– ಪುಟಿನ್ ನಿಮ್ಮ ಜನರನ್ನ ಎಳೆದುಕೊಂಡು ಹೋಗಲು ಬಿಡಬೇಡಿ ಅಂತ ಮನವಿ
ಲಂಡನ್: ಉಕ್ರೇನ್ (Ukraine) ವಿರುದ್ಧದ ಯುದ್ಧಕ್ಕೆ ಭಾರತ, ನೇಪಾಳ, ಘಾನಾ ಸೇರಿದಂತೆ 47 ದೇಶಗಳ ನಾಗರಿಕರನ್ನ ರಷ್ಯಾ ಬಳಸಿಕೊಳ್ಳುತ್ತಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelenskyy ) ಆರೋಪಿಸಿದ್ದಾರೆ.
ನ್ಯೂಯಾರ್ಕ್ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನುದ್ದೇಶಿಸಿ (N General Assembly) ಮಾತನಾಡಿದ ಝೆಲೆನ್ಸ್ಕಿ, ರಷ್ಯಾ (Russia) ತನ್ನ ಯುದ್ಧದಲ್ಲಿ 47 ದೇಶಗಳ ನಾಗರಿಕರನ್ನ ಬಳಸುತ್ತಿದೆ ಎಂಬುದು ನಮಗೆ ತಿಳಿದಿದೆ. ಭಾರತ, ಘಾನಾ, ನೇಪಾಳ, ತಜಕಿಸ್ತಾನ, ಯೆಮೆನ್, ಕೀನ್ಯಾ, ಜಿಂಬಾಬ್ವೆ, ಕ್ಯೂಬಾ, ಬೆಲಾರಸ್, ಸುಡಾನ್ ಮತ್ತು ದಕ್ಷಿಣ ಆಫ್ರಿಕಾ ಸೇರಿದಂತೆ ವಿವಿಧ ದೇಶಗಳ ನಾಗಕರನ್ನ ಯುದ್ಧಕ್ಕೆ ಎಳೆದು ತರುತ್ತಿದೆ. ಆದ್ದರಿಂದ ಸಂಬಂಧಪಟ್ಟ ದೇಶಗಳು ಜನರನ್ನ ಈ ಸಂಘರ್ಷಕ್ಕೆ ಎಳೆ ತರುತ್ತಿರುವುದನ್ನು ತಡೆಯಬೇಕು ಎಂದು ಮನವಿ ಮಾಡಿದರು.
ಕೆಲವು ವಿದೇಶಿ ಪ್ರಜೆಗಳು ಮೋಸಹೋಗುವ ಮೂಲಕ ರಷ್ಯಾವನ್ನ ತಲುಪಿದ್ದಾರೆ. ಸಂಬಂಧಪಟ್ಟ ದೇಶಗಳು ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ಪುಟಿನ್ ನಿಮ್ಮ ಜನರನ್ನ ಈ ಯುದ್ಧಕ್ಕೆ ಎಳೆದುಕೊಂಡು ಹೋಗಲು ಬಿಡಬೇಡಿ ಎಂದು ವಿಶ್ವಸಂಸ್ಥೆಯ ಪ್ರತಿನಿಧಿಗಳಿಗೆ ಒತ್ತಾಯಿಸಿದರು.

ಇದೇ ವೇಳೆ ಉತ್ತರ ಕೊರಿಯಾದೊಂದಿಗಿನ ರಷ್ಯಾದ ಮಿಲಿಟರಿ ಸಂಬಂಧಗಳ ಬಗ್ಗೆಯೂ ಝೆಲೆನ್ಸ್ಕಿ ಪ್ರಸ್ತಾಪಿಸಿದರು. ಜೊತೆಗೆ ಫಿನ್ಲ್ಯಾಂಡ್ ಜೊತೆಗಿನ ಡ್ರೋನ್ ಖರೀದಿ ಒಪ್ಪಂದ ಹಾಗೂ ಆಸ್ಟ್ರೇಲಿಯಾದೊಂದಿಗೆ ಭದ್ರತಾ ಒಪ್ಪಂದಗಳನ್ನೂ ಉಲ್ಲೇಖಿಸಿದರು.
ಕಠಿಣ ಚಳಿಗಾಲದ ಎಚ್ಚರಿಕೆ
ಇನ್ನೂ ಚಳಿಗಾಲದಲ್ಲಿ ರಷ್ಯಾ ತನ್ನ ಇಂಧನ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸಿದರೆ, ಅದಕ್ಕೆ ಪ್ರತಿಯಾಗಿ ರಷ್ಯಾದ ಇಂಧನ ಸೌಲಭ್ಯಗಳ ಮೇಲೆ ದಾಳಿ ನಡೆಸುವ ಮೂಲಕ ಉಕ್ರೇನ್ ಪ್ರತಿಕ್ರಿಯಿಸಲಿದೆ ಎಂದು ಝೆಲೆನ್ಸ್ಕಿ ಎಚ್ಚರಿಸಿದ್ದಾರೆ.
ಮುಂಬರುವ ಚಳಿಗಾಲ ಕಠಿಣವಾಗಿರಬಹುದು ಎಂಬುದು ಉಕ್ರೇನ್ ಜನರಿಗೆ ಅರ್ಥವಾಗಿದೆ. ಆದರೆ, ಉಕ್ರೇನ್ ಮೇಲೆ ನಡೆಯುವ ದಾಳಿಗಳಿಗೆ ಪ್ರತಿಯಾಗಿ ರಷ್ಯಾಗೆ ಅದರ ಪರಿಣಾಮ ಅನುಭವಿಸುವಂತೆ ಮಾಡಲು ಕೀವ್ ಕ್ರಮ ಕೈಗೊಳ್ಳಲಿದೆ ಎಂದಿದ್ದಾರೆ.

