಬೈಲ್ ಇಂಟರ್ನೆಟ್ ಲಭ್ಯವಿರುವುದರಿಂದ, ಸಾರ್ವಜನಿಕ ಸ್ಥಳಗಳಲ್ಲಿ ಸ್ಪೀಕರ್ ಹಾಕಿ ವಿಡಿಯೋ ನೋಡುವುದು ವ್ಯಾಪಕವಾಗಿದೆ. ಇದು ಇತರ ಪ್ರಯಾಣಿಕರ ನೆಮ್ಮದಿಗೆ ಭಂಗ ತರುತ್ತಿರುವ ಹಿನ್ನೆಲೆಯಲ್ಲಿ ಈ ಹೊಸ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ.
ದಕ್ಷಿಣ ರೈಲ್ವೆಯ ಚೆನ್ನೈ, ಪಾಲಕ್ಕಾಡ್, ತಿರುವನಂತಪುರಂ, ತಿರುಚಿರಾಪಳ್ಳಿ, ಮಧುರೈ ಮತ್ತು ಸೇಲಂ ವಿಭಾಗಗಳ ಹಿರಿಯ ವಾಣಿಜ್ಯ ವ್ಯವಸ್ಥಾಪಕರಿಗೆ ಈ ಆದೇಶ ರವಾನೆಯಾಗಿದ್ದು, ಸಹಪ್ರಯಾಣಿಕರ ಆರಾಮದಾಯಕ ಮತ್ತು ನೆಮ್ಮದಿಯ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ.
