– ರಾಹುಲ್ ಗಾಂಧಿ ಬಿಜೆಪಿಯ ಸ್ಟಾರ್ ಕ್ಯಾಂಪೇನರ್ ಎಂದು ಲೇವಡಿ
ಬೆಂಗಳೂರು: ದೇಶ ವಿರೋಧಿ ಶಕ್ತಿಗಳು ಸಿಜೆಪಿ ಮುಖಂಡರ (CJP Leaders) ಜೊತೆ ಸೇರಿ ದೆಹಲಿಯಲ್ಲಿ ಹೋರಾಟ ಮಾಡ್ತಾ ಇದ್ದಾರೆ ಅಂತ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಸಿಜೆಪಿ ಹೋರಾಟಕ್ಕೆ ಕಿಡಿಕಾರಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, CJP ಪ್ರತಿಭಟನೆಗೆ ಕೇಂದ್ರ ಸರ್ಕಾರ ಹೆದರಿಲ್ಲ. ಅದನ್ನು ತಪ್ಪಾಗಿ ಅರ್ಥೈಸಬೇಕಾಗಿಲ್ಲ. ಸಿಜೆಪಿ ಹೆಸರಿನಲ್ಲಿ ನಡೆದಿರುವ ಪ್ರದರ್ಶನ ಅದು. ದೇಶ ವಿರೋಧಿ ಶಕ್ತಿಗಳು ಸಿಜೆಪಿ ಮುಖಂಡರ ಜೊತೆ ಸೇರಿ ವಿದ್ಯಾರ್ಥಿಗಳನ್ನೇ ಬದಿಗಿಟ್ಟು ಹೋರಾಟ ಮಾಡಿದ್ದಾರೆ. ಇದೆಲ್ಲವನ್ನೂ ಕೇಂದ್ರ ಸರ್ಕಾರ ಗಮನಿಸಿದೆ ಅಂತ ಹೇಳಿದರು.

ಸಿಇಸಿ ಜ್ಞಾನೇಶ್ ಕುಮಾರ್ ಅವರದ್ದು ಸಾಂವಿಧಾನಿಕ ಹುದ್ದೆ. ತಪ್ಪಾಗಿದ್ದರೆ ಅವರು ಕೋರ್ಟ್ ಗೆ ಹೋಗಬಹುದು. ಕೋರ್ಟ್ ಗೆ ಹೋಗಲು ಈವರೆಗೂ ಅವರು ಸಿದ್ಧರಾಗಿಲ್ಲ. ಪ್ರಕಾಶ್ ರಾಜ್ (Prakash Raj) ಎಸ್ಐಆರ್ ಮಾಡಬೇಡಿ ಅಂತಾರೆ. ಸತ್ತವರ ಹೆಸರು ಹಾಗೆಯೇ ಇರಬೇಕು ಅಂತೀರಾ? ರಾಜೀನಾಮೆ ಕೊಡಲು ಜ್ಞಾನೇಶ್ ಕುಮಾರ್ ಮಾಡಿದ ತಪ್ಪು ಏನು ಅಂತಾ ತೋರಿಸಬೇಕು. ಆದರೆ ಇದುವರೆಗೂ ತೋರಿಸಲು ಅವರಿಗೆ ಆಗಿಲ್ಲ. ಭಯೋತ್ಪಾದಕರ ಹೆಸರನ್ನು ತೆಗೆದುಕೊಂಡು ಮಾತಾಡುವುದು ಎಷ್ಟು ಸರಿ? ನ್ಯಾಯಾಲಯಗಳ ಮೇಲೆ ಅವರಿಗೆ ನಂಬಿಕೆ ಇಲ್ಲ. ಹಾದಿ ರಂಪ, ಬೀದಿರಂಪ ಮಾಡುವುದು ಸರಿಯಲ್ಲ. ವಿಚ್ಛಿದ್ರಕಾರಿ ಶಕ್ತಿಗಳು ಬಂದು ನುಸುಳಿ ಭಾರತವನ್ನು ಒಡೆಯುವ ಕೆಲಸದಲ್ಲಿ ತೊಡಗಿವೆ ಅಂತ ವಾಗ್ದಾಳಿ ನಡೆಸಿದರು.
ಪ್ರಿಯಾಂಕ್ ಖರ್ಗೆ ಏನು ಬೇಕಾದರೂ ಮಾತಾಡುತ್ತಾರೆ. ಏಕೆಂದ್ರೆ ಅವರಿಗೆ ಅನುಭವದ ಕೊರತೆ. ನನ್ನ ಶಕ್ತಿ ನನ್ನ ತಂದೆ ಅಂತಾ ಅವರು ತಿಳಿದುಕೊಳ್ಳಬಾರದು. ಪ್ರಿಯಾಂಕ್ ಖರ್ಗೆ ನನ್ನ ಹಿರಿಯ ಸಹೋದರ ಅಂತಾ ಭಾವಿಸಿದ್ದೇನೆ. ರಾಜ್ಯದಲ್ಲಿ ಆಗಿರುವ ದಲಿತರ ಹಲ್ಲೆ, ಕೊಲೆ ಬಗ್ಗೆ ಅವರು ಗಮನ ಹರಿಸಿಲ್ಲ. ಅವರು ಇದರ ಬಗ್ಗೆ ಗಮನ ಹರಿಸುವುದನ್ನ ಕಲಿಯಲಿ. ಪ್ರಪಂಚವೇ ಗೌರವಿಸುವ ರೀತಿಯಲ್ಲಿ ಮೋದಿ, ಶಾ ದೇಶವನ್ನ ನಡೆಸುತ್ತಿದ್ದಾರೆ. ಕಾಂಗ್ರೆಸ್ ನಾಯಕತ್ವ ಇಂದು ಸತ್ತು ಹೋಗಿದೆ. ಸಿದ್ದರಾಮಯ್ಯ ಅಹಿಂದ ನಾಯಕರನ್ನ ಸ್ವಲ್ಪ ಹಿಡಿದಿಟ್ಟುಕೊಂಡಿದ್ದ ಕಾರಣ ಕರ್ನಾಟಕದಲ್ಲಿ ಕಾಂಗ್ರೆಸ್ ಜೀವ ಹಿಡಿದುಕೊಂಡಿತ್ತು, ರಾಹುಲ್ ಗಾಂಧಿ ಬಿಜೆಪಿಯ ಸ್ಟಾರ್ ಕ್ಯಾಂಪೇನರ್. ಹಾಗಿರುವಾಗ ಅವರಿಂದ ಕಾಂಗ್ರೆಸ್ ಗೆ ಹೇಗೆ ನೆರವು ಸಿಗುತ್ತದೆ? ಕಾಂಗ್ರೆಸ್ ಎಲ್ಲಿ ಸಿಜೆಪಿಯಲ್ಲಿ ವಿಲೀನ ಆಗುತ್ತದೋ ಎಂಬ ಅನುಮಾನ ಕಾಡುತ್ತಿದೆ ಅಂತ ಕಾಂಗ್ರೆಸ್ ಮತ್ತು ಪ್ರಿಯಾಂಕ್ ಖರ್ಗೆ ವಿರುದ್ದ ಛಲವಾದಿ ನಾರಾಯಣಸ್ವಾಮಿ ಲೇವಡಿ ಮಾಡಿದ್ರು.

