ಮುಂಬೈ: ಭಾರತದ ನೌಕಾಪಡೆಗೆ 3ನೇ ಜಲಾಂತರ್ಗಾಮಿ ಐಎನ್‌ಎಸ್ ಮಂಗ್ರೋಲ್ (INS Mangrol) ಸೇರ್ಪಡೆಯಾಗಿದೆ. ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ ನಿರ್ಮಿಸಿರುವ ಈ ಸ್ವದೇಶಿ ಯುದ್ಧನೌಕೆಯನ್ನ ಮುಂಬೈನ (Mumbai) ನೌಕಾ ಡಾಕ್‌ಯಾರ್ಡ್‌ನಲ್ಲಿ ಅಧಿಕೃತವಾಗಿ ನೌಕಾಪಡೆಗೆ ಸೇರ್ಪಡೆಗೊಳಿಸಲಾಯಿತು.
ಕರಾವಳಿ ಮತ್ತು ಕಡಿಮೆ ಆಳದ ಸಮುದ್ರ ಪ್ರದೇಶಗಳಲ್ಲಿ ಶತ್ರುಗಳ ಜಲಾಂತರ್ಗಾಮಿ ಬೆದರಿಕೆಗಳನ್ನು ಪತ್ತೆಹಚ್ಚಿ ಎದುರಿಸುವ ನೌಕಾಪಡೆಯ ಸಾಮರ್ಥ್ಯವನ್ನ ಈ ಯುದ್ಧನೌಕೆ ಹೆಚ್ಚಿಸಲಿದೆ. ನೀರಿನೊಳಗಿನ ಚಲನವಲನಗಳನ್ನ ಪತ್ತೆಹಚ್ಚಲು ನೆರವಾಗುವ ಅಭಯ್ ಹಲ್-ಮೌಂಟೆಡ್ ಸೋನಾರ್, ಶತ್ರು ಜಲಾಂತರ್ಗಾಮಿ ನೌಕೆಗಳನ್ನ ಧ್ವಂಸಗೊಳಿಸಲು ಲಘು ತೂಕದ ಟಾರ್ಪಿಡೊಗಳು, ಟಾರ್ಪಿಡೊ ದಾಳಿಯಿಂದ ಯುದ್ಧನೌಕೆಯನ್ನು ರಕ್ಷಿಸಲು ಮರೀನ್ ಅಡ್ವಾನ್ಸ್ಡ್ ಟಾರ್ಪಿಡೊ ಡಿಕಾಯ್, ಸ್ವದೇಶಿ ಜಲಾಂತರ್ಗಾಮಿ ವಿರೋಧಿ ರಾಕೆಟ್ ಲಾಂಚರ್ ವ್ಯವಸ್ಥೆ ಇದೆ.
ಇದರಲ್ಲಿ ಶೇ.80ಕ್ಕೂ ಹೆಚ್ಚು ಸ್ವದೇಶಿ ಉಪಕರಣಗಳು ಮತ್ತು ತಂತ್ರಜ್ಞಾನವನ್ನ ಬಳಸಲಾಗಿದೆ. ಇದು ಭಾರತದ ಎಂಜಿನಿಯರಿಂಗ್ ಸಾಮರ್ಥ್ಯ, ತಾಂತ್ರಿಕ ಪ್ರಗತಿ ಮತ್ತು ಸ್ವಾವಲಂಬನೆಯ ಸಂಕಲ್ಪವನ್ನ ಪ್ರತಿಬಿಂಬಿಸುತ್ತದೆ ಎಂದು ವೈಸ್ ಅಡ್ಮಿರಲ್ ಸಂಜಯ್ ವಾತ್ಸಾಯನ್ ಹೇಳಿದ್ದಾರೆ.

