ಮಂಡ್ಯ: ಜಿಲ್ಲೆಯ ಮದ್ದೂರು ತಾಲ್ಲೂಕಿನ ಹೆಚ್.ಹೊಸಹಳ್ಳಿ ಗ್ರಾಮದಲ್ಲಿ ಕಳೆದ ಒಂದು ತಿಂಗಳಿಂದ ಜನಸಾಮಾನ್ಯರು ಹಾಗೂ ರೈತರ ನಿದ್ದೆಗೆಡಿಸಿದ್ದ ಚಿರತೆ (leopard) ಕೊನೆಗೂ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದೆ.
ಕಳೆದ ಒಂದು ತಿಂಗಳಿಂದ ಹೆಚ್.ಹೊಸಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಚಿರತೆ ಪ್ರತ್ಯಕ್ಷವಾಗಿ ನಿರಂತರ ಭಯದ ವಾತಾವರಣ ಸೃಷ್ಟಿಸಿತ್ತು. ಈ ಚಿರತೆಯು ಈವರೆಗೆ ಒಟ್ಟು 8 ಮೇಕೆಗಳು, 2 ನಾಯಿಗಳು, 1 ಹಸುವಿನ ಕರು ಹಾಗೂ 1 ಎಮ್ಮೆ ಕರುವನ್ನು ಬೇಟೆಯಾಡಿ ತಿಂದಿತ್ತು.

ಚಿರತೆ ನಿರಂತರ ದಾಳಿಯಿಂದಾಗಿ ಜಮೀನುಗಳಿಗೆ ತೆರಳಲು ಗ್ರಾಮಸ್ಥರು ಹೆದರುತ್ತಿದ್ದರು. ಕೂಡಲೇ ಚಿರತೆಯನ್ನ ಸೆರೆಹಿಡಿಯುವಂತೆ ಸಾರ್ವಜನಿಕರು ತೀವ್ರ ಆಗ್ರಹಿಸಿದ್ದರು. ಜನರ ಬೇಡಿಕೆಗೆ ಅರಣ್ಯ ಇಲಾಖೆ ಸಿಬ್ಬಂದಿ ಗ್ರಾಮದಲ್ಲಿ ಬೋನ್ ಇರಿಸಿದ್ದರು. ಬೋನಿನೊಳಗೆ ನಾಯಿಯನ್ನ ಇರಿಸಲಾಗಿದ್ದು, ಅದನ್ನ ತಿನ್ನಲು ಬಂದ ಚಿರತೆ ಇಲಾಖೆಯ ಬಲೆಗೆ ಬಿದ್ದಿದೆ.
ಚಿರತೆ ಸೆರೆಯಾಗುತ್ತಿದ್ದಂತೆ ಹೆಚ್.ಹೊಸಹಳ್ಳಿ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದು, ಜೀವಭಯವಿಲ್ಲದೆ ಮುಕ್ತವಾಗಿ ಓಡಾಡುವಂತಾಗಿದೆ. ಕಾರ್ಯಾಚರಣೆ ನಡೆಸಿ ಚಿರತೆಯನ್ನು ಬಂಧಿಸಿದ ಅರಣ್ಯ ಇಲಾಖೆ ಅಧಿಕಾರಿಗಳ ಕಾರ್ಯಕ್ಕೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.

