ಬೆಂಗಳೂರು: ಶಿಕ್ಷಕರ ವರ್ಗಾವಣೆ ನಿಯಮಗಳ ಕರಡು ಅಧಿಸೂಚನೆಯನ್ನು ಸರ್ಕಾರ ಹೊರಡಿಸಿದೆ. 2020ರ ನಿಯಮಕ್ಕೆ ತಿದ್ದುಪಡಿ ತರಲು ಕರಡು ಅಧಿಸೂಚನೆ ಹೊರಡಿಸಿರುವ ಸರ್ಕಾರ, 15 ದಿನಗಳ ಒಳಗಾಗಿ ಸಾರ್ವಜನಿಕರಿಂದ ಆಕ್ಷೇಪಣೆಗೆ ಅವಕಾಶ ಕಲ್ಪಿಸಿದೆ.
ವರ್ಗಾವಣೆಗಾಗಿ ಶಿಕ್ಷಕರು ‘ಸಿ’ ‘ಬಿ’ ಮತ್ತು ‘ಎ’ ವಲಯಗಳಲ್ಲಿ ಹಾಗೂ ಪ್ರಸ್ತುತ ಶಾಲೆಯಲ್ಲಿ ಸೇವೆ ಸಲ್ಲಿಸಿದ ವರ್ಷಗಳ ಆಧಾರದ ಮೇಲೆ ಭಾರ ಅಂಕಗಳನ್ನು ಲೆಕ್ಕಹಾಕಲು ಹೊಸ ಸೂತ್ರ ರೂಪಿಸಿದೆ. ಜಿಲ್ಲೆಯೊಳಗೆ ಶೇ.7, ವಿಭಾಗದೊಳಗೆ ಶೇ.2, ವಿಭಾಗದ ಹೊರಗೆ ಶೇ.2 ಹಾಗೂ ವಲಯ ವರ್ಗಾವಣೆಗೆ ಶೇ.4 ವರ್ಗಾವಣೆ ಮಿತಿ ಇದೆ.
ಮಾರಣಾಂತಿಕ ಕಾಯಿಲೆಗಳು ಅಥವಾ ಶೇ.40ಕ್ಕಿಂತ ಹೆಚ್ಚಿನ ಅಂಗವೈಕಲ್ಯವಿರುವ ಸಂದರ್ಭಗಳಲ್ಲಿ ವರ್ಗಾವಣೆ ಕೋರಲು ಪರಿಶೀಲನೆ ಪತ್ರ ಕಡ್ಡಾಯವಾಗಿದೆ. ಶೈಕ್ಷಣಿಕ ಬ್ಲಾಕ್ ಹಾಗೂ ವಿಭಾಗ ಮಟ್ಟದಲ್ಲಿ ಲಭ್ಯವಿರುವ ನಿರ್ಣಾಯಕ ಖಾಲಿ ಹುದ್ದೆಗಳನ್ನು ಕೆಲವು ನಿರ್ದಿಷ್ಟ ಆದ್ಯತೆಗಳನ್ನು ಹೊರತುಪಡಿಸಿ ಮೊದಲು ಭರ್ತಿ ಮಾಡಲು ಅವಕಾಶ ಇದೆ.
ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗಗಳ ವಿವಿಧ ವೃಂದಗಳ ಶಿಕ್ಷಕರಿಗೆ ತಂತ್ರಾಂಶದ ಮೂಲಕ ವೃಂದವಾರು ಆನ್ಲೈನ್ ಕೌನ್ಸೆಲಿಂಗ್ ನಡೆಸಲಾಗುವುದು. ಒಂದು ಶಾಲೆಯಲ್ಲಿ ಹುದ್ದೆ ಅನಗತ್ಯವಾಗಿ ಅಥವಾ ಹೆಚ್ಚುವರಿ ಎಂದು ಗುರುತಿಸಲ್ಪಟ್ಟು ಸ್ಥಳಾಂತರಗೊಂಡರೆ, ಅಂತಹ ಹುದ್ದೆಯಲ್ಲಿರುವ ಶಿಕ್ಷಕರಿಗೆ ವರ್ಗಾವಣೆಯಲ್ಲಿ ಯಾವುದೇ ವಿನಾಯಿತಿ ಇಲ್ಲ.
