ಪ್ರತಿದಿನ ಜಿಮ್‌ನಲ್ಲಿ ತೂಕ ಎತ್ತುವ, ಟ್ರೆಡ್‌ಮಿಲ್ ಮೇಲೆ ಓಡುವ ಲಕ್ಷಾಂತರ ಜನರಿಗೆ ತಮ್ಮ ನಿಜವಾದ ದೈಹಿಕ ಸಾಮರ್ಥ್ಯವನ್ನು ಪರೀಕ್ಷಿಸಿಕೊಳ್ಳಲು ಒಂದು ಸೂಕ್ತ ವೇದಿಕೆ ಸಿಕ್ಕರೆ ಹೇಗಿರುತ್ತದೆ? ಅದಕ್ಕಾಗಿಯೇ ಹುಟ್ಟಿಕೊಂಡ ಜಾಗತಿಕ ಫಿಟ್‌ನೆಸ್ ರೇಸ್ ಹೈರಾಕ್ಸ್.
ಓಟ (Running) ಮತ್ತು ಕ್ರಿಯಾತ್ಮಕ ವ್ಯಾಯಾಮಗಳನ್ನು (Functional Workouts) ಒಟ್ಟಿಗೆ ಬೆರೆಸಿ ರೂಪಿಸಲಾದ ಈ ಕ್ರೀಡೆ, ಸದ್ಯ ಜಗತ್ತಿನಾದ್ಯಂತ ಫಿಟ್‌ನೆಸ್ ಪ್ರೇಮಿಗಳನ್ನು ಭಾರೀ ಸಂಖ್ಯೆಯಲ್ಲಿ ಆಕರ್ಷಿಸುತ್ತಿದೆ. ಕೇವಲ ವೃತ್ತಿಪರ ಅಥ್ಲೀಟ್‌ಗಳಿಗಷ್ಟೇ ಅಲ್ಲದೆ, ಸಾಮಾನ್ಯ ಜಿಮ್ ಪ್ರಿಯರನ್ನೂ ಒಬ್ಬ ಸ್ಪರ್ಧಾತ್ಮಕ ಕ್ರೀಡಾಪಟುವನ್ನಾಗಿ ಮಾಡುವ ಈ ಹೈರಾಕ್ಸ್(HYROX) ಸ್ಪರ್ಧೆಯ ವಿಶೇಷತೆ ಏನು? ಒಬ್ಬ ಪಕ್ಕಾ ಕ್ರೀಡಾಪಟುವಿನ (Athlete) ಅನುಭವ ನೀಡುವ ಈ ಜಾಗತಿಕ ಕ್ರೀಡೆ ಆರಂಭವಾಗಿದ್ದು ಎಲ್ಲಿ? ಇದರ ಹಿಂದಿನ ರೋಚಕ ಕಲ್ಪನೆ ಬಗ್ಗೆ ಇಲ್ಲಿ ವಿವರ ನೀಡಲಾಗಿದೆ.
2017 ರಲ್ಲಿ ಆರಂಭ
ಹೈರಾಕ್ಸ್ ಸ್ಪರ್ಧೆಯು 2017 ರಲ್ಲಿ ಜರ್ಮನಿಯ ಹ್ಯಾಂಬರ್ಗ್ ನಗರದಲ್ಲಿ ಅಧಿಕೃತವಾಗಿ ಆರಂಭವಾಯಿತು. ಇದನ್ನು ಜರ್ಮನಿಯ ಕ್ರೀಡಾ ಉದ್ಯಮಿ ಕ್ರಿಶ್ಚಿಯನ್ ಟೋಟ್ಜ್ಕೆ, ಮತ್ತು ಮೂರು ಬಾರಿ ಒಲಿಂಪಿಕ್ ಪದಕ ವಿಜೇತ ಹಾಗೂ ವಿಶ್ವ ಚಾಂಪಿಯನ್ ಹಾಕಿ ಆಟಗಾರ ಮೋರಿಟ್ಜ್ ಫರ್ಸ್ಟೆ ಸೇರಿ ಜಂಟಿಯಾಗಿ ಪ್ರಾರಂಭಿಸಿದರು.
ಆರಂಭಿಸಿದ್ದು ಯಾಕೆ?
ಜಗತ್ತಿನಲ್ಲಿ ಮ್ಯಾರಥಾನ್, ಟ್ರಯಾಥ್ಲಾನ್ ಅಥವಾ ಕ್ರಾಸ್‌ಫಿಟ್‌ನಂತಹ ಹಲವು ಸ್ಪರ್ಧೆಗಳಿದ್ದರೂ, ಸಾಮಾನ್ಯ ಫಿಟ್‌ನೆಸ್ ಪ್ರೇಮಿಗಳಿಗಾಗಿ ಈ ಕೆಳಗಿನ ಪ್ರಮುಖ ಕಾರಣಗಳಿಗಾಗಿ ಹೈರಾಕ್ಸ್ ಆರಂಭಿಸಲಾಯಿತು.

ಜಗತ್ತಿನಾದ್ಯಂತ ಲಕ್ಷಾಂತರ ಜನರು ಕೇವಲ ಫಿಟ್‌ನೆಸ್‌ಗಾಗಿ ಜಿಮ್‌ಗಳಿಗೆ ಹೋಗುತ್ತಾರೆ, ಓಡುತ್ತಾರೆ ಅಥವಾ ತೂಕ ಎತ್ತುತ್ತಾರೆ. ಆದರೆ ಅವರಿಗೆ ತಮ್ಮ ಫಿಟ್‌ನೆಸ್ ಮಟ್ಟವನ್ನು ಪರೀಕ್ಷಿಸಿಕೊಳ್ಳಲು ಯಾವುದೇ ನಿರ್ದಿಷ್ಟ ಕ್ರೀಡೆ ಅಥವಾ ಜಾಗತಿಕ ಸ್ಪರ್ಧೆ ಇರಲಿಲ್ಲ. ಅಂತಹ ಸಾಮಾನ್ಯ ಜಿಮ್ ಗೋಯರ್ಸ್ (Gym-goers) ಅನ್ನು ಕ್ರೀಡಾಪಟುಗಳನ್ನಾಗಿ ಮಾಡಲು ಇದನ್ನು ವಿನ್ಯಾಸಗೊಳಿಸಲಾಯಿತು.
ಮ್ಯಾರಥಾನ್‌ಗಳಲ್ಲಿ ಕೇವಲ ಓಟಕ್ಕೆ ಪ್ರಾಮುಖ್ಯತೆ ಇರುತ್ತದೆ. ಕ್ರಾಸ್‌ಫಿಟ್‌ನಲ್ಲಿ (CrossFit) ಅತಿ ಹೆಚ್ಚು ತೂಕ ಎತ್ತುವ ಮತ್ತು ಜಿಮ್ನಾಸ್ಟಿಕ್ಸ್‌ನಂತಹ ಕಠಿಣ ಕೌಶಲ್ಯಗಳು ಬೇಕಾಗುತ್ತವೆ, ಇದು ಎಲ್ಲರಿಗೂ ಸುಲಭವಲ್ಲ. ಆದ್ದರಿಂದ, ಓಟ ಮತ್ತು ಕ್ರಿಯಾತ್ಮಕ ವ್ಯಾಯಾಮಗಳನ್ನು ಸಮಾನವಾಗಿ ಬೆರೆಸಿ ಮಧ್ಯಮ ಮಾರ್ಗವಾಗಿ ಹೈರಾಕ್ಸ್ ಅನ್ನು ರೂಪಿಸಲಾಯಿತು.
ಇದರಲ್ಲಿರುವ ವ್ಯಾಯಾಮಗಳು ಮಾನವನ ದೈನಂದಿನ ದೈಹಿಕ ಚಲನೆಗಳನ್ನು (ತಳ್ಳುವುದು, ಎಳೆಯುವುದು, ಓಡುವುದು, ಬಾಗುವುದು) ಆಧರಿಸಿವೆ. ಇದರಲ್ಲಿ ಒಲಿಂಪಿಕ್ ವೇಟ್‌ಲಿಫ್ಟಿಂಗ್‌ನಂತಹ ಅತ್ಯಂತ ಅಪಾಯಕಾರಿ ಅಥವಾ ಸಂಕೀರ್ಣವಾದ ತಂತ್ರಗಳು ಇಲ್ಲದಿರುವುದರಿಂದ ಗಾಯವಾಗುವ ಸಂಭವ ತುಂಬಾ ಕಡಿಮೆ.
ಹೈರಾಕ್ಸ್ ರೇಸ್‌ನಲ್ಲಿ ಯಾವುದೇ ನಿರ್ದಿಷ್ಟ ಸಮಯದ ಮಿತಿ ಇರುವುದಿಲ್ಲ. ಭಾಗವಹಿಸುವ 99% ಸ್ಪರ್ಧಿಗಳು ರೇಸ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸುತ್ತಾರೆ. ಪ್ರತಿಯೊಬ್ಬರಿಗೂ ತಮ್ಮದೇ ಆದ ಫಿಟ್‌ನೆಸ್ ಗುರಿಯನ್ನು ತಲುಪಲು ಪ್ರೋತ್ಸಾಹ ನೀಡುವುದು ಇದರ ಮೂಲ ಉದ್ದೇಶವಾಗಿದೆ. ಇದನ್ನೂ ಓದಿ: ಓಡುತ್ತಿರುವಾಗಲೇ ಮಲವಿಸರ್ಜನೆ, ಭೇದಿ – ಏನಿದು ಜಾಗತಿಕ ಮಟ್ಟದಲ್ಲಿ ಸಂಚಲನ ಸೃಷ್ಟಿಸಿದ ಹೈರಾಕ್ಸ್ ವಿವಾದ?
HYROX Loaded Lunges Form Breakdown!😳 pic.twitter.com/ok8NRo34Sj
— Squat University (@SquatUniversity) July 23, 2026
ಯಾವ ರೀತಿ ಸ್ಪರ್ಧೆ?
ಜಗತ್ತಿನಾದ್ಯಂತ ನಡೆಯುವ ಎಲ್ಲಾ ಹೈರಾಕ್ಸ್ ಸ್ಪರ್ಧೆಗಳೂ ಒಂದೇ ರೀತಿಯ ಕಟ್ಟುನಿಟ್ಟಾದ ಮತ್ತು ಸ್ಥಿರವಾದ ಸ್ವರೂಪವನ್ನು ಹೊಂದಿರುತ್ತವೆ. ಸ್ಪರ್ಧೆಯು ಸಾಮಾನ್ಯವಾಗಿ ದೊಡ್ಡ ಒಳಾಂಗಣ ಪ್ರದರ್ಶನ ಸಭಾಂಗಣಗಳಲ್ಲಿ ನಡೆಯುತ್ತದೆ.
ಪ್ರತಿ ಹೈರಾಕ್ಸ್ ಸ್ಪರ್ಧೆಯು ಒಟ್ಟು 8 ಕಿಲೋಮೀಟರ್ ಓಟ ಮತ್ತು 8 ವಿಭಿನ್ನ ವರ್ಕೌಟ್ ಸ್ಟೇಷನ್‌ಗಳನ್ನು ಒಳಗೊಂಡಿರುತ್ತದೆ. ಸ್ಪರ್ಧಿಗಳು 1 ಕಿಲೋಮೀಟರ್ ಓಡಬೇಕು, ನಂತರ ಒಂದು ವರ್ಕೌಟ್ ಸ್ಟೇಷನ್ ಪೂರ್ಣಗೊಳಿಸಬೇಕು. ಈ ಪ್ರಕ್ರಿಯೆಯು 8 ಬಾರಿ ಪುನರಾವರ್ತನೆಯಾಗುತ್ತದೆ:
1. 1 ಕಿಮೀ ಓಟ + SkiErg (1,000 ಮೀಟರ್ ಕಾರ್ಡಿಯೋ ಯಂತ್ರ)
2. 1 ಕಿಮೀ ಓಟ + Sled Push (ಭಾರವಾದ ಸ್ಲೆಡ್ ಅನ್ನು 50 ಮೀಟರ್ ತಳ್ಳುವುದು)
3. 1 ಕಿಮೀ ಓಟ + Sled Pull (ಹಗ್ಗದ ಸಹಾಯದಿಂದ ಸ್ಲೆಡ್ ಅನ್ನು 50 ಮೀಟರ್ ಎಳೆಯುವುದು)
4. 1 ಕಿಮೀ ಓಟ + Burpee Broad Jumps (80 ಮೀಟರ್ ದೂರದವರೆಗೆ ಬರ್ಪಿ ಜಂಪ್ ಮಾಡುವುದು)
5. 1 ಕಿಮೀ ಓಟ + Rowing (1,000 ಮೀಟರ್ ರೋಯಿಂಗ್ ಯಂತ್ರ)
6. 1 ಕಿಮೀ ಓಟ + Farmers Carry (ಕೈಗಳಲ್ಲಿ ಭಾರವಾದ ಕೆಟಲ್‌ಬೆಲ್‌ಗಳನ್ನು ಹಿಡಿದು 200 ಮೀಟರ್ ನಡೆಯುವುದು)
7. 1 ಕಿಮೀ ಓಟ + Sandbag Lunges (ಬೆನ್ನಿನ ಮೇಲೆ ಮರಳು ಚೀಲ ಹೊತ್ತು 100 ಮೀಟರ್ ಓಡುವುದು)
8. 1 ಕಿಮೀ ಓಟ + Wall Balls (ಭಾರವಾದ ಚೆಂಡನ್ನು ಸ್ಕ್ವಾಟ್ ಮಾಡಿ ನಿರ್ದಿಷ್ಟ ಎತ್ತರದ ಗೋಡೆಗೆ 100 ಬಾರಿ ಎಸೆಯುವುದು)
ಇದು ಏಕೆ ಜನಪ್ರಿಯವಾಗಿದೆ?
ಪ್ರೊಫೆಷನಲ್ ಕ್ರೀಡಾಪಟುಗಳಿಂದ ಹಿಡಿದು ಸಾಮಾನ್ಯ ಫಿಟ್‌ನೆಸ್ ಪ್ರೇಮಿಗಳವರೆಗೆ ಯಾರು ಬೇಕಾದರೂ ಇದರಲ್ಲಿ ಭಾಗವಹಿಸಬಹುದು. ಇದರಲ್ಲಿ ಒಬ್ಬರೇ ಸ್ಪರ್ಧಿಸಬಹುದು (Solo Open/Pro), ಜೋಡಿಯಾಗಿ (Doubles) ಅಥವಾ ನಾಲ್ಕು ಜನರ ತಂಡವಾಗಿ (Relay) ಭಾಗವಹಿಸಬಹುದು.
ಜಗತ್ತಿನ ಯಾವುದೇ ಮೂಲೆಯಲ್ಲಿ ಸ್ಪರ್ಧೆ ನಡೆದರೂ ನಿಯಮಗಳು ಮತ್ತು ವರ್ಕೌಟ್‌ಗಳು ಒಂದೇ ಆಗಿರುವುದರಿಂದ, ಸ್ಪರ್ಧಿಗಳು ತಮ್ಮ ಸಮಯವನ್ನು ಜಾಗತಿಕ ಲೀಡರ್‌ಬೋರ್ಡ್‌ನಲ್ಲಿ ಇತರರೊಂದಿಗೆ ಸುಲಭವಾಗಿ ಹೋಲಿಸಿಕೊಳ್ಳಬಹುದು.
ಬೆಂಗಳೂರಿನಲ್ಲೂ ನಡೆದಿತ್ತು ಸ್ಪರ್ಧೆ
ಕಳೆದ ವರ್ಷ ಮೇ ತಿಂಗಳಿನಲ್ಲಿ ಮುಂಬೈನ ನೆಸ್ಕೋ ಸೆಂಟರ್‌ನಲ್ಲಿಯಶಸ್ವಿಯಾಗಿ ಆಯೋಜಿಸುವ ಮೂಲಕ ಇದು ಭಾರತಕ್ಕೆ ಹೈರಾಕ್ಸ್ ಅಧಿಕೃತವಾಗಿ ಪಾದಾರ್ಪಣೆ ಮಾಡಿತು. ಈ ಚೊಚ್ಚಲ ಆವೃತ್ತಿಯಲ್ಲಿ ಸುಮಾರು 1,650 ಕ್ಕೂ ಹೆಚ್ಚು ಕ್ರೀಡಾಪಟುಗಳು ಮತ್ತು ಫಿಟ್‌ನೆಸ್ ಆಸಕ್ತರು ಭಾಗವಹಿಸಿದ್ದರು.
ಬೆಂಗಳೂರಿನಲ್ಲಿ ಮೊದಲ ಬಾರಿಗೆ ಹೈರಾಕ್ಸ್ ಈ ವರ್ಷದ ಏಪ್ರಿಲ್ 11 ಮತ್ತು 12 ರಂದು ಯಶಸ್ವಿಯಾಗಿ ನಡೆದಿತ್ತು. ತುಮಕೂರು ರಸ್ತೆಯಲ್ಲಿರುವ ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ(BIEC) ಎರಡು ದಿನಗಳ ನಡೆದ ಈ ರೇಸ್‌ನಲ್ಲಿ 8,200ಕ್ಕೂ ಹೆಚ್ಚು ಕ್ರೀಡಾಪಟುಗಳು ಮತ್ತು 12,000ಕ್ಕೂ ಹೆಚ್ಚು ಪ್ರೇಕ್ಷಕರು ಭಾಗವಹಿಸುವ ಮೂಲಕ ದೇಶದಲ್ಲೇ ಬೃಹತ್ ದಾಖಲೆ ನಿರ್ಮಿಸಿತ್ತು. ಇದೇ ಯಶಸ್ಸಿನ ಮುಂದುವರಿದ ಭಾಗವಾಗಿ ಮುಂದಿನ ವರ್ಷ ಮೇ 12–16 ವರೆಗೆ ಭಾರತದ ಮೊದಲ ಐದು ದಿನಗಳ ಬೃಹತ್ ಹೈರಾಕ್ಸ್ ರೇಸ್ ಮತ್ತೆ ಬೆಂಗಳೂರಿನ BIEC ನಲ್ಲೇ ನಡೆಯಲು ದಿನಾಂಕ ನಿಗದಿಯಾಗಿದೆ.
ದರ ಎಷ್ಟು?
ಹೈರಾಕ್ಸ್ ಜಾಗತಿಕವಾಗಿ ಟೈರ್ ಸಿಸ್ಟಮ್ ಅಥವಾ ಡೈನಾಮಿಕ್ ಪ್ರೈಸಿಂಗ್ ಮಾದರಿಯನ್ನು ಅನುಸರಿಸುತ್ತದೆ. ಅಂದರೆ ಟಿಕೆಟ್‌ಗಳು ಬೇಗ ಬುಕ್ ಆದಂತೆಲ್ಲಾ ಮತ್ತು ರೇಸ್ ದಿನಾಂಕ ಹತ್ತಿರ ಬಂದಂತೆಲ್ಲಾ ಬೆಲೆಗಳು ಹೆಚ್ಚಾಗುತ್ತಾ ಹೋಗುತ್ತವೆ.
ನೋಂದಣಿ (Registrations) ಪ್ರಾರಂಭವಾದ ಮೊದಲ ಕೆಲವು ದಿನಗಳವರೆಗೆ ಅಥವಾ ನಿಗದಿತ ಸೀಟುಗಳವರೆಗೆ ಅತ್ಯಂತ ಕಡಿಮೆ ಬೆಲೆಗೆ (Early Bird) ಟಿಕೆಟ್‌ಗಳು ಸಿಗುತ್ತವೆ. ಉದಾಹರಣೆಗೆ, ಬೆಂಗಳೂರಿನ ಮೊದಲ ಆವೃತ್ತಿಯ ನೋಂದಣಿ ಆರಂಭವಾದಾಗ ಆರಂಭಿಕ ಹಂತದಲ್ಲಿ ಟಿಕೆಟ್‌ಗಳನ್ನು ಕಡಿಮೆ ದರಕ್ಕೆ ನೀಡಲಾಗಿತ್ತು. ಅರ್ಲಿ ಬರ್ಡ್ ಸೀಟುಗಳು ಭರ್ತಿಯಾದ ನಂತರ, ಬೆಲೆಗಳು ಟೈರ್ 1, ಟೈರ್ 2, ಟೈರ್ 3 ಎಂದು ಹಂತಹಂತವಾಗಿ ₹500 ರಿಂದ ₹1,500 ರವರೆಗೆ ಹೆಚ್ಚಾಗುತ್ತಾ ಹೋಗುತ್ತವೆ. ಕೊನೆಯ ಹಂತದಲ್ಲಿ ಉಳಿಯುವ ಟಿಕೆಟ್‌ಗಳ ದರ ಗರಿಷ್ಠ ಮಟ್ಟದಲ್ಲಿರುತ್ತದೆ.
ಸ್ಪರ್ಧಾಳುಗಳ (Athletes) ಟಿಕೆಟ್ ದರಗಳು ಏರಿಕೆಯಾಗುತ್ತಾ ಹೋದರೂ, ಸಾಮಾನ್ಯವಾಗಿ ವೀಕ್ಷಕರ ಪಾಸ್‌ಗಳ ಬೆಲೆಯಲ್ಲಿ ದೊಡ್ಡ ಮಟ್ಟದ ಬದಲಾವಣೆ ಇರುವುದಿಲ್ಲ.

