ಬೆಂಗಳೂರು: ಎಥೆನಾಲ್ ವಿಚಾರದಲ್ಲಿ ದೊಡ್ಡ ಫ್ರಾಡ್ ನಡೆದಿದೆ ಎಂದು ಸಚಿವ ಸಂತೋಷ್ ಲಾಡ್ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಲಾಡ್, ಈಗ ಎಥೆನಾಲ್ ವಿಚಾರದಲ್ಲಿ ಒಂದು ದೊಡ್ಡ ಫ್ರಾಡ್ ನಡೆದಿದೆ. ಇದರ ಬಗ್ಗೆ ಯಾರೂ ಚರ್ಚೆ ಮಾಡುವುದಿಲ್ಲ. ಹೌದು, ಇದು 100% ಹಗರಣ ಏಕೆಂದರೆ ಪೆಟ್ರೋಲ್ನಲ್ಲಿ ಎಥೆನಾಲ್ ಮಿಶ್ರಣ ಮಾಡುವುದಕ್ಕೆ ಕೇಂದ್ರ ಸರ್ಕಾರದ ಮಾರ್ಗಸೂಚಿಗಳಿವೆ. ಮೊದಲು 5%, ನಂತರ 10% ಮಿಶ್ರಣ ಮಾಡಬೇಕಾಗಿತ್ತು ಮತ್ತು ಗರಿಷ್ಠ ಮಿತಿ 20% ಇದೆ ಹಾಗಿದ್ದರೆ, ನೀವು ಏಕೆ 30% ಮಿಶ್ರಣ ಮಾಡುತ್ತಿದ್ದೀರಿ? 30% ಮಿಶ್ರಣ ಮಾಡುತ್ತಿದ್ದೀರಿ ಎಂದರೆ, ನಿಗದಿತ ಮಿತಿಗಿಂತ 50% ಹೆಚ್ಚು ಮಿಶ್ರಣ ಮಾಡುತ್ತಿದ್ದೀರಿ ಎಂದರ್ಥವಲ್ಲವೇ? 20% ಇರಬೇಕಾದದ್ದನ್ನು ನೀವು 30%ಗೆ ಏರಿಸಿದ್ದೀರಿ ಎಂದರೆ, ಕಾನೂನು ಬಾಹಿರವಾಗಿ 50% ಹೆಚ್ಚುವರಿ ಮಿಶ್ರಣ ಮಾಡುತ್ತಿದ್ದೀರಿ ಯಾವ ಮಾರ್ಗಸೂಚಿಯ ಅಡಿಯಲ್ಲಿ ನೀವು ಇದನ್ನು ಮಾಡುತ್ತಿದ್ದೀರಿ…? 30% ಎಥೆನಾಲ್ ಮಿಶ್ರಣ ಮಾಡುವ ಮೂಲಕ ಅದಾನಿ ಎಷ್ಟು ಲಾಭ ಮಾಡುತ್ತಿದ್ದಾರೆ. ಅಂಬಾನಿ ಎಷ್ಟು ಲಾಭ ಮಾಡುತ್ತಿದ್ದಾರೆ ಮತ್ತು ಕೇಂದ್ರ ಸರ್ಕಾರ ಎಷ್ಟು ಲಾಭ ಮಾಡುತ್ತಿದೆ ಎಂಬುದನ್ನೇ ನಾನು ಕೇಳುತ್ತಿರುವುದು ನೀವು ಎಥೆನಾಲ್ ಖರೀದಿ ಮಾಡುತ್ತಿರುವ ದರ ಎಷ್ಟು? ನೀವು ಯಾವ ಬೆಲೆಗೆ ಎಥೆನಾಲ್ ಖರೀದಿಸುತ್ತಿದ್ದೀರಿ? ಅದನ್ನೇ ನಾವು ಹೇಳುತ್ತಿದ್ದೇವೆ. ಸಕ್ಕರೆ ಕಾರ್ಖಾನೆ ಸ್ಥಾಪಿಸಬೇಕೆಂದರೆ ಕೇಂದ್ರ ಸರ್ಕಾರವೇ ಪರವಾನಗಿ ನೀಡುತ್ತದೆ. ಎಥೆನಾಲ್ ಘಟಕ ಸ್ಥಾಪಿಸಬೇಕೆಂದರೂ ಕೇಂದ್ರ ಸರ್ಕಾರವೇ ಪರವಾನಗಿ ನೀಡುತ್ತದೆ. ಸಕ್ಕರೆಯನ್ನು ಯಾವ ಬೆಲೆಗೆ ಮಾರಾಟ ಮಾಡಬೇಕು ಎಂಬುದನ್ನೂ ಕೇಂದ್ರ ಸರ್ಕಾರವೇ ನಿರ್ಧರಿಸುತ್ತದೆ. ಯಾವ ಗೋದಾಮಿನಲ್ಲಿ ಎಷ್ಟು ಸಕ್ಕರೆ ಸಂಗ್ರಹವಿದೆ ಎಂಬ ಮಾಹಿತಿಯೂ ಕೇಂದ್ರ ಸರ್ಕಾರದ ಬಳಿ ಇರುತ್ತದೆ ಕನಿಷ್ಠ ಮಾರಾಟ ಬೆಲೆಯನ್ನು (Minimum Selling Price) ಸರ್ಕಾರವೇ ನಿಗದಿಪಡಿಸುತ್ತದೆ. ಸಕ್ಕರೆ ಆಮದು ಎಷ್ಟು ಮಾಡಿಕೊಳ್ಳಬೇಕು ಎಂಬ ಎಲ್ಲವನ್ನೂ ಕೇಂದ್ರ ಸರ್ಕಾರವೇ ನಿರ್ಧರಿಸುತ್ತದೆ. ಎಲ್ಲವನ್ನೂ ಕೇಂದ್ರ ಸರ್ಕಾರವೇ ಮಾಡಿ, ಇಂದು ರಾಜ್ಯ ಸರ್ಕಾರಗಳಿಗೆ ಹಣ ನೀಡಿ ಎಂದು ಹೇಳುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಇಂದು ಎಥೆನಾಲ್ ಉತ್ಪಾದನೆ ಮಾಡಿ ಮಾಡಿ, ನಿತಿನ್ ಗಡ್ಕರಿ ಅವರು ಬೆಳಿಗ್ಗೆ ಮತ್ತು ಸಾಯಂಕಾಲ ಎಥೆನಾಲ್ ನೀತಿಯ ಬಗ್ಗೆಯೇ ಮಾತನಾಡುತ್ತಿದ್ದಾರೆ. ಇಂದು ಎಥೆನಾಲ್ ಉದ್ಯಮ ತೊಂದರೆಗೆ ಸಿಲುಕಿದ್ದರೆ ಅದಕ್ಕೆ ಕಾರಣ ಯಾರು? ಇವರ ನೀತಿಯಲ್ಲಿಯೇ ದೋಷವಿದೆ ಎಂದರ್ಥವಲ್ಲವೇ? ಇಂದು ಎಲ್ಲಾ ಕೈಗಾರಿಕಾ ಇಲಾಖೆಗಳು ಮತ್ತು ಆಟೋಮೋಟಿವ್ ಬಿಡಿಭಾಗಗಳ ಉದ್ಯಮದವರು ಈ ಬಗ್ಗೆ ಪತ್ರ ಬರೆದಿದ್ದಾರೆ. ಎಥೆನಾಲ್ ಅನ್ನು ಹೆಚ್ಚು ಮಿಶ್ರಣ ಮಾಡಿದರೆ ವಾಹನಗಳಿಗೆ ತೊಂದರೆಯಾಗುತ್ತದೆ. ಎಂಜಿನ್ ಹಾಳಾಗುತ್ತದೆ ಮತ್ತು ಎಂಜಿನ್ ರಿಪೇರಿಗೆ ಬರುತ್ತದೆ ಎಂದು ಅವರು ತಿಳಿಸಿದ್ದಾರೆ. ಆದರೆ, ಅದರ ಬಗ್ಗೆ ಯಾವುದೇ ಚರ್ಚೆ ನಡೆಯುತ್ತಿಲ್ಲ. ಎಥೆನಾಲ್ ವಿಚಾರದಲ್ಲಿ ಬೇರೆ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವಿರುವುದರಿಂದ ಅವರು ಈ ಸಮಸ್ಯೆಯನ್ನು ಪ್ರಶ್ನಿಸುವುದಿಲ್ಲ. ನಮ್ಮ ರಾಜ್ಯದಲ್ಲಿ ಸಮಸ್ಯೆ ಇದೆ. ಆದ್ದರಿಂದ ಇರುವ ಸಮಸ್ಯೆಯನ್ನು ನಾವು ಹೇಳುತ್ತಿದ್ದೇವೆ. ಈಗ ನೀವು ಯಾವ ಆಧಾರದ ಮೇಲೆ 30% ಮಿಶ್ರಣ ಮಾಡುತ್ತಿದ್ದೀರಿ..? 30% ಮಿಶ್ರಣ ಮಾಡಲು ನಿಮಗೆ ಹೇಳಿದವರು ಯಾರು..? 30% ಮಿಶ್ರಣ ಮಾಡಲು ಆದೇಶ ನೀಡಿದವರು ಯಾರು..? ನಿಮಗೆ ಇದನ್ನು ಮಾಡಲು ಹೇಳಿದವರು ಯಾರು ಎಂದು ಪ್ರಶ್ನಿಸಿದರು.
ಇದೆಲ್ಲವೂ ನಡೆಯುತ್ತಿದೆ. ತೈಲ ಮಾರುಕಟ್ಟೆಯಲ್ಲಿ ಎರಡು ರೀತಿಯ ವ್ಯವಸ್ಥೆ ಇದೆ. ಒಂದು, ನಮ್ಮಲ್ಲಿಯೇ ಉತ್ಪಾದನೆಯಾಗುವ ಎಥೆನಾಲ್ ಅನ್ನು ಖರೀದಿಸಿ ಮಿಶ್ರಣ ಮಾಡುತ್ತಿದ್ದೇವೆ. ಎಥೆನಾಲ್ ಅನ್ನು ಆಮದು ಮಾಡಿಕೊಳ್ಳುತ್ತಿಲ್ಲ. ಈಗ ಸ್ವಲ್ಪ ಪ್ರಮಾಣದಲ್ಲಿ ಎಥೆನಾಲ್ ಆಮದು ಮಾಡಿಕೊಂಡಿದ್ದರೂ, ಹೆಚ್ಚಾಗಿ 70% ರಿಂದ 90% ರಷ್ಟು ಎಥೆನಾಲ್ ನಮ್ಮದೇ ಸ್ವಂತ ಉತ್ಪಾದನೆಯಾಗಿದೆ. ನಾವು ಹೊರಗಡೆಯಿಂದ ತಂದಿರುವ ಸುಮಾರು 50 ಮಿಲಿಯನ್ ಬ್ಯಾರೆಲ್ಗಳ ಬಗ್ಗೆ ಚರ್ಚೆ ಬೇಡ. ನಮ್ಮ ರಾಜ್ಯ ಮತ್ತು ದೇಶದಲ್ಲಿ ಉತ್ಪಾದನೆಯಾಗುವ ಎಥೆನಾಲ್ ಅನ್ನು ನೀವು 55 ರಿಂದ 60 ರೂಪಾಯಿಗೆ ಖರೀದಿಸಿ, ಗ್ರಾಹಕರಿಗೆ 105 ರಿಂದ 110 ರೂಪಾಯಿಗೆ ಮಾರಾಟ ಮಾಡುತ್ತಿದ್ದೀರಿ. ಆ ಹೆಚ್ಚುವರಿ ಹಣ ಎಲ್ಲಿಗೆ ಹೋಗುತ್ತಿದೆ…? ಆ ಹಣದ ಮೇಲೆ ನಿಮಗಿರುವ ಹಕ್ಕಾದರೂ ಏನು? ಅದರ ಮೇಲೆ ನಿಮಗೆ ಯಾವುದೇ ಹಕ್ಕಿಲ್ಲ. ನೀವು ಹೊರಗಿನಿಂದ ಆಮದು ಮಾಡಿಕೊಳ್ಳುತ್ತೀರಿ. ಅದರ ಮೇಲೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಸೆಸ್ಗಳು ಇರುತ್ತವೆ, ಅದು ಸರಿ. ಆದರೆ, ಮಾರುಕಟ್ಟೆಯಲ್ಲಿ 55 ರಿಂದ 60 ರೂಪಾಯಿಗೆ ಎಥೆನಾಲ್ ಖರೀದಿಸಿ, 30% ಮಿಶ್ರಣ ಮಾಡುತ್ತಿದ್ದೀರಿ. ಅದಕ್ಕೆ ಯಾವುದೇ ಸಬ್ಸಿಡಿಯನ್ನೂ ನೀಡುತ್ತಿಲ್ಲ. ಹೊರದೇಶದಿಂದ ಕಡಿಮೆ ಬೆಲೆಗೆ ಕಚ್ಚಾ ತೈಲ ತಂದರೂ, ಅದಕ್ಕೂ ಸಬ್ಸಿಡಿ ನೀಡುತ್ತಿಲ್ಲ. ಹಾಗಾದರೆ, ಆ ಹಣವೆಲ್ಲಾ ಎಲ್ಲಿಗೆ ಹೋಯಿತು..? ಈ ದೇಶದಲ್ಲಿ ಮನಮೋಹನ್ ಸಿಂಗ್ ಅವರ ಸರ್ಕಾರವಿದ್ದಾಗ ಮೂರೂವರೆ ಲಕ್ಷ ಕೋಟಿ ರೂಪಾಯಿ ಸಬ್ಸಿಡಿ ನೀಡಲಾಗಿತ್ತು. ನಾವು ಸಬ್ಸಿಡಿ ಹೆಚ್ಚು ನೀಡಿದ್ದರಿಂದ ರಿಲಯನ್ಸ್ ಬಂಕ್ಗಳು ನಡೆಯುತ್ತಿರಲಿಲ್ಲ ಎಂದರು.
