ನವದೆಹಲಿ: ಪ್ರತಿಭಟನಾಕಾರರನ್ನು (Congress Delhi Protest) ತಡೆಯಲು ಪೊಲೀಸರನ್ನು ಎಕೆ-47 ಬಂದೂಕು ಹಿಡಿದು ನಿಲ್ಲಿಸಲಾಗಿದೆ, ಇಲ್ಲೇನು ನಕ್ಸಲೈಟ್‌ಗಳು, ದೇಶದ್ರೋಹಿಗಳು ಅಥವಾ ಟೆರರಿಸ್ಟ್‌ಗಳು ಇದ್ದಾರಾ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ದೆಹಲಿಯಲ್ಲಿ ನಡೆಯುತ್ತಿರುವ ಸರಣಿ ಪ್ರತಿಭಟನೆ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆಯನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಯತ್ನಿಸುತ್ತಿದೆ. ದೇಶದಲ್ಲಿ ಪ್ರಸ್ತುತ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಿಡಿಕಾರಿದರು.
ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಬಂದವರನ್ನು ಪ್ರತಿದಿನ ತಡೆಯುವ ಕೆಲಸವಾಗುತ್ತಿದೆ. ಮೆಟ್ರೋ ಸೇವೆ ಸ್ಥಗಿತಗೊಳಿಸಲಾಗಿದೆ, ಇಂಟರ್ನೆಟ್ ನೆಟ್‌ವರ್ಕ್ ಕಡಿತಗೊಳಿಸಲಾಗುತ್ತಿದೆ. ಎಲ್ಲೆಂದರಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ದೆಹಲಿ ಪೊಲೀಸರು ಹಾಗೂ ಪ್ಯಾರಾ ಮಿಲಿಟರಿ ಪಡೆಗಳನ್ನು ನಿಯೋಜಿಸಲಾಗಿದೆ. ಪ್ರತಿಭಟನಾಕಾರರ ಎದುರು ಎಕೆ-47 ಹಿಡಿದು ನಿಲ್ಲಿಸಲು ಇಲ್ಲಿ ನಾವೇನು ಉಗ್ರಗಾಮಿಗಳೇ? ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ದೇಶವನ್ನು ರಕ್ಷಿಸಲು ಸುಪ್ರೀಂ ಕೋರ್ಟ್ ತಕ್ಷಣವೇ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿದರು.
ಭಗತ್ ಸಿಂಗ್ ಹೆಸರಲ್ಲಿ ನಕಲಿ ವೋಟಿಂಗ್ ಕಾರ್ಡ್
ಚುನಾವಣಾ ವ್ಯವಸ್ಥೆ ಹಾಗೂ ಮತದಾರರ ಪಟ್ಟಿಯಲ್ಲಿ ಬಿಜೆಪಿ ತಂತ್ರಗಾರಿಕೆ ನಡೆಸುತ್ತಿದೆ ಎಂದು ಆರೋಪಿಸಿದ ಹೆಬ್ಬಾಳ್ಕರ್, ಬ್ರಿಟಿಷರ ಕಾಲದಲ್ಲೇ ಹುತಾತ್ಮರಾದ ಕ್ರಾಂತಿಕಾರಿ ಭಗತ್ ಸಿಂಗ್ ಅವರ ಹೆಸರಲ್ಲೂ ನಕಲಿ ವೋಟಿಂಗ್ ಕಾರ್ಡ್ ಸೃಷ್ಟಿಯಾಗುತ್ತಿದೆ ಎಂದರೆ ಪ್ರಜಾಪ್ರಭುತ್ವ ಎತ್ತ ಸಾಗುತ್ತಿದೆ? ಆಧಾರ್ ಲಿಂಕ್, ದಾಖಲೆಗಳು ಇಲ್ಲದ ಕಾಲದ ವ್ಯಕ್ತಿಗಳ ಭಾವಚಿತ್ರ ಬಳಸಿ ವೋಟರ್ ಐಡಿ ಹೇಗೆ ಬರುತ್ತದೆ? ಬಿಜೆಪಿಯವರು ತಮ್ಮ ಮತದಾರರ ಹೆಸರುಗಳನ್ನು ಅಕ್ರಮವಾಗಿ ಸೇರಿಸಿ, ಉಳಿದವರ ಹೆಸರುಗಳನ್ನು ಡಿಲೀಟ್ ಮಾಡಲು ಫಾರಂ-7 ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ನೇರವಾಗಿ ಆರೋಪಿಸಿದರು.
ತಮ್ಮ ಕ್ಷೇತ್ರದಲ್ಲಿ ಇಂತಹ ಕೃತ್ಯಗಳು ನಡೆಯದಂತೆ ಪಕ್ಷದ ಬಿಎಲ್‌ಒ (BLO) ಮತ್ತು ಕಾರ್ಯಕರ್ತರನ್ನು ಮೊದಲೇ ಎಚ್ಚರಗೊಳಿಸಿ ತಡೆಗಟ್ಟಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಮಗಳ ಮೇಲೆ ಗ್ಯಾಂಗ್ ರೇಪ್; ಕೇಸ್ ಹಿಂಪಡೆಯದಿದ್ದಕ್ಕೆ ಆರೋಪಿಗಳಿಂದಲೇ ಸಂತ್ರಸ್ತೆ ತಂದೆ ಕೊಲೆ
ಮತದಾನದ ಹಕ್ಕು ಸಂವಿಧಾನ ನೀಡಿರುವ ಅತ್ಯಂತ ಪವಿತ್ರವಾದ ಮೂಲಭೂತ ಹಕ್ಕು. ಅದನ್ನು ವ್ಯವಸ್ಥಿತವಾಗಿ ಕಸಿದುಕೊಳ್ಳುವ ಹುನ್ನಾರ ನಡೆಯುತ್ತಿದೆ. ದೇಶದ ಜನತೆ ಹಾಗೂ ಕರ್ನಾಟಕದ ನಾಗರಿಕರು ಈಗಲೇ ಎಚ್ಚೆತ್ತುಕೊಂಡು ಈ ಅನ್ಯಾಯದ ವಿರುದ್ಧ ಒಗ್ಗೂಡಬೇಕು ಎಂದು ಕರೆ ನೀಡಿದರು. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಹಾಗೂ ಇಂಡಿಯಾ (INDIA) ಮೈತ್ರಿಕೂಟದ ನಾಯಕರ ಮಾರ್ಗದರ್ಶನದಂತೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಇದನ್ನೂ ಓದಿ: ಸ್ಟಿಂಗ್ ಆಪರೇಷನ್ ರಾಜಕೀಯ ನಾಟಕ, ಡಿ.ಕೆ ಶಿವಕುಮಾರ್ ಆಸ್ಕರ್ ಪ್ರಶಸ್ತಿಗೆ ಯೋಗ್ಯರು: ಸಿ.ಟಿ ರವಿ ವ್ಯಂಗ್ಯ

