ಮಡಿಕೇರಿ: ಕೊಡಗು ಜಿಲ್ಲೆಯ ಐತಿಹಾಸಿಕ ಮಡಿಕೇರಿ ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ವಿಜಯದಶಮಿಯಂದು ನಡೆಯುವ ದಶಮಂಟಪಗಳ ಶೋಭಾಯಾತ್ರೆಯಲ್ಲಿ ಡಿಜೆ ಬಳಕೆಗೆ ಅನುಮತಿ ನೀಡುವಂತೆ ಕೋರಿ ದಸರಾ ದಶಮಂಟಪ ಸಮಿತಿ (Madikeri Dasha Mantapa Committee) ಹೈಕೋರ್ಟ್ ಮೆಟ್ಟಿಲೇರಿದೆ.
ಅಕ್ಟೋಬರ್ 21 ಮತ್ತು 22ರಂದು ನಡೆಯಲಿರುವ ದಸರಾ (Madikeri Dasara) ಮಹೋತ್ಸವದ ಸಂದರ್ಭದಲ್ಲಿ ಡಿಜೆ ಬಳಕೆಗೆ ಅನುಮತಿ ನೀಡುವಂತೆ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಬೇಕೆಂದು ಸಮಿತಿ ಮನವಿ ಮಾಡಿದೆ.
ಹೌದು. ಮಡಿಕೇರಿ ದಸರಾ ಮಹೋತ್ಸವದಲ್ಲಿ ಕಳೆದ 40 ವರ್ಷಗಳಿಂದ ದಸರಾ ಮೆರವಣಿಗೆಯ ವೈಭವಕ್ಕೆ ನಾಡಿನ ಜನರು ಸಾಕ್ಷಿಯಾಗುತ್ತಿದ್ದಾರೆ. ಈ ಬಾರಿ ಅಕ್ಟೋಬರ್ 21 ಮತ್ತು 22ರಂದು ದಸರಾ ಮಹೋತ್ಸವ ಆಚರಣೆಯಾಗಲಿದೆ. ಮಹೋತ್ಸವದ ನಿರ್ವಹಣೆಗಾಗಿ ಕರವಲೆ ಭಗವತಿ ಮಹಿಷ ಮರ್ದಿನಿ ಹಾಗೂ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯ ಸೇರಿದಂತೆ ಒಟ್ಟು 10 ದೇವಾಲಯಗಳ ಸಮಿತಿಯನ್ನ ಒಳಗೊಂಡಿರುವ ‘ದಸರಾ ದಶಮಂಟಪ ಸಮಿತಿ’ ಅಸ್ತಿತ್ವದಲ್ಲಿದೆ.

ಪ್ರತಿವರ್ಷವೂ ದೇವಾಲಯಗಳ ಪರಿಕಲ್ಪನೆಯ ಸ್ತಬ್ಧಚಿತ್ರಗಳನ್ನ ಶೋಭಾಯಾತ್ರೆಯಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಡಿಜೆ ಧ್ವನಿವರ್ಧಕ ಬಳಕೆಗೆ ಅನುಮತಿ ಕೋರಿ ಸಮಿತಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ದಸರಾ ಮೆರವಣಿಗೆಯಲ್ಲಿ ಡಿಜೆ ಬಳಕೆಗೆ ಅನುಮತಿ ನೀಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಸಮಿತಿ ಮನವಿ ಮಾಡಿದೆ. ಈ ಸಂಬಂಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಕೊಡಗು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.
ದಸರಾ ಮಹೋತ್ಸವದ ಸಂಭ್ರಮಕ್ಕೆ ಡಿಜೆ ಸೌಂಡ್ ಬಳಕೆಗೆ ಅವಕಾಶ ಸಿಗುತ್ತದೆಯೇ ಎಂಬುದು ಇದೀಗ ಕುತೂಹಲ ಮೂಡಿಸಿದೆ. ಹೈಕೋರ್ಟ್‌ನ ಮುಂದಿನ ವಿಚಾರಣೆ ಹಾಗೂ ಆದೇಶದತ್ತ ದಶಮಂಟಪ ಸಮಿತಿಯ ಗಮನ ನೆಟ್ಟಿದೆ.

