ಡಿಯರ್ ಚಂದನ
ಏನಾಯಿತು ನಿನಗೆ? ಇತ್ತೀಚೆಗೆ ನಿನ್ನ ಮಾತುಗಳು ಕಡಿಮೆಯಾಗಿವೆ, ನಿನ್ನ ನಗು ದೂರವಾಗಿದೆ. ಈಗ ನಿನ್ನ ಮೌನ ಮಾತ್ರ ನನ್ನನ್ನು ಆವರಿಸಿದೆ. ನಿನ್ನಿಂದ ಒಂದು ಸಣ್ಣ ಮೆಸೇಜ್ ಬರಲಿ ಎಂದು ಕಾಯುತ್ತಾ, ಫೋನ್ ನೋಡುತ್ತಾ ಕಳೆಯುವ ಪ್ರತಿಯೊಂದು ಕ್ಷಣವೂ ನನಗೆ ಯುಗವಾಗುತ್ತಿದೆ.
ನಿನ್ನ ಮೌನದ ಅರ್ಥ ನನಗೆ ತಿಳಿಯುತ್ತಿಲ್ಲ ಚಂದು. ನನ್ನಿಂದ ಏನಾದ್ರೂ ತಪ್ಪಾಗಿದೆಯಾ? ನನ್ನ ಮಾತಿನಿಂದ ನಿನ್ನ ಮನಸ್ಸಿಗೆ ನೋವಾಗಿದೆಯಾ? ಅಥವಾ ನಿನ್ನ ಮನಸ್ಸಿನಲ್ಲಿ ಯಾವುದಾದರೂ ನೋವನ್ನು ನೀನೇ ಒಬ್ಬಳೇ ನುಂಗಿಕೊಂಡು ಕೊರಗ್ತಾ ಇದಿಯಾ?
ನಾನು ನಿನ್ನ ಕೋಪವನ್ನು ಸಹಿಸಬಲ್ಲೆ, ನಿನ್ನ ಗದರಿಕೆಯನ್ನೂ ಸಹಿಸಬಲ್ಲೆ..! ಆದರೆ ನಿನ್ನ ಮೌನವನ್ನು ಮಾತ್ರ ನನಗೆ ಸಹಿಸಲಾಗುತ್ತಿಲ್ಲ. ಏಕೆಂದರೆ ನಿನ್ನ ಮೌನದೊಳಗೆ ನನ್ನ ಬಗ್ಗೆ ಏನಿದೆ ಎಂಬುದೇ ನನಗೆ ಗೊತ್ತಾಗಲ್ಲ.
ಮನಸ್ಸು ನಿನ್ನ ಜೊತೆ ಮಾತನಾಡಿದ ಹಳೆಯ ಕ್ಷಣಗಳನ್ನು ನೆನಪಿಸುತ್ತಿದೆ. ನೀನು ಹೇಳೋ ʻಗುಡ್ ಮಾರ್ನಿಂಗ್ʼ ನನ್ನ ದಿನವನ್ನೇ ಸುಂದರವಾಗಿಸುತ್ತಿತ್ತು. ನೀ ಹೇಳೊ ʻಗುಡ್ ನೈಟ್ʼ ಇಡೀ ರಾತ್ರಿ ನಮ್ಮಿಬ್ಬರ ಮುದ್ದಾಟದ ರೋಮ್ಯಾಂಟಿಕ್ ಕನಸುಗಳಿಗೆ ಕಾರಣವಾಗುತ್ತಿತ್ತು. ಆದರೆ ಈಗ ನಿನ್ನ ಮೌನದಿಂದ ಅದೆಲ್ಲ ಬಂದ್ ಆಗಿದೆ.
ನಮ್ಮ ನಡುವೆ ಏನೇ ಸಮಸ್ಯೆ ಇದ್ದರೂ ಮಾತನಾಡೋಣ. ನಿನ್ನ ನೋವನ್ನು ನನಗೆ ಹೇಳು. ನಿನ್ನ ಕೋಪವನ್ನು ನನ್ನ ಮೇಲೆ ತೋರಿಸು. ಆದರೆ ಈ ಮೌನದ ಮುಳ್ಳಿನಿಂದ ಮಾತ್ರ ಚುಚ್ಚಬೇಡ.
ನಿನ್ನ ಜೀವನದಲ್ಲಿ ನಾನು ಎಷ್ಟು ಮುಖ್ಯನೋ ನನಗೆ ಗೊತ್ತಿಲ್ಲ. ಆದರೆ ನನ್ನ ಜೀವನದಲ್ಲಿ ನೀನು ಎಷ್ಟು ಮುಖ್ಯ ಎಂಬುದನ್ನು ಈ ಮೌನದ ಪ್ರತಿ ಕ್ಷಣವೂ ನನಗೆ ಅರ್ಥಮಾಡಿಸುತ್ತಿದೆ. ಮತ್ತೆ ಮತ್ತೆ ಕಾಯಿಸಿ, ಮೌನವಾಗಿ ಕಾಡುವುದರಲ್ಲಿ ಅದೇನು ಖುಷಿಯೋ ನಿನಗೆ?
ನಿನ್ನ ಮೌನದಿಂದ ಮನಸ್ಸು ಮಳೆ ಕಳೆದುಕೊಂಡ ಭೂಮಿಯಂತೆ ಬರಡಾಗುತ್ತಿದೆ. ಮಾತಿನ ಮಳೆಯಾಗಿ ಸುರಿದು ಇದಕ್ಕೊಂದು ಅಂತ್ಯ ಹಾಡಬಾರದಾ?
ಇಂತಿ
ನಿನ್ನ ಮಾತುಗಳ ಮಳೆ ಹನಿಗೆ ಕಾದು ಕುಳಿತ ನಿನ್ನವನು

