ದಾವಣಗೆರೆ: ನಗರದ (Davanagere) ಬಾಡಾ ಕ್ರಾಸ್ ಬಳಿ ಅ.16 ರಂದು ಸಂಭವಿಸಿದ್ದ ಭೀಕರ ಕಾರು (Car) ಅಪಘಾತದಲ್ಲಿ (Accident) ಅಪ್ರಾಪ್ತ ಬಾಲಕರು ಪ್ರಾಣ ಕಳೆದುಕೊಂಡಿರುವ ಘಟನೆ ಇಡೀ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದೆ.
ಈ ಅಪಘಾತದಲ್ಲಿ ಸಾವನ್ನಪ್ಪಿದ ಬಾಲಕ ರಾಮ್ ತೇಜ್ನ ತಂದೆ ʻಪಬ್ಲಿಕ್ ಟಿವಿʼ ಜೊತೆ ಮಾತನಾಡಿದ್ದು, ಮಗನನ್ನು ನೆನೆದು ಕಣ್ಣೀರಿಟ್ಟಿದ್ದಾರೆ. ದಸರಾ ಪೂಜೆಗಾಗಿ ದೇವಸ್ಥಾನಕ್ಕೆ ಬರುವಂತೆ ಮಗನನ್ನು ಕರೆದಿದ್ದೆ. ಆದರೆ ಆತ ಬರಲಿಲ್ಲ. ಒಂದು ವೇಳೆ ದೇವಸ್ಥಾನಕ್ಕೆ ಬಂದಿದ್ದರೆ ಈ ದೊಡ್ಡ ಅಪಘಾತ ತಪ್ಪುತ್ತಿತ್ತು. ಇರೋ ಒಬ್ಬ ಮಗನನ್ನು ಕಳೆದುಕೊಂಡು ಶೋಕ ಅನುಭವಿಸುವಂತಾಗಿದೆ ಎಂದು ಭಾವುಕರಾಗಿದ್ದಾರೆ. ಇದನ್ನೂ ಓದಿ: CNG ಟ್ರಕ್ಗೆ ಕಾರು ಡಿಕ್ಕಿ – ಬಾಲಕ ಸ್ಥಳದಲ್ಲೇ ಸಾವು, ಮೂವರು ಅಪ್ರಾಪ್ತರಿಗೆ ಗಂಭೀರ ಗಾಯ

ಪುತ್ರ ಶೋಕಂ ನಿರಂತರ ಎನ್ನುವಂತೆ ಈ ನೋವು ಜೀವನವಿಡೀ ಕಾಡಲಿದೆ. ಇಂದಿನ ದಿನಗಳಲ್ಲಿ ಮಕ್ಕಳು ತಂದೆ-ತಾಯಿಗಳ ಮಾತು ಕೇಳುತ್ತಿಲ್ಲ. ತಂದೆ-ತಾಯಿ ಹಾಗೂ ದೊಡ್ಡವರು ಹೇಳುವುದು ನಿಮ್ಮ ಒಳ್ಳೆಯದಕ್ಕೆ ಮಾತ್ರ. ಆದರೆ ಅದನ್ನು ಧಿಕ್ಕರಿಸಿ ಹೋಗಿ ಹೀಗೆ ನೋವು ತಂದುಕೊಳ್ಳಬೇಡಿ. ನಮಗೆ ಬಂದ ದುಸ್ಥಿತಿ ಬೇರೆ ಯಾರಿಗೂ ಬರಬಾರದು. ಮಕ್ಕಳು ಚೆನ್ನಾಗಿ ಓದಿ, ತಂದೆ-ತಾಯಿಗೆ ಆಸರೆಯಾಗಿ ಬಾಳಿ ಎಂದು ಯುವಜನತೆಗೆ ಮನವಿ ಮಾಡಿದ್ದಾರೆ.
ಸಿಎನ್ಜಿ ಸಿಲಿಂಡರ್ ತುಂಬಿದ್ದ ಟ್ರಕ್ಗೆ ಕಾರು ಡಿಕ್ಕಿಯಾಗಿ ಸೃಜನ್ (16) ಹಾಗೂ ರಾಮ್ ತೇಜ್ ರೆಡ್ಡಿ (17) ಸಾವನ್ನಪ್ಪಿದ್ದರು. ಈ ಅಪಘಾತದಲ್ಲಿ ಅಧಿತ್ಯ (16) ಗಂಭೀರವಾಗಿ ಗಾಯಗೊಂಡಿದ್ದು, ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ಆಸ್ಪತ್ರೆಯ ಮುಂಭಾಗ ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನೂ ಓದಿ: ರಾಯಚೂರಿನಲ್ಲಿ ಲಾರಿ ಪಲ್ಟಿ – 15 ನಿಮಿಷದಲ್ಲಿ ಇಡೀ ಲಾರಿ ಈರುಳ್ಳಿ ದೋಚಿದ ಜನ!

ಮೃತರ ಸ್ನೇಹಿತರಿಗೆ ಬುದ್ಧಿ ಹೇಳಿದ ಪಿಎಸ್ಐ
ಇದೇ ವೇಳೆ, ಮೃತನ ಸ್ನೇಹಿತರಿಗೆ ಸಂಚಾರಿ ಠಾಣೆ ಪಿಎಸ್ಐ ಶೈಲಜಾ ಅವರು ತಿಳುವಳಿಕೆ ಹೇಳಿದ್ದಾರೆ. ತಂದೆ ತಾಯಿ ಮಾತು ಕೇಳಿದ್ದರೆ ಇವರಿಗೆ ಈ ಸ್ಥಿತಿ ಬರುತ್ತಿರಲಿಲ್ಲ. ಮಗನನ್ನು ಕಳೆದುಕೊಂಡು ಜೀವನ ಪರ್ಯಂತ ತಂದೆ ತಾಯಿ ನೋವು ಅನುಭವಿಸಬೇಕಿದೆ. ಎಲ್ಲರೂ ಸಂಚಾರ ನಿಯಮ ಪಾಲನೆ ಮಾಡಿದರೆ ಯಾವುದೇ ಅವಘಡ ಅಗೋದಿಲ್ಲ. ಬಾಳಿ ಬದುಕಬೇಕಾದ ವಯಸ್ಸಿನಲ್ಲಿ ಸಾವನ್ನಪ್ಪಿ ತಂದೆ ತಾಯಿಗೆ ನೋವು ಕೊಡುವುದು ಎಷ್ಟು ಸರಿ ಎಂದು ಬುದ್ದಿಮಾತು ಹೇಳಿದ್ದಾರೆ.
