ಉಡುಪಿ: ಐದನೇ ವರ್ಷದ ಉಚ್ಚಿಲ ದಸರಾ ಲಲಿತ ಪಂಚಮಿಯ ಸಂಭ್ರಮ ಸಂದರ್ಭದಲ್ಲಿ ವೈಭವವನ್ನು ಕಾಣಲಿದ್ದು, ಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ.
ಉಚ್ಚಿಲ ನವರಾತ್ರಿಯು ಉಡುಪಿ ಜಿಲ್ಲೆಯ ಜನರಿಗೆ ಸಂಭ್ರಮ ದುಪ್ಪಟ್ಟು ಮಾಡಿದೆ. ಕಾಪು ತಾಲೂಕಿನ ಉಚ್ಚಿಲ ಮಹಾಲಕ್ಷ್ಮಿ ದೇವಾಲಯದಲ್ಲಿ (Uchila Mahalakshmi Temple) ಮೊಗವೀರ ಮುಖಂಡ ಹಾಗೂ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ನಾಡೋಜ ಡಾ. ಜಿ.ಶಂಕರ್ ನೇತೃತ್ವದಲ್ಲಿ ಐದು ವರ್ಷಗಳ ಹಿಂದೆ ನವರಾತ್ರಿ ಹಿನ್ನೆಲೆಯಲ್ಲಿ ದಸರಾ ಆಚರಣೆ ಶುರುವಾದ ದಿನದಿಂದ ಉಚ್ಚಿಲ ಕ್ಷೇತ್ರವಾಗಿ ಮಾರ್ಪಟ್ಟಿತ್ತು. ನಾಲ್ಕು ವರ್ಷ ದಸರಾ ಆಯೋಜನೆ ಯಶಸ್ವಿಯಾಗಿ ನಡೆದು ಈಗ ಐದನೇ ವರ್ಷಕ್ಕೆ ಕಾಲಿಟ್ಟಿದೆ. ಇದನ್ನೂ ಓದಿ: ಅಂಜನಾದ್ರಿ ಬೆಟ್ಟದಿಂದ ಮುಜರಾಯಿ ಇಲಾಖೆಯ ಸಿಬ್ಬಂದಿ ಹೊರಕ್ಕೆ – ಎಲ್ಲ ಕಚೇರಿಗಳಿಗೆ ಬೀಗ ಜಡಿದ ವಿದ್ಯಾದಾಸ್ ಬಾಬಾ
ಈ ಬಾರಿ ಒಂಬತ್ತು ದಿನಗಳ ಕಾಲ ಅದ್ದೂರಿ ನವರಾತ್ರಿ ವೈಭವ ನಡೆಯಲಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಉಡುಪಿ ಜಿಲ್ಲೆಗೆ ನಾಳೆ ಸಂಜೆ 4:40ಕ್ಕೆ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ವತಿಯಿಂದ ಆಯೋಜಿಸಿರುವ ಮಹಿಳಾ ದಸರಾ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಸಿಎಂ ಅವರು ಉಚ್ಚಿಲ ಮಹಾಲಕ್ಷ್ಮಿ ದೇವರ ದರ್ಶನ ಪಡೆದು, ಮೊಗವೀರ ಕುಲ ಗುರು ಮಾಧವ ಮಂಗಲ ಅವರ ಕಂಚಿನ ಪುತ್ಥಳಿಗೆ ಪುಷ್ಪಾರ್ಚನೆ ಸಲ್ಲಿಸಿ ನಂತರ ವೇದಿಕೆ ಕಾರ್ಯಕ್ರಮಕ್ಕೆ ಭಾಗವಹಿಸಿ ಸನ್ಮಾನ ಸ್ವೀಕರಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಉಚ್ಚಿಲ ಗೌರವ ಸಲಹೆಗಾರ ನಾಡೋಜ ಡಾ. ಜಿ.ಶಂಕರ್ ಮೀನುಗಾರರ ಸಮಸ್ಯೆಗಳನ್ನು ಹಾಗೂ ಬೇಡಿಕೆಗಳನ್ನು ಮುಂದಿಡಲಿದ್ದಾರೆ. ತುಳು ಭಾಷೆಗೆ ರಾಜ್ಯದ ಎರಡನೇ ಆಡಳಿತ ಭಾಷೆಯ ಸ್ಥಾನಮಾನ ಕಲ್ಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಅಭಿನಂದನ ಸಮಾರಂಭವೂ ನಡೆಯಲಿದೆ. ಈ ಬಾರಿಯೂ ನವದುರ್ಗೆಯರ ದರ್ಶನ ಒಂದೇ ಸೂರಿನಡಿ ವ್ಯವಸ್ಥೆ ಮಾಡಲಾಗಿದ್ದು, ಈ ವಿಶೇಷ ವಿದ್ಯುದ್ದೀಪಾಲಂಕಾರ ಉಚ್ಚಿಲ ಕ್ಷೇತ್ರದುದ್ದಕ್ಕೂ ಕಣ್ಮನ ಸೆಳೆಯುತ್ತಿದೆ. 9 ದಿನಗಳ ಕಾಲ ದೇವಿ ವಿಶೇಷ ಅಲಂಕಾರ ಪೂಜೆ ನಿರಂತರ ನಡೆಯಲಿದೆ. ಸಾಂಸ್ಕೃತಿಕ ವೈಭವ, ಸಂಗೀತ ಸಂಭ್ರಮ ಸೇರಿದಂತೆ ಹತ್ತು ಹಲವು ಕಾರ್ಯಕ್ರಮ ನಡೆಯುತ್ತಿದ್ದು, ಸಾವಿರಾರು ಸಂಖ್ಯೆ ಭಕ್ತರು ದೇವಿಯ ದರ್ಶನ ಪಡೆಯುತ್ತಿದ್ದಾರೆ. ಇದನ್ನೂ ಓದಿ: ನವರಾತ್ರಿ ಸಂಭ್ರಮದ ನಡುವೆ ಅವಘಡ – ಭಕ್ತರ ಮೇಲೆ ಬಿದ್ದ ಬೃಹತ್ ಲೈಟ್ ಸೆಟ್

