ಕಾಮನ್ ಮ್ಯಾನ್ (Common Man Movie) ಚಿತ್ರದ ಕೊನೆಯ `ಖಾಕಿ ಕಾವಿ ಖಾದಿ’ ಎಂಬ ಸ್ವಾಭಿಮಾನದ, ದೇಶಾಭಿಮಾನದ, ಗೀತೆ ಬಿಡುಗಡೆಯಾಗಿದೆ. ಸಮಾಜವನ್ನು ಕಾಪಾಡಬೇಕಿದ್ದ ಈ ಮೂವರು ಏನೆಲ್ಲ ಮಾಡುತ್ತಿದ್ದಾರೆ ಅನ್ನುವ ಅಂಶಗಳನ್ನು ಈ ಹಾಡಿನಲ್ಲಿ ಬಳಸಲಾಗಿದೆ. ಒಂದು ರೀತಿಯಲ್ಲಿ ಈ ಹಾಡು ಕ್ರಾಂತಿಗೀತೆಯಂತೆಯೇ ಭಾಸವಾಗುತ್ತದೆ. ವಿ.ನಾಗೇಂದ್ರ ಪ್ರಸಾದ್ ಅವರು ಈ ಗೀತೆಯನ್ನು ಬರೆದಿದ್ದು, ಕೈಲಾಸ್ ಖೇರ್ ಈ ಗೀತೆಯನ್ನು ಹಾಡಿದ್ದಾರೆ. ವಿನಯ್ ಚಂದ್ರ ಅವರ ಸಂಗೀತ ಸಂಯೋಜನೆ ಚಿತ್ರಕ್ಕಿದೆ.
ಸಾಮಾನ್ಯ ಮನುಷ್ಯನೊಬ್ಬ ರಾಜ್ಯದ ಸಿಎಂ ಆದರೆ ಹೇಗೆ ಆಡಳಿತ ನಡೆಸುತ್ತಾನೆ, ಆತ ಎದುರಿಸುವ ಸವಾಲುಗಳೇನು ಎಂಬುದನ್ನು ಹೇಳುವ ಕಾಮನ್ ಮ್ಯಾನ್ ಅದ್ದೂರಿಯಾಗಿ ತೆರೆಗೆ ಬರಲು ರೆಡಿಯಾಗುತ್ತಿದೆ. ಸೋಷಿಯಲ್ ವರ್ಕರ್ ಎನ್.ನರಸಿಂಹಮೂರ್ತಿ ಅವರು ಈ ಕಥೆ ಬರೆದು ಸುರಭಿ ಫಿಲಂಸ್ ಅಡಿ ನಿರ್ಮಿಸಿದ್ದಾರೆ. ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ್ ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಇತ್ತೀಚೆಗಷ್ಟೇ ಪಂಚತಾರಾ ಹೋಟೆಲಿನಲ್ಲಿ ಈ ಚಿತ್ರದ ನಾಲ್ಕು ವಿವಿಧ ಶೈಲಿಯ ಹಾಡುಗಳನ್ನು ಚಿತ್ರರಂಗದ ನಾಲ್ವರು ಸೆಲೆಬ್ರಿಟಿಗಳು ಬಿಡುಗಡೆ ಮಾಡಿದ್ದರು. ಹಿರಿಯ ನಟಿ ಉಮಾಶ್ರೀ, ನಟ ವಿನೋದ್ ಪ್ರಭಾಕರ್, ಹಿರಿಯ ನಟ ರಮೇಶ್ ಭಟ್, ನಟಿ ಪ್ರಿಯಾಂಕಾ ಉಪೇಂದ್ರ ಅವರು ಹಾಡುಗಳಿಗೆ ಚಾಲನೆ ನೀಡಿ ಹಾರೈಸಿದ್ದರು. ಇದನ್ನೂ ಓದಿ: ಕುತೂಹಲ ಮೂಡಿಸುವ ಗೌರಿ ಶಂಕರ್ ನಟನೆಯ ಕಾಮನ್ ಮ್ಯಾನ್ ಟ್ರೈಲರ್

ಪ್ರತಿ ಮನುಷ್ಯನಲ್ಲೂ ಒಂದು ಆಸೆ ಅನ್ನೋದಿರುತ್ತೆ. ಅದೇ ರೀತಿ ಒಬ್ಬ ಕಾಮನ್ ಮ್ಯಾನ್ ಸಿಎಂ ಆಗಿ ಏನು ಮಾಡಬಹುದು ಎಂಬುದನ್ನು ಈ ಚಿತ್ರದಲ್ಲಿ ತೋರಿಸಿದ್ದಾರೆ. ದೇಶದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಅದನ್ನು ಮಟ್ಟ ಹಾಕುವುದನ್ನು ಈ ಚಿತ್ರದಲ್ಲಿ ತೋರಿಸಿದ್ದಾರೆ. ಗಾಯಕಿ ಚೈತ್ರಾ ಆಚಾರ್, ಕೈಲಾಶ್ ಖೇರ್, ಬಾಬಾ ಸೈಗಲ್ ರಂಥ ಗಾಯಕರು ಈ ಚಿತ್ರದ ಹಾಡುಗಳಿಗೆ ದನಿಯಾಗಿದ್ದಾರೆ. ಸಾಯಿಪ್ರಕಾಶ್ ಅವರ ನಿರ್ದೇಶನದ 106ನೇ ಚಿತ್ರ ಇದಾಗಿದ್ದು, ಒಬ್ಬ ಕಾಮನ್ ಮ್ಯಾನ್ ರಾಜ್ಯದ ಸಿಎಂ ಆದರೆ ಏನೆಲ್ಲ ಸುಧಾರಣೆ ಮಾಡಬಹುದು ಎಂಬುದನ್ನು ಈ ಚಿತ್ರ ಮೂಲಕ ಹೇಳಿದ್ದಾರೆ.
ಗೌರಿಶಂಕರ್ ಚಿತ್ರದ ನಾಯಕನಾಗಿದ್ದು, ಸೋನಾ ಲದ್ವಾ ನಾಯಕಿ ಪಾತ್ರ ನಿರ್ವಹಿಸಿದ್ದಾರೆ. ಹಿರಿಯ ನಟ ಅಶೋಕ್ ಅವರು ರಾಜ್ಯಪಾಲರ ಪಾತ್ರ ಮಾಡಿದ್ದಾರೆ. ವಿನಯ ಚಂದ್ರ ಅವರ ಸಂಗೀತ, ಜೆ.ಜಿ.ಕೃಷ್ಣ, ದೀಪಕ್ ಕುಮಾರ್ ಅವರ ಛಾಯಾಗ್ರಹಣ, ಥ್ರಿಲ್ಲರ್ ಮಂಜು ಅವರ ಸಾಹಸ ಈ ಚಿತ್ರಕ್ಕಿದೆ. ಕಾಮನ್ ಮ್ಯಾನ್ ಚಿತ್ರದ ಉಳಿದ ಪಾತ್ರಗಳಲ್ಲಿ ಗಣೇಶರಾವ್ ಕೇಸರಕರ್, ಎಸ್ಕಾರ್ಟ್ ಶ್ರೀನಿವಾಸ್, ಪ್ರಕಾಶ್ ತುಮ್ಮಿನಾಡು ಹಾಗೂ ಇತರರು ನಟಿಸಿದ್ದಾರೆ. ಇದನ್ನೂ ಓದಿ: `ತರಂಗಾಂತರಂಗ’ ಚಿತ್ರದ ಟೀಸರ್ ರಿಲೀಸ್ – ಪುನರ್ಜನ್ಮದ ಕಥೆ ಹೇಳುವ ಚಿತ್ರ

