ನವದೆಹಲಿ: ಮುಂಬರುವ ದಸರಾ(Dasara) ಮತ್ತು ದೀಪಾವಳಿ(Deepaali) ಹಬ್ಬದ ಶಾಪಿಂಗ್ ಸೀಸನ್ ಗ್ರಾಹಕರ ಜೇಬಿಗೆ ಮತ್ತಷ್ಟು ಕತ್ತರಿ ಬೀಳಲಿದೆ. ಪ್ರಸಕ್ತ ವರ್ಷದಲ್ಲಿ ಎಲೆಕ್ಟ್ರಾನಿಕ್ಸ್ ವಲಯದಲ್ಲಿ ನಡೆಯುತ್ತಿರುವ ಮೂರನೇ ಸುತ್ತಿನ ಬೆಲೆ ಏರಿಕೆ(Price Hike) ಇದಾಗಿದೆ.
ಪ್ರಮುಖ ಗೃಹೋಪಯೋಗಿ ಉಪಕರಣಗಳು ಹಾಗೂ ಕನ್ಸ್ಯೂಮರ್ ಎಲೆಕ್ಟ್ರಾನಿಕ್ಸ್(Consumer Electronics) ತಯಾರಿಕಾ ಕಂಪನಿಗಳು ಎಲ್ಇಡಿ ಟಿವಿ, ಹವಾನಿಯಂತ್ರಕಗಳು (AC), ವಾಷಿಂಗ್ ಮೆಷಿನ್ ಸೇರಿದಂತೆ ಇತರೆ ಗೃಹೋಪಯೋಗಿ ವಸ್ತುಗಳ ದರವನ್ನು ಅಕ್ಟೋಬರ್ 1 ರಿಂದ ಶೇ. 5 ರಿಂದ 8ರಷ್ಟು ಹೆಚ್ಚಿಸಲು ಮುಂದಾಗಿವೆ.
ದರ ಏರಿಕೆಗೆ ಕಾರಣವೇನು?
ತಾಮ್ರ (ಕಾಪರ್), ಅಲ್ಯೂಮಿನಿಯಂ, ಉಕ್ಕು (ಸ್ಟೀಲ್) ಮತ್ತು ಕಚ್ಚಾ ತೈಲ ಉಪಉತ್ಪನ್ನಗಳ ಬೆಲೆಯಲ್ಲಿ ನಿರಂತರ ಏರಿಕೆಯಾಗುತ್ತಿರುವುದು ಹಾಗೂ ಸರಕು ಸಾಗಣೆ ವೆಚ್ಚ ಹೆಚ್ಚಾಗಿರುವುದು ಬೆಲೆ ಏರಿಕೆಗೆ ಮುಖ್ಯ ಕಾರಣ ಎಂದು ಕಂಪನಿಗಳು ತಿಳಿಸಿವೆ. ಜೊತೆಗೆ ಪಶ್ಚಿಮ ಏಷ್ಯಾದ ಬಿಕ್ಕಟ್ಟಿನಿಂದಾಗಿ ಕರೆನ್ಸಿ ವಿನಿಮಯ ದರದಲ್ಲಿನ ಏರಿಳಿತಗಳು ಉತ್ಪಾದನಾ ವೆಚ್ಚವನ್ನು ಹೆಚ್ಚಿಸಿದ್ದು, ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ಪಿಟಿಐ ವರದಿ ತಿಳಿಸಿದೆ.
ಓಣಂನಿಂದ ಹಿಡಿದು ದಸರಾ ಮತ್ತು ದೀಪಾವಳಿಯವರೆಗಿನ ಹಬ್ಬದ ಅವಧಿಯು ಗೃಹೋಪಯೋಗಿ ಉಪಕರಣ ತಯಾರಕರ ವಾರ್ಷಿಕ ಮಾರಾಟದಲ್ಲಿ ಶೇ.30 ರಿಂದ 40ರಷ್ಟು ಪಾಲನ್ನು ಹೊಂದಿರುತ್ತದೆ. ಹೀಗಾಗಿ ಈ ದರ ಹೆಚ್ಚಳವು ಹಬ್ಬದ ಬೇಡಿಕೆಯ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕವೂ ವ್ಯಕ್ತವಾಗಿದೆ. ಆದರೆ ಡೀಲರ್ಗಳು ಮತ್ತು ವಿತರಕರು ಆಗಸ್ಟ್ ಮತ್ತು ಸೆಪ್ಟೆಂಬರ್ನಲ್ಲೇ ಹಳೆಯ ದರದಲ್ಲಿ ಅಗತ್ಯ ದಾಸ್ತಾನು ಮಾಡಿಕೊಂಡಿರುವುದರಿಂದ ಆರಂಭದಲ್ಲಿ ಇದರ ಪರಿಣಾಮ ಸೀಮಿತವಾಗಿರಲಿದೆ ಎಂದೂ ಅಂದಾಜಿಸಲಾಗಿದೆ.
ಯಾವ ಉತ್ಪನ್ನಗಳ ಬೆಲೆ ಎಷ್ಟು ಏರಿಕೆ?
ಹವಾನಿಯಂತ್ರಕಗಳು (AC) ಮತ್ತು ಡೀಪ್ ಫ್ರೀಜರ್:ಎಸಿಗಳ ಬೆಲೆ ಶೇ. 5 ರಿಂದ 8ರಷ್ಟು ಏರಿಕೆಯಾಗಲಿದೆ. ಬ್ಲೂ ಸ್ಟಾರ್ ಕಂಪನಿಯು ಈಗಾಗಲೇ ಎಸಿ ಮತ್ತು ಡೀಪ್ ಫ್ರೀಜರ್ಗಳ ದರವನ್ನು ಶೇ. 5 ರಿಂದ 8ರಷ್ಟು ಹೆಚ್ಚಿಸಿದೆ. ಎಲ್ಜಿ ಮತ್ತು ಬೋಷ್ ಹೋಮ್ ಕಂಫರ್ಟ್ (ಹಿಟಾಚಿ) ಕಂಪನಿಗಳು ಸಹ ಎಸಿ ಬೆಲೆಯನ್ನು ಸುಮಾರು ಶೇ. 5ರಷ್ಟು ಹೆಚ್ಚಿಸಿವೆ.
ಫ್ರಿಡ್ಜ್, ವಾಷಿಂಗ್ ಮೆಷಿನ್, ಟಿವಿ:** ವಾಷಿಂಗ್ ಮೆಷಿನ್, ರೆಫ್ರಿಜರೇಟರ್ ಹಾಗೂ ಎಲ್ಇಡಿ ಟಿವಿಗಳ ಬೆಲೆ ಶೇ.3 ರಿಂದ 4ರಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಬ್ಲೂ ಸ್ಟಾರ್, ಗೋದ್ರೇಜ್ ಅಪ್ಲೈಯನ್ಸಸ್, ಹೈಯರ್, ಡೈಕಿನ್ ಮತ್ತು ಸೂಪರ್ ಪ್ಲಾಸ್ಟ್ರಾನಿಕ್ಸ್ ಈಗಾಗಲೇ ಶೇ.4 ರಿಂದ 10ರಷ್ಟು ದರ ಹೆಚ್ಚಳವನ್ನು ಖಚಿತಪಡಿಸಿವೆ. ಪ್ಯಾನಾಸಾನಿಕ್ ಪರಿಸ್ಥಿತಿಯನ್ನು ಅವಲೋಕಿಸುತ್ತಿದೆ.
ಟಿವಿಗಳ ಬೆಲೆ:** ವಿಡಿಯೋಟೆಕ್ಸ್ ಸಂಸ್ಥೆಯ ಪ್ರಕಾರ, ಸಣ್ಣ ಪರದೆಯ ಟಿವಿಗಳ ಬೆಲೆ ಶೇ. 20ರವರೆಗೆ ಮತ್ತು ದೊಡ್ಡ ಪರದೆಯ ಟಿವಿಗಳ ಬೆಲೆ ಶೇ. 10ರವರೆಗೆ ಹೆಚ್ಚಾಗಬಹುದು. ಸೂಪರ್ ಪ್ಲಾಸ್ಟ್ರಾನಿಕ್ಸ್ (SPPL) ಕೂಡ ಅಕ್ಟೋಬರ್ ನಂತರ ಟಿವಿ ಬೆಲೆಯನ್ನು ಶೇ.7ರಷ್ಟು ಹೆಚ್ಚಿಸಲು ಯೋಜಿಸಿದೆ.

