ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ವಿಶ್ವವಿಖ್ಯಾತ ದಸರಾ (Dasara) ಮಹೋತ್ಸವದ ಸಂಭ್ರಮ ಮನೆ ಮಾಡಿದ್ದು, 416ನೇ ಸಾಲಿನ ದಸರಾ ಮಹೋತ್ಸವದ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಚಾಮುಂಡಿ ಬೆಟ್ಟ (Chamundi Hills) ಹಾಗೂ ಮೈಸೂರು ಅರಮನೆ (Mysuru Palace) ಎರಡೂ ಕಡೆಗಳಲ್ಲಿ ಸಿದ್ಧತೆಗಳು ಅಂತಿಮ ಹಂತಕ್ಕೆ ತಲುಪಿದ್ದು, ನಾಳೆ ನಾಡಹಬ್ಬಕ್ಕೆ ವಿದ್ಯುಕ್ತ ಚಾಲನೆ ಸಿಗಲಿದೆ.
416ನೇ ದಸರಾ ಮಹೋತ್ಸವ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆಯ ಧಾರ್ಮಿಕ ವಿಧಿವಿಧಾನಗಳು ಅಂತಿಮ ಹಂತಕ್ಕೆ ಬಂದಿದ್ದು, ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ನೇತೃತ್ವದಲ್ಲಿ ಚಾಮುಂಡೇಶ್ವರಿ ತಾಯಿಯ ಉತ್ಸವ ಮೂರ್ತಿಯ ಶುದ್ಧಿ ಕಾರ್ಯನೆರವೇರಿದೆ. ಇದನ್ನೂ ಓದಿ: ಮೈಸೂರು ದಸರಾ 2026: ಚಾಮುಂಡಿ ಬೆಟ್ಟದ ಮಹಿಷಾಸುರ ಪ್ರತಿಮೆ ಬಳಿ ನಿಷೇಧಾಜ್ಞೆ ಜಾರಿ
ಅರಮನೆಯಿಂದ ತರಲಾಗಿರುವ ಮಹಿಷ ಮರ್ದಿನಿ ಅವತಾರದ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಗಿದ್ದು, ನವರಾತ್ರಿಯ ಪ್ರತಿದಿನ ಪ್ರಾಣ ಪ್ರತಿಷ್ಠಾಪನೆ ಮಾಡಿ, ವಿಶೇಷ ಪೂಜೆ ನಡೆಯಲಿದೆ. ನಾಳೆ ಬೆಳಿಗ್ಗೆ ಚಾಮುಂಡೇಶ್ವರಿ ದೇವಾಲಯದ ಆವರಣದಲ್ಲಿ ನಿರ್ಮಿಸಿರುವ ಭವ್ಯ ವೇದಿಕೆಯಲ್ಲಿ ಕಾರ್ಯಕ್ರಮ ಜರುಗಲಿದೆ.
ನಾಳೆ ಬೆಳಿಗ್ಗೆ 11:50 ರಿಂದ 12:13ರ ಧನುರ್ ಲಗ್ನದಲ್ಲಿ ನಾಡಹಬ್ಬ ದಸರಾ ಮಹೋತ್ಸವ ಉದ್ಘಾಟನೆಗೊಳ್ಳಲಿದೆ. ಕೊಪ್ಪಳದ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಗಳು ಈ ಬಾರಿಯ ದಸರಾ ಉದ್ಘಾಟಕರಾಗಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸೇರಿ ಹಲವು ಸಚಿವರು, ಶಾಸಕರು ಉಪಸ್ಥಿತರಿರಲಿದ್ದಾರೆ. ವಿಶೇಷವೆಂದರೆ ಈ ಬಾರಿ 100ಕ್ಕೂ ಹೆಚ್ಚು ಧರ್ಮಗುರುಗಳು ಭಾಗಿಯಾಗುತ್ತಿದ್ದು, ವಿವಿಐಪಿ, ವಿಐಪಿ ಹಾಗೂ ಸಾರ್ವಜನಿಕರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಚಾಮುಂಡಿ ಬೆಟ್ಟದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.ಇದನ್ನೂ ಓದಿ: ಮೈಸೂರು ದಸರಾ ಅಂಗಳದಲ್ಲಿ ತಾಕತ್ತು ಪ್ರದರ್ಶಿಸಲು ಸಜ್ಜಾಗಿದೆ ಕರಾವಳಿಯ ಕಂಬಳ
ಇನ್ನೊಂದೆಡೆ, ಅಂಬಾವಿಲಾಸ ಅರಮನೆಯಲ್ಲೂ ಸಾಂಪ್ರದಾಯಿಕ ರಾಜಮನೆತನದ ವಿಧಿವಿಧಾನಗಳು ಆರಂಭವಾಗಿವೆ. ನಾಳೆ ಬೆಳಿಗ್ಗೆ 6 ರಿಂದ 7:12ರೊಳಗೆ ಸಿಂಹಾಸನಕ್ಕೆ ಸಿಂಹ ಜೋಡಣೆ ಕಾರ್ಯ ನೆರವೇರಲಿದೆ. ಬಳಿಕ ಬೆಳಿಗ್ಗೆ 8:35 ರಿಂದ 9:05ರವರೆಗೆ ರಾಜವಂಶಸ್ಥರಾದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‌ಗೆ ಕಂಕಣಧಾರಣೆ ನಡೆಯಲಿದೆ. ತದನಂತರ ಬೆಳಿಗ್ಗೆ 11:45 ರಿಂದ 12:05ರವರೆಗೆ ಸಿಂಹಾಸನಾರೋಹಣದೊಂದಿಗೆ ಅರಮನೆಯಲ್ಲಿ ಖಾಸಗಿ ದರ್ಬಾರ್ ಅಧಿಕೃತವಾಗಿ ಆರಂಭವಾಗಲಿದೆ.
ಒಟ್ಟಾರೆ ನಾಳೆಯಿಂದ ಮೈಸೂರು ದಸರಾದ ಎಲ್ಲಾ ಕಾರ್ಯಕ್ರಮಗಳು ಆರಂಭವಾಗಲಿದ್ದು, ಮೈಸೂರಿನಲ್ಲಿ ದಸರಾ ಸಂಭ್ರಮ ಕಳೆಗಟ್ಟಿದೆ. ದೇಶ, ವಿದೇಶಗಳ ಪ್ರವಾಸಿಗರು ಸೇರಿ ಕೋಟ್ಯಂತರ ಜನ ವೈಭವದ ದಸರಾ ಸಂಭ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.ಇದನ್ನೂ ಓದಿ: ಮೈಸೂರು ದಸರಾ ವೀಕ್ಷಣೆಗೆ KSTDC ವಿಶೇಷ ವ್ಯವಸ್ಥೆ – ಅಂಬಾರಿ ಡಬಲ್ ಡೆಕ್ಕರ್ ಬಸ್, 7 ವಿಶೇಷ ಪ್ಯಾಕೇಜ್‌ಗಳು

