ಸಾಯಿಬಾಬಾ ಅವರ ಅನುಯಾಯಿ, (Premaroopa Sai Paadananda) ಅವಧೂತ ಸಾಯಿ ಪಾದಾನಂದ ರಾಧಾಕೃಷ್ಣ ಸ್ವಾಮೀಜಿ ಅವರ ಜೀವನಚರಿತ್ರೆಯನ್ನು ಆಧರಿಸಿದ ‘ಪ್ರೇಮರೂಪ ಸಾಯಿಪಾದಾನಂದ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಸ್ವಾಮೀಜಿ ಅವರ ಜೀವನ, ಆಧ್ಯಾತ್ಮಿಕ ಸಂದೇಶ ಹಾಗೂ ಸಾಯಿಬಾಬಾ ಅವರ ತತ್ವಗಳ ಪ್ರಚಾರವನ್ನು ಈ ಸಿನಿಮಾ ಮೂಲಕ ಪ್ರೇಕ್ಷಕರಿಗೆ ತಲುಪಿಸುವ ಪ್ರಯತ್ನ ಮಾಡಲಾಗಿದೆ.
ಅಪಾರ ಸಂಖ್ಯೆಯ ಶಿಷ್ಯರನ್ನು ಹೊಂದಿದ್ದ ರಾಧಾಕೃಷ್ಣ ಸ್ವಾಮೀಜಿ ಅವರ ಶಿಷ್ಯರಾದ ಟಿ. ಕೃಷ್ಣಕುಮಾರ್, ಖ್ಯಾತ ನಿರ್ಮಾಣ ಸಂಸ್ಥೆ ಸತ್ಯಜ್ಯೋತಿ ಫಿಲ್ಮ್ಸ್ ಸಹಕಾರದೊಂದಿಗೆ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಬಿ. ನಿತ್ಯಾನಂದ ಚಿತ್ರಕ್ಕೆ ನಿರ್ದೇಶನ ಮಾಡಿದ್ದು, ಆನಂದ್ ಮೌಳಿ ಅವರು ಸ್ವಾಮೀಜಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಅಭಿಷೇಕ್ ರಾಜು ಸಂಗೀತ ನಿರ್ದೇಶನದ ಈ ಚಿತ್ರವನ್ನು ತಮಿಳುನಾಡು, ಬೆಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಚಿತ್ರೀಕರಿಸಲಾಗಿದೆ. ಕನ್ನಡ, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಸಿನಿಮಾ ಮೂಡಿಬಂದಿದೆ.
ಸಿನಿಮಾದ ಪ್ರದರ್ಶನ ಹಾಗೂ ಸುದ್ದಿಗೋಷ್ಠಿಯಲ್ಲಿ ಸಂಸದ ಡಾ. ಸಿ.ಎನ್. ಮಂಜುನಾಥ್ ಭಾಗವಹಿಸಿ ಚಿತ್ರತಂಡಕ್ಕೆ ಶುಭಕೋರಿದರು. ಕರ್ನಾಟಕದಲ್ಲಿ ಸಾಯಿಬಾಬಾ ಅವರ ತತ್ವಗಳನ್ನು ಪ್ರಚಾರ ಮಾಡಿದ ರಾಧಾಕೃಷ್ಣ ಸ್ವಾಮೀಜಿ ಅವರ ಜೀವನದ ಸಂದೇಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.ಇದನ್ನೂ ಓದಿ: ಗ್ಯಾಸ್ ಸಿಲಿಂಡರ್ ಸ್ಫೋಟ – 6 ಮಂದಿಗೆ ಗಂಭೀರ ಗಾಯ
ಸಾಯಿಬಾಬಾ ಅವರ ತತ್ವಗಳನ್ನು ಜನರಿಗೆ ತಲುಪಿಸಿದ ಕೀರ್ತಿ ರಾಧಾಕೃಷ್ಣ ಸ್ವಾಮೀಜಿ ಅವರಿಗೆ ಸಲ್ಲುತ್ತದೆ. ಈ ಸಿನಿಮಾ ನೋಡುವ ಮೂಲಕ ಕಲಿಯಲು ಬಹಳಷ್ಟಿದೆ ಎಂದು ಡಾ. ಸಿ.ಎನ್. ಮಂಜುನಾಥ್ ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ರಾಧಾಕೃಷ್ಣ ಸ್ವಾಮೀಜಿ ಅವರೊಂದಿಗಿನ ಒಡನಾಟವನ್ನು ನೆನಪಿಸಿಕೊಂಡ ನಿರ್ಮಾಪಕ ಟಿ. ಕೃಷ್ಣಕುಮಾರ್ ಭಾವುಕರಾಗಿ ಕಣ್ಣೀರಿಟ್ಟರು. ಕಾರ್ಯಕ್ರಮದಲ್ಲಿ ಸಾಯಿ ಆಧ್ಯಾತ್ಮಿಕ ಕೇಂದ್ರದ ಅಧ್ಯಕ್ಷ ಶ್ರೀಚಂದ್ ರಾಜ್ ಪಾಲ್, ಕನ್ನಡ ಸಾಯಿ ಸಚ್ಚರಿತೆಯ ಬರಹಗಾರ ಅನಂತ ರಾಮು ಸೇರಿದಂತೆ ಹಲವರು ಭಾಗವಹಿಸಿದ್ದರು.ಇದನ್ನೂ ಓದಿ: ಶಿಕಾರಿಪುರದಲ್ಲಿ ಯುವ ಇಂಜಿನಿಯರ್ ನೇಣಿಗೆ ಶರಣು
