– ಅರ್ಧ ಸತ್ಯ, ಅಪಪ್ರಚಾರದಿಂದ ಜನರ ದಿಕ್ಕುತಪ್ಪಿಸುವ ಕೆಲಸ ಅಂತ ಸರ್ಕಾರದ ವಿರುದ್ಧ ವಾಗ್ದಾಳಿ
ಮಡಿಕೇರಿ: ಯಾವುದೇ ಸಾಕ್ಷಿ ಆಧಾರವಿಲ್ಲದೇ ಫಾರ್ಮ್-7 (Form 7) ದುರ್ಬಳಕೆ ಆರೋಪ ಮಾಡೋದು ಸರಿಯಲ್ಲ. ವಿಪಕ್ಷಗಳು ಎಸ್‌ಐಆರ್ ಪ್ರಕ್ರಿಯೆ ನಡೆಯುತ್ತಿರುವ ಹೊತ್ತಿನಲ್ಲಿ, ಅರ್ಧಸತ್ಯ ಮಾತನಾಡುತ್ತಾ, ಅಪಪ್ರಚಾರ ಮಾಡುತ್ತಾ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿವೆ ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ (Yaduveer Wadiyar) ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಡಿಕೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಫಾರ್ಮ್-7 ವಿಚಾರದಲ್ಲೂ ಬಿಜೆಪಿ ಕಚೇರಿಯಿಂದ ನಾವು ಆಯ್ಕೆ ಮಾಡಿರುವವರು ಅಥವಾ ನೇಮಕ ಮಾಡಿರುವವರು ಅರ್ಜಿಗಳನ್ನು ಸಲ್ಲಿಸಿದ್ದಾರೆ ಎಂಬ ಆರೋಪ ಮಾಡಲಾಗುತ್ತಿದೆ. ಬಿಜೆಪಿ ಕಚೇರಿಯಿಂದಲೇ ಫಾರ್ಮ್‌ಗಳನ್ನ ದುರ್ಬಳಕೆ ಮಾಡಲಾಗಿದೆ ಎಂಬ ಆರೋಪಕ್ಕೆ ಯಾವುದೇ ಆಧಾರವಿಲ್ಲ. ಕಾನೂನುಬದ್ಧವಾಗಿ ನಡೆಯುತ್ತಿರುವ ಚುನಾವಣಾ ಪ್ರಕ್ರಿಯೆಯಲ್ಲಿ ನಾವು ಕೂಡ ನಮ್ಮ ಕೆಲಸ ಮುಂದುವರಿಸುತ್ತಿದ್ದೇವೆ ಎಂದು ಹೇಳಿದರು.

ಫಾರ್ಮ್-7 ಎನ್ನುವುದು ಮತದಾರರು ತಮ್ಮ ಆಕ್ಷೇಪವನ್ನು ವ್ಯಕ್ತಪಡಿಸಲು ಇರುವ ಕಾನೂನುಬದ್ಧ ಪ್ರಕ್ರಿಯೆ. ಯಾರಿಗಾದರೂ ತಮ್ಮ ಹೆಸರಿನ ಬಗ್ಗೆ ಆಕ್ಷೇಪವಿದ್ದರೆ ಫಾರ್ಮ್-7 ಸಲ್ಲಿಸಬಹುದು. ನಂತರ ಚುನಾವಣಾ ಆಯೋಗದ ಅಧಿಕಾರಿಗಳು ಪರಿಶೀಲನೆ ನಡೆಸಿ, ಅದು ಸತ್ಯವೋ ಅಥವಾ ಸುಳ್ಳೋ ಎಂಬುದನ್ನ ತೀರ್ಮಾನಿಸುತ್ತಾರೆ. ಪ್ರಕ್ರಿಯೆ ನಡೆಯುತ್ತಿರುವ ಸಂದರ್ಭದಲ್ಲಿ ಜನರಲ್ಲಿ ಆತಂಕ ಸೃಷ್ಟಿಸುವುದು ಸರಿಯಲ್ಲ ಎಂದು ಸಲಹೆ ನೀಡಿದರು.
ರಾಜ್ಯದಲ್ಲಿ ಹಾಗೂ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ (Congress) ಸೇರಿದಂತೆ ವಿರೋಧ ಪಕ್ಷಗಳು ರಾಜಕೀಯ ಗೊಂದಲ ಸೃಷ್ಟಿಸುವ ಉದ್ದೇಶದಿಂದ ಇಂತಹ ವಿಚಾರಗಳನ್ನ ಬಳಸಿಕೊಳ್ಳುತ್ತಿವೆ. ಎಸ್‌ಐಆರ್ ಬಗ್ಗೆ ಜನರಲ್ಲಿ ಆತಂಕ ಮೂಡಿಸುವ ಪ್ರಯತ್ನ ನಡೆಯುತ್ತಿದೆ. ಅರ್ಧಸತ್ಯ ಮತ್ತು ಅಪಪ್ರಚಾರವನ್ನ ರಾಜಕೀಯ ಅಸ್ತ್ರವಾಗಿ ಬಳಸಲಾಗುತ್ತಿದೆ. ಇದನ್ನು ರಾಜ್ಯದ ಜನರು ಈಗಾಗಲೇ ಗಮನಿಸಿದ್ದಾರೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಚೌಕಟ್ಟಿನೊಳಗೆ ಚುನಾವಣೆ ಎದುರಿಸುವ ಬದಲು ಬೀದಿಯಲ್ಲಿ ಹೋರಾಟ, ಅಪಪ್ರಚಾರ ಹಾಗೂ ಜನರನ್ನು ದಿಕ್ಕುತಪ್ಪಿಸುವ ಕೆಲಸ ಮಾಡಲಾಗುತ್ತಿದೆ. ಇದನ್ನ ನಾವು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಮುಂದೆ ಸಂಪೂರ್ಣ ವಿಚಾರ ಸ್ಪಷ್ಟವಾದಾಗ, ತಪ್ಪಿತಸ್ಥರಿಗೆ ಸೂಕ್ತ ಉತ್ತರ ನೀಡುತ್ತೇವೆ ಎಂದು ವಾಗ್ದಾಳಿ ನಡೆಸಿದರು.
ಅಲ್ಲದೇ, ರಾಜ್ಯದಲ್ಲಿ ಬರ ಪರಿಸ್ಥಿತಿ ಇರುವ ಹಿನ್ನೆಲೆ ರೈತರ ಪರಿಹಾರದ ವಿಚಾರದಲ್ಲೂ ಸರ್ಕಾರದ ಪ್ರಕ್ರಿಯೆ ನಡೆಯುತ್ತಿದೆ. ಕಂದಾಯ ಇಲಾಖೆ ಮತ್ತು ಸಂಬಂಧಪಟ್ಟ ಇಲಾಖೆಗಳು ಜಂಟಿ ಸಮೀಕ್ಷೆ ನಡೆಸಿ ಪ್ರಸ್ತಾವನೆ ಸಲ್ಲಿಸಿವೆ. ರೈತರಿಗೆ ಎಷ್ಟು ಪ್ರಮಾಣದಲ್ಲಿ ಪರಿಹಾರ ನೀಡಬೇಕು, ಬೆಳೆ ನಷ್ಟ ಎಷ್ಟಾಗಿದೆ ಹಾಗೂ ಉತ್ಪಾದನೆಯ ಮೇಲೆ ಎಂತಹ ಪರಿಣಾಮ ಬೀರಿದೆ ಎಂಬುದನ್ನು ತಜ್ಞರು ಮತ್ತು ಅಧಿಕಾರಿಗಳ ವರದಿಯ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ ಎಂದರು.
ಕೇಂದ್ರ ಸರ್ಕಾರದ ಮಟ್ಟದಲ್ಲೂ ಪರಿಶೀಲನೆ ನಡೆಯಲಿದೆ. ಸೂಕ್ತ ಪರಿಹಾರ ನೀಡುವ ಪ್ರಕ್ರಿಯೆಯಲ್ಲಿ ನಮ್ಮ ರೈತರಿಗೆ ಸಂಪೂರ್ಣ ಬೆಂಬಲ ನೀಡುತ್ತೇವೆ. ಸಮೀಕ್ಷೆ ಮತ್ತು ವರದಿಯ ಆಧಾರದ ಮೇಲೆ ಪರಿಹಾರದ ಪ್ರಮಾಣವನ್ನು ಅಂತಿಮವಾಗಿ ತೀರ್ಮಾನಿಸಲಾಗುತ್ತದೆ ಎಂದು ತಿಳಿಸಿದರು.

