ರಾಯಚೂರು: ಜಿಲ್ಲೆಯ ಮಾನ್ವಿ (Manvi) ತಾಲೂಕಿನ ಕಪಗಲ್ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿದ ಈರುಳ್ಳಿ ಸಾಗಣೆ ಲಾರಿಯೊಂದು ರಸ್ತೆ ಬದಿಯ ಗುಂಡಿಗೆ ಉರುಳಿ ಬಿದ್ದಿದೆ. ಗ್ರಾಮದ ತಿರುವಿನಲ್ಲಿ ಸಂಭವಿಸಿದ ಈ ಅಪಘಾತದಲ್ಲಿ ಲಾರಿ ಚಾಲಕ ಮತ್ತು ಕ್ಲೀನರ್ ಗಾಯಗೊಂಡಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಆದರೆ, ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಜನರ ವರ್ತನೆ ಮಾತ್ರ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಗಾಯಗೊಂಡ ಚಾಲಕ ಮತ್ತು ಕ್ಲೀನರ್ಗೆ ನೆರವಾಗುವ ಬದಲು, ಅಲ್ಲಿದ್ದವರು ಈರುಳ್ಳಿ (Onion) ಚೀಲಗಳನ್ನ ಹೊತ್ತೊಯ್ಯಲು ಮುಗಿಬಿದ್ದಿದ್ದಾರೆ. ಮಾನವೀಯತೆಯನ್ನೇ ಮರೆತು, ಗಾಯಾಳುಗಳ ನೆರವಿಗೆ ಧಾವಿಸದೆ ಈರುಳ್ಳಿ ದೋಚುವ ಧಾವಂತಕ್ಕೆ ಬಿದ್ದಿದ್ದಾರೆ.

ಕೇವಲ 15 ರಿಂದ 20 ನಿಮಿಷಗಳಲ್ಲೇ ದೊಡ್ಡ ಲಾರಿಯಲ್ಲಿದ್ದ ಸಂಪೂರ್ಣ ಈರುಳ್ಳಿ ಲೋಡ್ ಖಾಲಿಯಾಗಿದೆ. ಜನರು ಚೀಲಗಳಲ್ಲಿ ಈರುಳ್ಳಿ ತುಂಬಿಕೊಂಡು ಹೋಗಿದ್ದು, ಅಪಘಾತದ ಸ್ಥಳದಲ್ಲಿ ಮಾನವೀಯತೆಗಿಂತ ಈರುಳ್ಳಿಯೇ ಮುಖ್ಯವಾದಂತಾಗಿದೆ.
ಇನ್ನು, ಗಾಯಗೊಂಡ ಚಾಲಕ ಮತ್ತು ಕ್ಲೀನರ್ರನ್ನು ಆಸ್ಪತ್ರೆಗೆ ಸಾಗಿಸಲು ಕನಿಷ್ಠ ಸಹಾಯವನ್ನೂ ಮಾಡದೆ ಈರುಳ್ಳಿ ಹೊತ್ತೊಯ್ದಿರುವುದು ಸಾರ್ವಜನಿಕರ ವರ್ತನೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
