– ಪ್ರತಿಭಟನೆಗಳಿಗೆ ದೆಹಲಿ ಹೊರಗೆ ಶಾಶ್ವತ ಸ್ಥಳ ನಿಗದಿಪಡಿಸುವಂತೆ ವರ್ತಕರ ಆಗ್ರಹ
ನವದೆಹಲಿ: ಅಕ್ಟೋಬರ್ನಲ್ಲಿ ನಿರಂತರ ಪ್ರತಿಭಟನೆಗಳು ಹಾಗೂ ನಿರ್ಬಂಧಗಳಿಂದ ದೆಹಲಿಯ ವ್ಯಾಪಾರ ವಹಿವಾಟಿಗೆ ಭಾರಿ ಹೊಡೆತ ಬಿದ್ದಿದೆ. ಇದುವರೆಗೆ 3,000 ಕೋಟಿ ರೂ. ನಷ್ಟವಾಗಿದೆ ಎಂದು ಚೇಂಬರ್ ಆಫ್ ಟ್ರೇಡ್ ಅಂಡ್ ಇಂಡಸ್ಟ್ರಿ (CTI) ಅಂದಾಜಿಸಿದೆ.
ಅಕ್ಟೋಬರ್ 10ರಂದು ನಡೆದ ಪ್ರತಿಭಟನೆಯಿಂದ 2,000 ಕೋಟಿ ರೂ. ನಷ್ಟವಾಗಿದ್ದು, ಅಕ್ಟೋಬರ್ 13 ರಿಂದ 16ರ ವರೆಗಿನ ನಿರ್ಬಂಧಗಳಿಂದ ಮತ್ತಷ್ಟು 1,000 ಕೋಟಿ ರೂ. ನಷ್ಟವಾಗಿದೆ ಎಂದು CTI ಹೇಳಿದೆ.

ನಷ್ಟ 10,000 ಕೋಟಿ ರೂ. ದಾಟುವ ಆತಂಕ
ದೀಪಾವಳಿವರೆಗೂ ಪ್ರತಿಭಟನೆಗಳು ಮುಂದುವರಿದರೆ ವ್ಯಾಪಾರ ನಷ್ಟ 10,000 ಕೋಟಿ ರೂ. ದಾಟುವ ಆತಂಕವಿದೆ. ನವರಾತ್ರಿ, ರಾಮಲೀಲೆ ಮತ್ತು ದೀಪಾವಳಿ ವ್ಯಾಪಾರದ ಮೇಲೂ ಪ್ರತಿಭಟನೆಗಳು ಭಾರಿ ಪರಿಣಾಮ ಬೀರಿವೆ ಎಂದು ಚೇಂಬರ್ ಆಫ್ ಟ್ರೇಡ್ ಅಂಡ್ ಇಂಡಸ್ಟ್ರಿ ತಿಳಿಸಿದೆ.
ದೆಹಲಿಯ 700ಕ್ಕೂ ಹೆಚ್ಚು ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರಿದ್ದು, ಸಗಟು ವ್ಯಾಪಾರ, ಸಾರಿಗೆ, ಹೋಟೆಲ್ ಹಾಗೂ ಸೇವಾ ವಲಯಗಳು ನಷ್ಟ ಅನುಭವಿಸಿವೆ. ಪ್ರತಿಭಟನೆಗಳ ಹಿನ್ನೆಲೆ ಹೊರ ರಾಜ್ಯಗಳಿಂದ ದೆಹಲಿಗೆ ಬರುತ್ತಿದ್ದ 3 ರಿಂದ 4 ಲಕ್ಷ ಸಗಟು ಖರೀದಿದಾರರು ಭೇಟಿ ನೀಡಿಲ್ಲ ಎಂದು ಆರೋಪಿಸಿದೆ.
ದೆಹಲಿಯ ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿ ಪ್ರತಿಭಟನೆಗಳಿಗೆ ನಿರ್ಬಂಧ ವಿಧಿಸುವಂತೆ ಚೇಂಬರ್ ಆಫ್ ಟ್ರೇಡ್ ಅಂಡ್ ಇಂಡಸ್ಟ್ರಿ ಸರ್ಕಾರವನ್ನು ಆಗ್ರಹಿಸಿದೆ. ನಷ್ಟ ಅನುಭವಿಸಿರುವ ವ್ಯಾಪಾರಿಗಳಿಗೆ ಪರಿಹಾರ ಪ್ಯಾಕೇಜ್ ಘೋಷಿಸುವುದರ ಜೊತೆಗೆ GST ಹಾಗೂ ವಿದ್ಯುತ್ ಮತ್ತು ನೀರಿನ ಬಿಲ್ಗಳಲ್ಲಿ ರಿಯಾಯಿತಿ ನೀಡುವಂತೆಯೂ ಒತ್ತಾಯಿಸಿದೆ.
ಪ್ರತಿಭಟನೆಗಳು ಮುಂದುವರಿದರೆ ವ್ಯಾಪಾರ ವಲಯದ ನಷ್ಟ ಮತ್ತಷ್ಟು ಹೆಚ್ಚಾಗಬಹುದು ಎಂದು ಚೇಂಬರ್ ಆಫ್ ಟ್ರೇಡ್ ಅಂಡ್ ಇಂಡಸ್ಟ್ರಿ ಅಧ್ಯಕ್ಷ ಬೃಜೇಶ್ ಗೋಯಲ್ ಎಚ್ಚರಿಕೆ ನೀಡಿದ್ದಾರೆ.
CTI ಬೇಡಿಕೆಗಳೇನು?
1. ದೀಪಾವಳಿವರೆಗೆ ಮಧ್ಯ ಮತ್ತು ನವದೆಹಲಿಯಲ್ಲಿ ಪ್ರತಿಭಟನೆಗಳಿಗೆ ನಿರ್ಬಂಧ ವಿಧಿಸಬೇಕು.
2. ಪ್ರತಿಭಟನೆಗಳಿಗೆ ಹೊರವಲಯದಲ್ಲಿ ಶಾಶ್ವತ ಸ್ಥಳ ನಿಗದಿಪಡಿಸಬೇಕು.
3. ನಷ್ಟ ಅನುಭವಿಸಿದ ವ್ಯಾಪಾರಿಗಳಿಗೆ ಪರಿಹಾರ ನೀಡಬೇಕು.
4. ಮಾರುಕಟ್ಟೆಗಳನ್ನು ಮುಚ್ಚುವಂತೆ ವ್ಯಾಪಾರಿಗಳ ಮೇಲೆ ಒತ್ತಡ ಹೇರದೆ ಭದ್ರತೆ ಒದಗಿಸಬೇಕು.
