ನವದೆಹಲಿ: ಎಸ್ಐಆರ್ (SIR) ಪ್ರಕ್ರಿಯೆಯಲ್ಲಿ ಅಕ್ರಮ ಎಸಗಿದ್ದಾರೆ ಎಂಬ ಆರೋಪಿಸಿ ಸಿಇಸಿ ಜ್ಞಾನೇಶ್ ಕುಮಾರ್ (Gyanesh Kumar) ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ಪ್ರತಿಭಟನೆ ವೇಳೆ 7,000ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆದಿದ್ದು, ಎಫ್ಐಆರ್ (FIR) ದಾಖಲಿಸುವ ಸಾಧ್ಯತೆಯಿದೆ.
ದೆಹಲಿಯಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆ ಹತ್ತಿಕ್ಕುವಲ್ಲಿ ದೆಹಲಿ ಪೊಲೀಸರು (Delhi Police) ಯಶಸ್ವಿಯಾಗಿದ್ದಾರೆ. ಈ ಸಂಬಂಧ ಅಧಿಕಾರಿಗಳು ಮಾಹಿತಿ ನೀಡಿದ್ದು, ಒಟ್ಟು 7,000ಕ್ಕೂ ಅಧಿಕ ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲಾಗಿದೆ. ಜೊತೆಗೆ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಫ್ಐಆರ್ ದಾಖಲಿಸುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಚುನಾವಣಾ ಆಯೋಗದ ಪರ ಬ್ಯಾಟಿಂಗ್ – 124 ಐಎಎಸ್, IFS ಮಾಜಿ ಅಧಿಕಾರಿಗಳಿಂದ ಬಹಿರಂಗ ಪತ್ರ
ಇದಕ್ಕೂ ಮುನ್ನ ಮುಂಬೈನಿಂದ ದೆಹಲಿ ಏರ್ಪೋರ್ಟ್ಗೆ ಬಂದಿಳಿದ ಅಭಿಜಿತ್ ದೀಪ್ಕೆ, ಸೌರಭ್ ದಾಸ್, ಅಶುತೋಷ್ ರಂಕಾ ಸೇರಿ ಸಿಜೆಪಿ ನಾಯಕರನ್ನು ಏರ್ಪ್ಲೇನ್ ಒಳಗೇ ಮಹಿಳಾ ಪೊಲೀಸರು ಬಂಧಿಸಿದರು. ಈ ವೇಳೆ, ವಿಮಾನದ ಒಳಗಿದ್ದ ಯಾವೊಬ್ಬ ಪ್ರಯಾಣಿಕರು ತಡೆಯಲಿಲ್ಲ. ಆದರೆ, ನೀವು ದೇಶದ್ರೋಹಿ, ಪಾಕಿಸ್ಥಾನಕ್ಕೆ ಓಡಿಸಿ, ಕಸ ಕ್ಲೀನ್ ಆಯ್ತು, ನಾಚಿಕೆ ಇಲ್ಲದವರು ಅಂತ ಕೆಲವರು ಘೋಷಣೆ ಕೂಗಿ ಛೀಮಾರಿ ಹಾಕಿದ್ದಾರೆ. ಬಳಿಕ ಬಸ್ನಲ್ಲೇ ಅಜ್ಞಾತ ಸ್ಥಳಕ್ಕೆ ಕರೆದೊಯ್ದರು. ತಮ್ಮ ಬಂಧನ ಖಂಡಿಸಿ ಸಿಜೆಪಿ ಸಂಸ್ಥಾಪಕ ದೀಪ್ಕೆ ವಿಮಾನದ ಒಳಗಿಂದಲೇ ವಿಡಿಯೋ ಮಾಡಿ ಹರಿಬಿಟ್ಟರು. ಇಂದಿರಾಗಾಂಧಿ ಕೂಡ ಹೀಗೆ ಮಾಡಿರಲಿಲ್ಲ. ನೀವು ಅಧಿಕೃತವಾಗಿ ತುರ್ತುಪರಿಸ್ಥಿತಿ ಘೋಷಿಸಿಬಿಡಿ ಅಂದರು.
ಹೋರಾಟ ಸಾರಥ್ಯವನ್ನು ಆಪ್ತ ಅಜಿಂಕ್ಯಾ ಶಿಂಧೆಗೆ ಒಪ್ಪಿಸಿದರು. ಅಂದಹಾಗೆ, ಸಿಜೆಪಿ ನಾಯಕರ ಬಂಧನಕ್ಕೆ ಲೇಡಿ ಪೊಲೀಸ್ ಅಸ್ತ್ರ ಪ್ರಯೋಗಿಸಿದ ದೆಹಲಿ ಪೊಲೀಸರು. ಪುರುಷ ಪೊಲೀಸರನ್ನು ಕಳಿಸಿದ್ದರೆ ತಳ್ಳಾಟ ನೂಕಾಟ ಹೆಚ್ಚಾಗಬಹುದು ಅಂತ ಪ್ಲಾನ್ ಮಾಡಿ ಲೇಡಿ ಪೊಲೀಸರನ್ನೇ ಕಳಿಸಿದ್ದರು ಎನ್ನಲಾಗಿದೆ. ನಾಯಕರ ಬಂಧನದ ಹೊರತಾಗಿಯೂ ಅಜಿಂಕ್ಯಾ ಶಿಂಧೆ ಹೋರಾಟ ನಡೆಸಿದರು. ಎಲ್ಲಿ ನಿಮ್ಮನ್ನು ಪೊಲೀಸರು ತಡೆಯುತ್ತಾರೆಯೋ ಆ ಸ್ಥಳವನ್ನೇ ಜಂತರ್ ಮಂತರ್ ಎಂದುಕೊಳ್ಳಿ, ಅಲ್ಲೇ ಪ್ರತಿಭಟನೆ ಮಾಡಿ. ನಮ್ಮ ಹೋರಾಟ ನಿಲ್ಲೋ ಮಾತೇ ಇಲ್ಲ ಅಂತ ಜೆನ್-ಝೀಗಳಿಗೆ ಕರೆ ನೀಡಿದರು.ಇದನ್ನೂ ಓದಿ: ದೆಹಲಿಯಲ್ಲಿ ಭುಗಿಲೆದ್ದ ಪ್ರತಿಭಟನೆ; ಮೂವರು ಮಾಜಿ ಸಿಎಂ ಸೇರಿ 2 ಸಾವಿರಕ್ಕೂ ಹೆಚ್ಚು ಮಂದಿ ವಶಕ್ಕೆ
ಸೆಂಟ್ರಲ್ ದೆಹಲಿಯಲ್ಲಿ ಎಸ್ಎಫ್ಐ ಸಂಘಟನೆ ಕಾರ್ಯಕರ್ತರು ಬ್ಯಾರಿಕೇಡ್ ಬುಡಮೇಲು ಮಾಡಿ, ಪೊಲೀಸರ ಜೊತೆ ಸಂಘರ್ಷಕ್ಕೆ ಇಳಿದರು. ಆಕಾಶವಾಣಿ ಭವನ, ಕನ್ನಾಟ್ಪ್ಲೇಸ್ನಲ್ಲಿ ಕಲ್ಲುತೂರಾಟವೂ ನಡೆದು ಪೊಲೀಸರಿಗೆ ಗಾಯಗಳಾಯಿತು. ಇದರ ನಡುವೆ ಅಲ್ಲಲ್ಲಿ ಸ್ವಲ್ಪ ಮಟ್ಟಿಗೆ ಪ್ರತಿಭಟನೆ ನಡೆದು ಜ್ಞಾನೇಶ್ ಕುಮಾರ್ ತೊಲಗಲೇಬೇಕು ಅಂತ ಘೋಷಣೆಗಳು ಕೇಳಿ ಬಂದವು. ಐಸಾ ಮತ್ತು ಎಡಪಕ್ಷಗಳು ಬಿಜೆಪಿ ಪ್ರಧಾನ ಕಚೇರಿ ಎದುರು ಪ್ರತಿಭಟನೆ ನಡೆಸಿದವು.
ಸುಪ್ರೀಂಕೋರ್ಟ್ (Supreme Court) ಆವರಣದಲ್ಲಿ ಪ್ರತಿಭಟನೆ ನಡೆಸ್ತಿದ್ದ 60 ವಕೀಲರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ನಂತರ ಸಿಜೆ ಸೂರ್ಯಕಾಂತ್ ಮಧ್ಯಪ್ರವೇಶದ ಬಳಿಕ ಎಲ್ಲರನ್ನೂ ರಿಲೀಸ್ ಮಾಡಲಾಗಿಯ್ತು. ದೆಹಲಿಯ ರಸ್ತೆಗಳಲ್ಲಿ ಕಾರ್ಪೊರೇಷನ್ನವರು ಬೇಕಂತಲೇ ಕಸ ಸುರಿದರು. 40 ಸಾವಿರ ಪೊಲೀಸರ ಅಭೇದ್ಯ ಕೋಟೆಯಾಗಿತ್ತು. ಮುಂಜಾಗ್ರತಾ ಕ್ರಮವಾಗಿ 250ಕ್ಕೂ ಹೆಚ್ಚು ರೈಲುಗಳನ್ನೇ ರದ್ದು ಮಾಡಲಾಗಿತ್ತು. ಮೆಟ್ರೋದ 50ಕ್ಕೂ ಹೆಚ್ಚು ನಿಲ್ದಾಣಗಳನ್ನು ಮುಚ್ಚಲಾಗಿತ್ತು. 600ಕ್ಕೂ ಹೆಚ್ಚು ಕ್ರಿಮಿನಲ್ ಬ್ಯಾಕ್ಗ್ರೌಂಡ್ ಇರುವವರನ್ನು ಮೊದಲೇ ವಶಕ್ಕೆ ಪಡೆದುಕೊಳ್ಳಲಾಗಿತ್ತು. ಪೊಲೀಸರ ಕಠಿಣ ರೂಲ್ಸ್ ಮತ್ತು ಸಿಜೆಪಿ ಪ್ರತಿಭಟನೆಯಿಂದಾಗಿ ಸೆಂಟ್ರಲ್ ದೆಹಲಿಯಲ್ಲಿ ಭಾರಿ ಟ್ರಾಫಿಕ್ ಜಾಮ್ ಆಗಿತ್ತು.ಇದನ್ನೂ ಓದಿ: ಸಿಜೆಪಿ ಪ್ರತಿಭಟನೆಯ ನೇತೃತ್ವ ವಹಿಸಿದ ಅಜಿಂಕ್ಯ ಶಿಂಧೆ ಯಾರು?

