– ಗೆದ್ದಾಗ ಮಾತ್ರ ವ್ಯವಸ್ಥೆ ಪ್ರಾಮಾಣಿಕವಾಗಿರುತ್ತಾ ಅಂತ ಪತ್ರದಲ್ಲಿ ಪ್ರಶ್ನೆ
ನವದೆಹಲಿ: ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಅಭಿಯಾನ ಬೆಂಬಲಿಸಿ ಇತ್ತೀಚೆಗೆ 42 ನಿವೃತ್ತ ನ್ಯಾಯಾಧೀಶರ (IAS, IFS officers) ಗುಂಪೊಂದು ಬಹಿರಂಗ ಪತ್ರ ಬರೆದಿತ್ತು. ಈ ಬೆನ್ನಲ್ಲೇ 124 ಐಎಎಸ್, ಐಎಫ್ಎಸ್ ಮಾಜಿ ಅಧಿಕಾರಿಗಳ ಗುಂಪು ಕೂಡ ಪತ್ರ ಬರೆದಿದೆ.
124 ಮಾಜಿ ಅಧಿಕಾರಿಗಳ ಗುಂಪು ಬಹಿರಂಗ ಪತ್ರದಲ್ಲಿ ಎಸ್ಐಆರ್ ಪ್ರಕ್ರಿಯೆಯನ್ನ ಸಮರ್ಥಿಸಿಕೊಂಡಿದೆ. ಜೊತೆಗೆ ವಿಶ್ವಾಸಾರ್ಹ ಸಾಕ್ಷ್ಯಗಳಿಲ್ಲದೇ ಮಾಡಲಾದ ಮತಗಳ್ಳತನ ಆರೋಪಗಳನ್ನ ಅಧಿಕಾರಿಗಳು ಬಲವಾಗಿ ಪ್ರಶ್ನಿಸಿದ್ದಾರೆ.
ಬೂತ್ ಕ್ಯಾಪ್ಚರಿಂಗ್, ಮತ ಪೆಟ್ಟಿಗಳನ್ನು ಅಕ್ರಮವಾಗಿ ತುಂಬುವುದು ಹಾಗೂ ಚುನಾವಣಾ ಹಿಂಸಾಚಾರ ನಡೆಯುತ್ತಿದ್ದ ಕಾಲಘಟ್ಟದಿಂದ ಈಗ ಭಾರತ ಪರಿವರ್ತನೆ ಕಂಡಿದೆ. ಇಂದಿನ ಚುನಾವಣಾ ವ್ಯವಸ್ಥೆಯು ಬೂತ್ ಏಜೆಂಟರು, ಇವಿಎಂ (EVM) ಸೀಲಿಂಗ್, ಸ್ಟ್ರಾಂಗ್ ರೂಮ್ ಭದ್ರತೆ ಹಾಗೂ ವಿವಿಪ್ಯಾಟ್ (VVPAT) ಪರಿಶೀಲನೆಯಂತಹ ಹಲವು ಹಂತದ ಸುರಕ್ಷತಾ ಕ್ರಮಗಳನ್ನ ಒಳಗೊಂಡಿದೆ ಎಂದು ತಿಳಿಸಿದ್ದಾರೆ.

ಗೆದ್ದಾಗ ಮಾತ್ರ ಪ್ರಾಮಾಣಿಕವಾಗಿರುತ್ತಾ?
ಮುಂದುವರಿದು.. ಗೆದ್ದಾಗ ವ್ಯವಸ್ಥೆ ಪ್ರಾಮಾಣಿಕವಾಗಿರುತ್ತೆ, ಸೋತಾಗ ಅಕ್ರಮ ನಡೆದಿರುತ್ತೆ ಅಂತ ಹೇಳೋಕಾಗಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
2025ರ ಬಿಹಾರ ವಿಧಾನಸಭಾ ಚುನಾವಣೆಯನ್ನ ಉಲ್ಲೇಖಿಸಿರುವ ಮಾಜಿ ಅಧಿಕಾರಿಗಳು ಇಲ್ಲಿ, ಮರುಮತದಾನದ ಅಗತ್ಯವಿರಲಿಲ್ಲ. 1951ರ ನಂತರ ಮೊದಲ ಬಾರಿಗೆ ಅತಿಹೆಚ್ಚು ಮತದಾನ ದಾಖಲಾಗಿತ್ತು. ಇದೇ ಕಾರಣಕ್ಕೆ ಗೆದ್ದಾಗ ವ್ಯವಸ್ಥೆ ಪ್ರಾಮಾಣಿಕವಾಗಿರುತ್ತೆ, ಸೋತಾಗ ಅಕ್ರಮದಿಂದ ಕೂಡಿರುತ್ತೆ ಅಂತ ಹೇಳೋಕಾಗಲ್ಲ. ಇದೇ ಚುನಾವಣಾ ಆಯೋಗದ ಅಡಿಯಲ್ಲಿ ಆಡಳಿತ ಪಕ್ಷ ಕೂಡ ಹಲವು ರಾಜ್ಯಗಳಲ್ಲಿ ಸೋತಿದೆ ಎಂಬುದನ್ನು ಗಮನಿಸಬೇಕೆಂದು ಗಮನ ಸೆಳೆದಿದ್ದಾರೆ.
ಈ ಪತ್ರಕ್ಕೆ ಮಾಜಿ ವಿದೇಶಾಂಗ ಕಾರ್ಯದರ್ಶಿ ಕನ್ವಾಲ್ ಸಿಬಲ್ ಹಾಗೂ ಮಾಜಿ ಐಎಎಸ್ ಅಧಿಕಾರಿಗಳಾದ ಆರ್.ಡಿ. ಕಪೂರ್, ಸಮಿರೇಂದ್ರ ಚಟರ್ಜಿ, ಗೋಪಾಲ್ ಕೃಷ್ಣ, ವಿವೇಕ್ ಭಾರದ್ವಾಜ್ ಮತ್ತು ನವನೀತ್ ಸೆಹಗಲ್ ಸೇರಿದಂತೆ ನೂರಾರು ಮಂದಿ ಸಹಿ ಹಾಕಿದ್ದಾರೆ.
3,000ಕ್ಕೂ ಹೆಚ್ಚು ಪ್ರತಿಭಟನಾಕಾರರು ವಶಕ್ಕೆ
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಸಿಜೆಪಿ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಜಂತರ್ ಮಂತರ್ನತ್ತ ತೆರಳುತ್ತಿದ್ದ 3,000ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನ ಈಗಾಗಲೇ ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದಕ್ಕೂ ಮುನ್ನವೇ ರಾಷ್ಟ್ರ ರಾಜಧಾನಿಯಾದ್ಯಂತ ಅಪರಾಧ ಹಿನ್ನೆಲೆ ಹೊಂದಿದ್ದ 600ಕ್ಕೂ ಹೆಚ್ಚು ಮಂದಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದರು.

