– ಅಧಿಕಾರಿಗಳ ವಿರುದ್ಧ ಸಿಡಿದೆದ್ದ ಕುಮಾರಸ್ವಾಮಿ
ಮಂಡ್ಯ: ಇಲ್ಲಿನ ರಾಜಕೀಯ ಅಂದ್ರೆನೇ ಹಾಗೆ… ಇಲ್ಲಿ ಪ್ರತಿ ಹೆಜ್ಜೆಯೂ ಒಂದು ದೊಡ್ಡ ಸದ್ದು ಮಾಡುತ್ತೆ. ಇದೀಗ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಹಾಗೂ ಕಾಂಗ್ರೆಸ್ ಶಾಸಕರ ನಡುವಿನ ವಾರ್ಗೆ ಮದ್ದೂರಿನ ಆಟೋ ಸ್ಟ್ಯಾಂಡ್ ಅಖಾಡವಾಗಿದೆ.
ದೆಹಲಿಯಲ್ಲಿ ಕುಳಿತು ಮಂಡ್ಯ (Mandya) ರಾಜಕಾರಣದ ನಾಡಮಿಡಿತ ಅರಿಯುತ್ತಿರುವ ಹೆಚ್ಡಿಕೆ, ಅಧಿಕಾರಿಗಳ ವಿರುದ್ಧ ಸಿಡಿದೆದ್ದಿದ್ದಾರೆ. ಕಾಂಗ್ರೆಸ್ ಶಾಸಕರು ಮತ್ತು ಅಧಿಕಾರಿಗಳ ನಡವಳಿಕೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ಹೈವೋಲ್ಟೇಜ್ ಡ್ರಾಮಾ ನಡೆದಿದೆ. ಬಸ್ ನಿಲ್ದಾಣದ ಎದುರು ಸಿಎಸ್ಆರ್ ಅನುದಾನದಲ್ಲಿ ಆಟೋ ಸ್ಟ್ಯಾಂಡ್ ನಿರ್ಮಾಣ ಮಾಡಲು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ವಿಜೃಂಭಣೆಯಿಂದ ಭೂಮಿಪೂಜೆ ನೆರವೇರಿಸಿದ್ದರು. ಆದ್ರೆ, ಕಾಮಗಾರಿ ಆರಂಭವಾಗುತ್ತಿದ್ದಂತೆಯೇ ಎಂಟ್ರಿ ಕೊಟ್ಟ ನಗರಸಭೆ ಅಧಿಕಾರಿಗಳು ಶಾಕ್ ಕೊಟ್ಟರು.. ಪಾದಚಾರಿ ಮಾರ್ಗದಲ್ಲಿ ಕಾಮಗಾರಿ ನಡೆಯುತ್ತಿದೆ, ಸರಿಯಾದ ಅನುಮತಿ ಇಲ್ಲ ಅಂತಾ ಹೇಳಿ ಕಾಮಗಾರಿಗೆ ತಡೆಹಾಕಿದರು. ಅಷ್ಟೇ ಅಲ್ಲ, ಕೆಲಸಕ್ಕೆ ತಂದಿದ್ದ ಸಾಮಗ್ರಿಗಳನ್ನೆಲ್ಲ ನಗರಸಭೆ ಆಯುಕ್ತೆ ರಾಧಿಕಾ ವಶಕ್ಕೆ ಪಡೆದುಕೊಂಡರು.
ಅಧಿಕಾರಿಗಳ ಈ ನೆಡೆಗೆ ಮಂಡ್ಯದಲ್ಲಿ ಕಳೆದ ತಿಂಗಳು ನಡೆದ ಹಿಂದಿನ ದಿಶಾ ಸಭೆಯಲ್ಲೇ ಕುಮಾರಸ್ವಾಮಿ ಗರಂ ಆಗಿದ್ದರು. ನೀವು ಶಾಸಕರಿಗೆ ಕೆಲಸ ಮಾಡ್ತಿದ್ದೀರಾ ಅಥವಾ ಸಾರ್ವಜನಿಕರಿಗೆ ಕೆಲಸ ಮಾಡ್ತಿದ್ದೀರಾ? ಅಂತಾ ಆಯುಕ್ತೆ ರಾಧಿಕಾರನ್ನ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು. ಇಷ್ಟೇಲ್ಲಾ ಆದರೂ ಇನ್ನೂ ಕಾಮಗಾರಿ ಆರಂಭವಾಗಿಲ್ಲ. ಹೀಗಾಗಿ ದೆಹಲಿಯಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಆಯುಕ್ತರಿಗೆ ಹೆಚ್ಡಿಕೆ ಮತ್ತೊಮ್ಮೆ ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ.

ಸಚಿವರು ಮತ್ತು ಶಾಸಕ ಉದಯ್ ಅವರ ಒತ್ತಡಕ್ಕೆ ಮಣಿದು ನೀವು ಆಟ ಆಡ್ತಿದ್ದೀರಿ ಎಂದು ನೇರ ಆರೋಪ ಮಾಡಿರುವ ಕುಮಾರಸ್ವಾಮಿ ಅಧಿಕಾರಿಗಳಿಗೆ ಎಚ್ಚರಿಕೆ ಕೊಟ್ಟಿದ್ದಾರೆ. ಇನ್ನೂ ಇಂಜಿನಿಯರ್ಗಳು ಮತ್ತು ನಗರಸಭೆ ಕಡೆಯಿಂದ ಆಟೋ ಸ್ಟಾಂಡ್ಗೆ ಪರ್ಯಾಯ ಜಾಗದ ಪ್ರಸ್ತಾಪ ಮಾಡಿದ್ದಾರೆ. ಆದ್ರೆ ಆಟೋ ಚಾಲಕರು ಮಾತ್ರ ನಮಗೆ ಅದೇ ಜಾಗದಲ್ಲಿ ಸ್ಟ್ಯಾಂಡ್ ಬೇಕು ಅಂತಾ ಪಟ್ಟು ಹಿಡಿದಿದ್ದಾರೆ. ಅಭಿವೃದ್ಧಿ ವಿಷಯದಲ್ಲಿ ಶಾಸಕರ ಒತ್ತಡಕ್ಕೆ ಮಣಿಯಬೇಡಿ, ಬೇಕಿದ್ರೆ ರಾಜಕೀಯ ನನಗೂ ಚೆನ್ನಾಗಿ ಮಾಡಲು ಬರುತ್ತೆ ಅಂತಾ ಹೆಚ್ಡಿಕೆ ನೇರ ಎಚ್ಚರಿಕೆ ರವಾನಿಸಿದ್ದಾರೆ.
ಒಟ್ಟಿನಲ್ಲಿ ಮಂಡ್ಯದಲ್ಲಿ ಅಭಿವೃದ್ಧಿ ಹೆಸರಲ್ಲಿ ನಾಯಕರ ಕಿತ್ತಾಟ ಮುಂದುವರಿದಿದ್ದು, ಅಧಿಕಾರಿಗಳು ಇಕ್ಕಟ್ಟಿಗೆ ಸಿಲುಕಿದ್ದಾರೆ. ದೆಹಲಿ ಟು ಮದ್ದೂರು ಕನೆಕ್ಷನ್ ಮೂಲಕ ಕುಮಾಸ್ವಾಮಿ ನೀಡಿರುವ ಈ ವಾರ್ನಿಂಗ್ಗೆ ಕಾಂಗ್ರೆಸ್ ಶಾಸಕ ಉದಯ್ ಯಾವ ರೀತಿ ಕೌಂಟರ್ ಕೊಡ್ತಾರೆ ಕಾದು ನೋಡಬೇಕು.

