– ಪ್ರದೋಷ್ಗೆ ಹೊರಗಿನಿಂದ ಬರೋ ಊಟ-ತಿಂಡಿ, ನೀರಿನ ಮೇಲೂ ನಿಗಾ
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಪ್ರಕರಣದ 14ನೇ ಆರೋಪಿ ಆಗಿದ್ದ ಪ್ರದೋಷ್ ಇದೀಗ ಮಾಫಿ ಸಾಕ್ಷಿ (Approver) ಆಗಿ ಪ್ರಾಸಿಕ್ಯೂಷನ್ ಪರ ಸಾಕ್ಷಿಯಾಗಲಿದ್ದಾರೆ. ಈ ಹಿನ್ನೆಲೆ ಆರೋಪ ಪಟ್ಟಿಯಿಂದ ಪ್ರದೋಷ್ ಹೆಸರು ಡಿಲೀಟ್ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಪ್ರದೋಷ್ನನ್ನ (Pradosh) ಮಾಫಿ ಸಾಕ್ಷಿಯಾಗಿ ಪರಿಗಣಿಸುವ ವಿಚಾರದಲ್ಲಿ ನಡೆದ ಕಾನೂನು ಪ್ರಕ್ರಿಯೆಯ ಬಳಿಕ, ಸೆಪ್ಟೆಂಬರ್ 16ರಂದು ಬೆಂಗಳೂರಿನ 59ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ಅವರ ಅರ್ಜಿಯನ್ನ ಅಂಗೀಕರಿಸಿತ್ತು. ಬಳಿಕ ಸೆ.23 ರಂದು ಕರ್ನಾಟಕ ಹೈಕೋರ್ಟ್ ಕೂಡ ಪ್ರದೋಷ್ ಅವರನ್ನ ಅಪ್ರೂವರ್ ಆಗಿ ಪರಿಗಣಿಸಿದ ವಿಚಾರಣಾ ನ್ಯಾಯಾಲಯದ (Trial Court) ಆದೇಶವನ್ನ ಎತ್ತಿಹಿಡಿದಿದೆ.

ಪ್ರದೋಷ್ ಇನ್ಮುಂದೆ ಆರೋಪಿ ಅಲ್ಲ?
ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Murder Case) ಚಾರ್ಜ್ಶೀಟ್ನಲ್ಲಿ ಈ ಹಿಂದೆ ಪ್ರದೋಷ್ನನ್ನ 14ನೇ ಆರೋಪಿ (A-14) ಎಂದು ಹೆಸರಿಸಲಾಗಿತ್ತು. ಆದರೀಗ ನ್ಯಾಯಾಲಯದ ಮಾಫಿ ಸಾಕ್ಷಿ ಆದೇಶದ ಹಿನ್ನೆಲೆ, ಪ್ರದೋಷ್ ಪ್ರಾಸಿಕ್ಯೂಷನ್ ಸಾಕ್ಷಿಯಾಗಿ ವಿಚಾರಣೆಗೆ ಒಳಪಡಲಿದ್ದಾರೆ. ಈ ಹಿನ್ನೆಲೆ ಚಾರ್ಚ್ಶೀಟ್ನಿಂದ ಹೆಸರು ಡಿಲೀಟ್ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮಾಫಿ ಸಾಕ್ಷಿಯಾಗಿ ಪರಿಗಣಿಸಲ್ಪಟ್ಟಿದ್ದರೂ ಪ್ರದೋಷ್ ವಿಚಾರಣೆ ಮುಗಿಯುವವರೆಗೆ ಜೈಲಿನಲ್ಲೇ ಇರಬೇಕಾಗುತ್ತದೆ. ಅವರು ಪ್ರಮುಖ ಮಾಹಿತಿಯನ್ನು ಮರೆಮಾಚಿದರೆ, ಸುಳ್ಳು ಸಾಕ್ಷ್ಯ ನೀಡಿದ್ರೆ ಅಥವಾ ನ್ಯಾಯಾಲಯ ವಿಧಿಸಿರುವ ಷರತ್ತುಗಳನ್ನ ಉಲ್ಲಂಘಿಸಿದರೆ ಮತ್ತೆ ಆರೋಪಿಯಾಗಿ ವಿಚಾರಣೆ ಎದುರಿಸುವ ಸಾಧ್ಯತೆಯೂ ಇದೆ.
ಪ್ರದೋಷ್ ಮೇಲೆ ಜೈಲಿನಲ್ಲಿ ನಿಗಾ ಹೆಚ್ಚಳ?
ಮಾಫಿ ಸಾಕ್ಷಿಯಾಗಿರುವ ಹಿನ್ನೆಲೆ ಪ್ರದೋಷ್ ಭದ್ರತೆ ಹಾಗೂ ಜೈಲಿನಲ್ಲಿನ ಚಟುವಟಿಕೆಗಳ ಮೇಲೆ ಹೆಚ್ಚಿನ ನಿಗಾ ಇರಿಸಲಾಗಿದೆ. 24/7 ಸಿಸಿಟಿವಿ ಕಣ್ಗಾವಲು, ಹೊರಗಿನಿಂದ ಬರುವ ಊಟ-ತಿಂಡಿ-ನೀರಿನ ಪರಿಶೀಲನೆ ಹಾಗೂ ಭೇಟಿ ನೀಡುವ ಪ್ರತಿಯೊಬ್ಬರ ಸಂಪೂರ್ಣ ಮಾಹಿತಿ ಸಂಗ್ರಹ ಸೇರಿದಂತೆ ಜೈಲಿನಲ್ಲಿ ಯಾವುದೇ ರೀತಿಯ ತೊಂದರೆ ಆಗದಂತೆ ಹದ್ದಿನ ಕಣ್ಣು ಇಡಲಾಗಿದೆ ಎಂದು ಜೈಲು ಮೂಲಗಳು ತಿಳಿಸಿವೆ.

