ಬೆಂಗಳೂರು: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೀಸಲಾತಿ ಹಕ್ಕುಗಳನ್ನು ರಕ್ಷಿಸುವಲ್ಲಿ ಕಾಂಗ್ರೆಸ್ ಸರ್ಕಾರದ ವೈಫಲ್ಯ ಖಂಡನೀಯ. ಸಾಮಾಜಿಕ ನ್ಯಾಯದ ಬಗ್ಗೆ ವೇದಿಕೆಗಳಲ್ಲಿ ದೊಡ್ಡದಾಗಿ ಮಾತನಾಡುವ ಕಾಂಗ್ರೆಸ್, ಶೋಷಿತ ಸಮುದಾಯಗಳ ಹಕ್ಕುಗಳನ್ನು ಕಾನೂನಾತ್ಮಕವಾಗಿ ರಕ್ಷಿಸುವ ವಿಚಾರದಲ್ಲಿ ಮಾತ್ರ ಸಂಪೂರ್ಣ ನಿರ್ಲಕ್ಷ್ಯ ತೋರುತ್ತಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.
ಬೊಮ್ಮಾಯಿ ಸರ್ಕಾರ ಹೆಚ್ಚಿಸಿದ್ದ ಮೀಸಲಾತಿ ಪ್ರಮಾಣವನ್ನು ಹೈಕೋರ್ಟ್ (High Court) ರದ್ದು ಮಾಡಿರೋ ವಿಚಾರವಾಗಿ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: 14 ವರ್ಷಗಳ ಕಾನೂನು ಹೋರಾಟ – ಪಂಕ್ಚರ್ ಆದ BMW ಕಾರಿಗೆ 70 ಲಕ್ಷ ಇನ್ಶೂರೆನ್ಸ್ ಪಡೆದ ಮಾಲೀಕ
ಬಸವರಾಜ ಬೊಮ್ಮಾಯಿಯವರ ನೇತೃತ್ವದ ಹಿಂದಿನ ಬಿಜೆಪಿ ಸರ್ಕಾರವು ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಶೇ.15ರಿಂದ ಶೇ.17ಕ್ಕೆ ಹಾಗೂ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ.3ರಿಂದ ಶೇ.7ಕ್ಕೆ ಹೆಚ್ಚಿಸುವ ಮೂಲಕ ಐತಿಹಾಸಿಕ ನಿರ್ಧಾರ ಕೈಗೊಂಡಿತ್ತು. ಆದರೆ, ಈ ಮೀಸಲಾತಿ ಹೆಚ್ಚಳವನ್ನು ನ್ಯಾಯಾಲಯದಲ್ಲಿ ಸಮರ್ಥವಾಗಿ ಸಮರ್ಥಿಸಿಕೊಳ್ಳುವಲ್ಲಿ ಮತ್ತು ಪರಿಶಿಷ್ಟರ ಹಕ್ಕುಗಳನ್ನು ರಕ್ಷಿಸುವಲ್ಲಿ ಕಾಂಗ್ರೆಸ್ ಸರ್ಕಾರದ ನಡೆ ತೀವ್ರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಹೊಸ ಹಕ್ಕುಗಳನ್ನು ಕಲ್ಪಿಸುವುದಿರಲಿ, ಪರಿಶಿಷ್ಟರಿಗೆ ದೊರೆತಿರುವ ಹಕ್ಕುಗಳನ್ನಾದರೂ ರಕ್ಷಿಸುವ ಜವಾಬ್ದಾರಿ ಸರ್ಕಾರಕ್ಕಿಲ್ಲವೇ? ಸಾಮಾಜಿಕ ನ್ಯಾಯದ ಹೆಸರಿನಲ್ಲಿ ರಾಜಕೀಯ ಮಾಡುವ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯದಿಂದ ಪರಿಶಿಷ್ಟ ಸಮುದಾಯಗಳ ಹಿತಾಸಕ್ತಿಗೆ ಧಕ್ಕೆಯಾಗುತ್ತಿರುವುದು ದುರದೃಷ್ಟಕರ ಎಂದು ಆಕ್ರೋಶ ಹೊರಹಾಕಿದ್ದಾರೆ.ಇದನ್ನೂ ಓದಿ: ಲಡಾಖ್ ಭಾರತದ ಅವಿಭಾಜ್ಯ ಭಾಗ, ಇದನ್ನು ಯಾರೂ ಅಲ್ಲಗಳೆಯಲಾಗದು: ಚೀನಾಗೆ ಟಕ್ಕರ್
ರಾಜ್ಯ ಸರ್ಕಾರವು ತಕ್ಷಣ ಎಚ್ಚೆತ್ತುಕೊಂಡು, ನ್ಯಾಯಾಲಯದ ಆದೇಶವನ್ನು ಸಮಗ್ರವಾಗಿ ಪರಿಶೀಲಿಸಿ, ಮೀಸಲಾತಿ ಹೆಚ್ಚಳವನ್ನು ರಕ್ಷಿಸಲು ಅಗತ್ಯವಾದ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು. ಮೇಲ್ಮನವಿ ಸೇರಿದಂತೆ ಲಭ್ಯವಿರುವ ಸೂಕ್ತ ಕಾನೂನು ಮಾರ್ಗಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಪರಿಶಿಷ್ಟರ ಹಕ್ಕುಗಳಿಗೆ ನ್ಯಾಯ ಒದಗಿಸಬೇಕು.
ಪರಿಶಿಷ್ಟರ ಹಕ್ಕುಗಳ ರಕ್ಷಣೆಯಲ್ಲಿ ಕಾಂಗ್ರೆಸ್ ಸರ್ಕಾರ ಇದೇ ನಿರ್ಲಕ್ಷ್ಯವನ್ನು ಮುಂದುವರಿಸಿದರೆ, ಶೋಷಿತ ಸಮುದಾಯಗಳ ನ್ಯಾಯಯುತ ಹಕ್ಕುಗಳಿಗಾಗಿ ರಾಜ್ಯಾದ್ಯಂತ ಬೃಹತ್ ಹೋರಾಟ ರೂಪಿಸುವುದು ಅನಿವಾರ್ಯವಾಗಲಿದೆ.ಪರಿಶಿಷ್ಟರ ಹಕ್ಕುಗಳ ರಕ್ಷಣೆಯಲ್ಲಿ ಯಾವುದೇ ರಾಜಿ ಇಲ್ಲ ಎಂದಿದ್ದಾರೆ.ಇದನ್ನೂ ಓದಿ: ಸ್ಮಿತ್ ಮಚ್ಚಾರ್ ಮೇಲೆ ಹಲ್ಲೆ ನಡೆಸಿದ್ದ ವ್ಯಕ್ತಿಗೆ ಆಪ್ತರಾಗಿದ್ದ ಮಾಲ್ಡೀವ್ಸ್‌ನ ಇಬ್ಬರು ಸಹ-ಪೈಲಟ್‌ಗಳು ವಶಕ್ಕೆ

