ಒಂದು ಕಡೆ ನಾಡಹಬ್ಬ ದಸರಾಗೆ ಚಾಮುಂಡಿ ಬೆಟ್ಟದಲ್ಲಿ (Chamundi Hills) ಚಾಲನೆ ಸಿಕ್ಕಿದ್ರೆ. ಇತ್ತ ಅಂಬಾ ವಿಲಾಸ ಅರಮನೆಯಲ್ಲಿ ನಡೆದ ಖಾಸಗಿ ದರ್ಬಾರ್ ಗತಕಾಲದ ವೈಭವವನ್ನು ಮರುಕಳಿಸಿತ್ತು. ಇನ್ನು ಯದುವೀರ್ ಒಡೆಯರ್ ಇಡೀ ಕುಟುಂಬ ಖಾಸಗಿ ದರ್ಬಾರ್ನಲ್ಲಿ ಪಾಲ್ಗೊಂಡಿದ್ರು.
ರಾಜಾಧೀರಾಜ…….. ರಾಜ ಮಾರ್ತಾಂಡ………. ರಾಜ ಕುಲತಿಲಕ…….. ರಾಜ ಮಾರ್ತಾಂಡ…… ಯದುವೀರ ಪರಾಕ್………. ಬಹು ಪರಾಕ್………………… ಹೀಗೆ ವಂಧಿ ಮಾಗಧರು ಬಹುಪರಾಕ್ ಕೂಗ್ತಾ ಇದ್ರೆ ಇತ್ತ ರಾಜಗಾಂಭೀರ್ಯದಿಂದ ಸಿಂಹಾನದ ಕಡೆ ಯದುವಂಶದ ಮಹರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೆಜ್ಜೆ ಇಟ್ರು. ಇದು ಇವತ್ತು ಮೈಸೂರಿನಲ್ಲಿ ನಡೆದ ದಸರಾ ಖಾಸಗಿ ದರ್ಬಾರ್ನ ಝಲಕ್.
ಇವತ್ತಿನಿಂದ ಮೈಸೂರು ಅರಮನೆಯಲ್ಲಿ ದಸರಾ ಸಂಭ್ರಮ ಆರಂಭವಾಗಿದೆ. ಹಿಂದೆ ರಾಜ ಮಹಾರಾಜರು ನಡೆಸುತ್ತಿದ್ದ ದರ್ಬಾರು ಮಾದರಿಯಲ್ಲೇ ಇಂದಿಗೂ ದಸರೆಯ ಸಂದರ್ಭದಲ್ಲಿ ಸಂಪ್ರದಾಯ ಬದ್ಧವಾಗಿ ಅರಮನೆಯಲ್ಲಿ ರಾಜವಂಶಸ್ಥರು ಖಾಸಗಿ ದರ್ಬಾರ್ ನಡೆಸಿಕೊಂಡು ಬರುತ್ತಿದ್ದಾರೆ. ಅದೇ ರೀತಿ ಈ ಬಾರಿಯು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಖಾಸಗಿ ದರ್ಬಾರ್ ನಡೆಸಿದ್ರು.
ರಾಜ ಪೋಷಾಕು ಧರಿಸಿದ ಯದುವೀರ ದರ್ಬಾರ್ ಹಾಲ್ ಪ್ರವೇಶಿಸುತ್ತಿದ್ದಂತೆ ದರ್ಬಾರಿಗಳು ಬಹುಪರಾಕ್ ಕೂಗಿದರು. ಸಿಂಹಾಸನದ ಬಳಿ ತೆರಳಿದ ಯದುವೀರ ಸಿಂಹಾಸನಕ್ಕೆ ಮೂರು ಬಾರಿ ಪ್ರದಕ್ಷಿಣೆ ಹಾಕಿದ್ರು. ಸಿಂಹಾಸನಕ್ಕೆ ಪೂಜೆ ಸಲ್ಲಿಸಿ ಮಂಗಳಾರತಿ ಮಾಡಿದರು. ಸಿಂಹಾಸನದ ಪಕ್ಕದಲ್ಲೇ ಕುಳಿತು ನವಗ್ರಹ ಪೂಜೆ ಸೇರಿದಂತೆ ವಿವಿಧ ಪೂಜೆಗಳನ್ನು ನೆರವೇರಿಸಿದ್ರು. ಇದಾದ ನಂತರ ಅವರು ಸಿಂಹಾಸನಾರೂಢರಾದರು. ಇದೇ ವೇಳೆ ಪತ್ನಿ ತ್ರಿಷಿಕಾಕುಮಾರಿ ಯದುವೀರ ಪಾದಗಳಿಗೆ ಪುಷ್ಪಾರ್ಚಾನೆ ಮಾಡಿದ್ರು. ಬಳಿಕ ದಿವಾನರು ಸಿಂಹಾಸನದ ಮುಂದೆ ನಿಂತು ನಡುಬಾಗಿ ವಂದಿಸಿದರು.
ಇದಾದ ನಂತರ ಅರಮನೆಯ ದೇವಸ್ಥಾನಗಳು, ಚಾಮುಂಡಿಬೆಟ್ಟ ಬೆಟ್ಟ ಸೇರಿದಂತೆ ಹಲವು ದೇವಸ್ಥಾನಗಳಿಂದ ತಂದಿದ್ದ ಪ್ರಸಾದವನ್ನು ಒಡೆಯರ್ಗೆ ನೀಡಲಾಯ್ತು. ಎಲ್ಲ ಪ್ರಸಾದವನ್ನು ಶ್ರದ್ದಾ ಭಕ್ತಿಯಿಂದ ಯದುವೀರ ಸ್ವೀಕರಿಸಿದ್ರು. ನಂತರ ಮೈಸೂರು ರಾಜ್ಯ ಗೀತೆಯನ್ನು ನುಡಿಸಲಾಯ್ತು. ಈ ವೇಳೆ ರತ್ನ ಖಚಿತ ಸಿಂಹಾಸನದ ಮೇಲೆ ನಿಂತ ಯದುವೀರ ಸೆಲ್ಯೂಟ್ ಮಾಡಿ, ರಾಜ್ಯ ಗೀತೆಗೆ ಗೌರವ ಸಲ್ಲಿಸಿದ್ರು. ರಾಜ್ಯ ಗೀತೆ ಮುಗಿದ ನಂತರ ಸಿಂಹಾಸನದಿಂದ ಇಳಿದು ಖಾಸಗಿ ದರ್ಬಾರನ್ನು ಮುಕ್ತಾಯಗೊಳಿಸಿದ್ರು.
ಇನ್ನು ಯದುವೀರ ಅವರು ಖಾಸಗಿ ದರ್ಬಾರ್ ನಡೆಸುವ ಮುನ್ನ ಅರಮನೆಯಲ್ಲಿ ಬೆಳಗಿನ ಜಾವದಿಂದಲೇ ಪೂಜಾ ವಿಧಿ ವಿಧಾನಗಳು ಜರುಗಿದವು. ಮಂಗಳ ಸ್ನಾನ ನೆರವೇರಿಸಿ, ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ಯದುವೀರ ಕಂಕಣ ಕಟ್ಟಿಕೊಂಡರು. ಇದಾದ ಬಳಿಕೆ ಆರಮನೆಗೆ ಪಟ್ಟದ ಆನೆ, ಕುದರೆ, ಹಸುವನ್ನು ಕರೆಸಿ ಪೂಜೆ ಸಲ್ಲಿಸಲಾಯಿತು. ಸುಮಾರು 1 ಗಂಟೆಗಳ ಕಾಲ ಮೈಸೂರು ಅರಮನೆಯಲ್ಲಿ ಗತಕಾಲದ ವೈಭವ ಮರುಕಳಿಸಿತ್ತು. ರಾಜರ ಕಾಲದ ಆಳ್ವಿಕೆಯನ್ನು ಜನರು ಕಣ್ತುಂಬಿಕೊಂಡು ಸಂಭ್ರಮಿಸಿದ್ರು. ಇನ್ನು ಈ ಬಾರಿ ಅರಮನೆಯಲ್ಲೂ 11 ದಿನಗಳ ಕಾಲ ದಸರಾ ದರ್ಬಾರ್ ನಡೆಯಲಿದ್ದು, ಒಟ್ಟಾರೆ ಮೈಸೂರು ಅರಮನೆಯಲ್ಲಿ ಹಬ್ಬದ ಸಡಗರ ಸಂಭ್ರಮ ಮನೆ ಮಾಡಿದೆ.

