ಬೆಂಗಳೂರು: ತುಂಗಭದ್ರಾ ಅಣೆಕಟ್ಟೆಯಿಂದ (Tungabhadra Dam) ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಿಗೆ ಕುಡಿಯಲು ಮತ್ತು ನಿಂತ ಬೆಳೆಗಳಿಗೆ ನ.20ರವರೆಗೆ ನೀರು ಒದಗಿಸಲು ತೀರ್ಮಾನಿಸಲಾಗಿದೆ ಎಂದು ಸಚಿವ ಹಾಗೂ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರು ಶಿವರಾಜ್. ಎಸ್.ತಂಗಡಗಿಯವರು (Shivaraj Tangadagi) ಹೇಳಿದ್ದಾರೆ.
ವಿಕಾಸಸೌಧದಲ್ಲಿ ಸೋಮವಾರ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ಬಳಿಕ ಮಾತನಾಡಿದ ಸಚಿವರು, ಪ್ರಸ್ತುತ ಜಲಾಶಯದಲ್ಲಿ ನೀರಿನ 53 ಟಿಎಂಸಿ ಇದ್ದು, ಇದರಲ್ಲಿ ಇದರಲ್ಲಿ ಡೆಡ್ ಸ್ಟೋರೆಜ್ 2 ಟಿಎಂಸಿ, ಅವಿಯಾಗುವಿಕೆ 3.50 ಟಿಎಂಸಿ, ಈ ಪೈಕಿ ರಾಜ್ಯದ ಪಾಲು 25.25 ಟಿಎಂಸಿ, ಆಂಧ್ರಪ್ರದೇಶ 18.50 ಟಿಎಂಸಿ, ತೆಲಂಗಾಣದ ಪಾಲು 1.50 ಟಿಎಂಸಿ ಇದೆ. ಈ ಹಿನ್ನೆಲೆಯಲ್ಲಿ ಜಲಾಶಯದಲ್ಲಿನ ನೀರಿನ ಲಭ್ಯತೆ ಆಧಾರಿಸಿ ನಾಲ್ಕು ಜಿಲ್ಲೆಗಳಿಗೆ ಕುಡಿಯುವ ನೀರು ಹಾಗೂ ನಿಂತ ಬೆಳೆಗಳಿಗೆ ನೀರನ್ನು ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಕೆಆರ್ಎಸ್ಗೆ ಹೆಚ್ಚಿದ ಒಳಹರಿವು – ಮಂಡ್ಯದ ರೈತರಲ್ಲಿ ಹರ್ಷ
ತುಂಗಭದ್ರಾ ಎಡದಂಡೆ ಮುಖ್ಯಕಾಲುವೆ ಮೂಲಕ ಅ.21ರಿಂದ ನ.20ರವರೆಗೆ 3800 ಕ್ಯೂಸೆಕ್ಸ್ ನಂತೆ ಪ್ರತಿ ವಿಭಾಗದಿಂದ 200 ಕ್ಯೂಸೆಕ್ ನಂತೆ ಉಳಿತಾಯ ಮಾಡಿ ಗಣೇಕಲ್ ಜಲಾಶಯಕ್ಕೆ ನೀರು ಒದಗಿಸುವುದು. ತುಂಗಭದ್ರಾ ಬಲದಂಡೆ ಮೇಲ್ಮಟ್ಟದ ಕಾಲುವೆಗೆ ಅ.21ರಿಂದ ಅ.24ರವರೆಗೆ 1000 ಕ್ಯೂಸೆಕ್ಸ್ ನಂತೆ, ಅ.25ರಿಂದ ಅ.31ರವರೆಗೆ ನೀರು ನಿಲುಗಡೆ, ನ.1ರಿಂದ ನ.20ರವರೆಗೆ 20 ದಿನಗಳಿಗೆ 1280 ಕ್ಯೂಸೆಕ್ ನಂತೆ ನೀರು ಹರಿಸಲಾಗುವುದು ಎಂದು ತಿಳಿಸಿದರು.
ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಗೆ ಅ.21ರಿಂದ ನ.20ರವರೆಗೆ 650 ಕ್ಯೂಸೆಕ್ ನಂತೆ, ರಾಯವಸವಣ್ಣ ಕಾಲುವೆಗೆ 2026, ಅ.21ರಿಂದ 2027ರ ಮೇ 31ರವರೆಗೆ 180 ಕ್ಯೂಸೆಕ್ ನಂತೆ ತಿಂಗಳಲ್ಲಿ 10 ದಿನ ನಿಲುಗಡೆ ಮಾಡಿ ಹತ್ತು ದಿನ ನೀರು ಹರಿಸಲಾಗುವುದು.ವಿಜಯನಗರ ಎಡದಂಡೆ ಕಾಲುವೆಗೆ ಮೇ 5ರತನಕ ಎಂದು ಇರುವುದನ್ನು ಮೇ 10, 2027ರವರೆಗೆ 60 ಕ್ಯೂಸೆಕ್ ನಂತೆ ನೀರಿನ ಲಭ್ಯತೆ ಆಧಾರದ ಮೇಲೆ ನೀರು ಹರಿಸಲಾಗುವುದು ಎಂದು ವಿವರಿಸಿದರು.
ರಾಜ್ಯದಲ್ಲಿ ಬರಗಾಲ ಎದುರಾಗಿದ್ದು, ಜನ-ಜಾನುವಾರುಗಳಿಗೆ ಕುಡಿಯುವ ನೀರು ನೀಡುವುದು ಸರ್ಕಾರದ ಮೊದಲ ಆದ್ಯತೆಯಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಬೇಸಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ನಾಲ್ಕು ಜಿಲ್ಲೆಗಳಿಗೆ ನೀರು ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಮಾಜಿ ಸಚಿವ ಬೋಸರಾಜ್, ಬಿ.ನಾಗೇಂದ್ರ, ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ್, ಶಿವರಾಜ್ ಪಾಟೀಲ್, ನಾಗರಾಜ್, ಹಂಪನಗೌಡ ಬಾದರ್ಲಿ, ಗಣೇಶ್, ಬಸವರಾಜ್ ತೂರ್ವಿಹಾಳ್, ಬಸನಗೌಡ ಬಾದರ್ಲಿ, ನಾಲ್ಕು ಜಿಲ್ಲೆ ಜಿಲ್ಲಾಧಿಕಾರಿಗಳು ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳು ಹಾಜರಿದ್ದರು. ಇದನ್ನೂ ಓದಿ: ಒಂದು ಮನೆಗೆ ನೀರು ಕೊಡಲು ಇಡೀ ರಸ್ತೆಯನ್ನೇ ಅಗೆದ ನಗರಸಭೆ ಸಿಬ್ಬಂದಿ!
