ನವದೆಹಲಿ: ಕಾವೇರಿ ನೀರು ಬಿಡುಗಡೆ ಮಾಡುವಂತೆ ತಮಿಳುನಾಡು ಸರ್ಕಾರ (Tamil Nadu Govt) ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ನ್ಯಾ.ಸಂದೀಪ್ ಮೆಹ್ತಾ ಪೀಠದಲ್ಲಿ ನಡೆದ ಅರ್ಜಿ ವಿಚಾರಣೆಯಲ್ಲಿ, ಬಾಕಿ ಉಳಿಸಿಕೊಂಡ ನೀರಿನ (Cauvery Water) ಪಾಲು ಹರಿಸಲು ಸೂಚಿಸುವಂತೆ ತಮಿಳುನಾಡು ಪರ ವಕೀಲರು ವಾದ ಮಂಡಿಸಿದ್ರು.
ನೀರಿನ ಕೊರತೆಯಿಂದ ತಮಿಳುನಾಡು ಗಂಭೀರ ಸಮಸ್ಯೆ ಎದುರಿಸುತ್ತಿದೆ. ಕುರುವೈ, ಸಾಂಬಾ ಬೆಳೆ ನಾಶವಾಗಬಹುದು. ಹೀಗಾಗಿ, 3000 ಕ್ಯೂಸೆಕ್ ಸಾಲುವುದಿಲ್ಲ. 11 ಟಿಎಂಸಿ ನೀರು ಕರ್ನಾಟಕ ಬಾಕಿ ಉಳಿಸಿಕೊಂಡಿದೆ. ಬಾಕಿ ಉಳಿಸಿಕೊಂಡ ನೀರಿನ ಪಾಲು ಹರಿಸಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಸೂಚಿಸಬೇಕು ಎಂದು ವಾದ ಮಂಡಿಸಿದ್ರು.

ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಕೋರ್ಟ್, ನೀರು ಇದ್ರೆ ಅಲ್ವಾ.. ಬಾಕಿ ನೀರು ಹರಿಸಲು ಸಾಧ್ಯ..? ಅಂತ ಪ್ರಶ್ನಿಸಿತು. ಇನ್ನು, ಕರ್ನಾಟಕ ವಾದಿಸಿ, ರಾಜ್ಯದಲ್ಲಿ ಬಹಳಷ್ಟು ತಾಲೂಕುಗಳಲ್ಲಿ ಬರ ಘೋಷಿಸಲಾಗಿದೆ. ತಮಿಳುನಾಡಿಗೆ ಹಿಂಗಾರು ಮಳೆ ಲಾಭ ಇದೆ. ಕರ್ನಾಟಕಕ್ಕೆ ಇದರ ಲಾಭ ಆಗುವುದಿಲ್ಲ. ಇದನ್ನೆಲ್ಲಾ ಗಮನದಲ್ಲಿಟ್ಟಕೊಂಡು ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ. ನಮ್ಮ ಜಲಾಶಯಗಳಲ್ಲಿ 57 ಟಿಎಂಸಿ ನೀರು ಇದೆ. ಬೆಂಗಳೂರು ಒಂದಕ್ಕೆ 40 ಟಿಎಂಸಿ ನೀರು ಕುಡಿಯಲು ಬೇಕು. ಕರ್ನಾಟಕ ನೀರು ಹರಿಸುವ ಪರಿಸ್ಥಿತಿಯಲ್ಲಿಲ್ಲ ಎಂದು ವಾದ ಮಂಡಿಸಿದ್ರು.
ವಾದ ಪ್ರತಿವಾದ ಆಲಿಸಿದ ಸುಪ್ರೀಂ ಕೋರ್ಟ್ ಆದೇಶ ಕಾಯ್ದಿರಿಸಿದೆ.

