-ಮಸೂದೆಗೆ ಅಗತ್ಯವಿರುವ ಮತಗಳಿಗಿಂತ 15-18 ಮತ ಹೆಚ್ಚು ಪಡೆಯುವ ವಿಶ್ವಾಸ
ನವದೆಹಲಿ: ಮಹಿಳಾ ಮೀಸಲಾತಿ ಮಸೂದೆಯನ್ನು (Womens Reservation Bill) ಅಂಗೀಕರಿಸುವ ಉದ್ದೇಶದಿಂದ ಸಂಸತ್ತಿನ ವಿಶೇಷ ಅಧಿವೇಶನ ಕರೆಯಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಸಂವಿಧಾನ ತಿದ್ದುಪಡಿ ಮಸೂದೆಗೆ ಅಗತ್ಯವಿರುವ ಬಹುಮತವನ್ನು ಪಡೆಯುವ ವಿಶ್ವಾಸದಲ್ಲಿರುವ ಸರ್ಕಾರ, ಮಸೂದೆ ಪರವಾಗಿ ಅಗತ್ಯಕ್ಕಿಂತ 15ರಿಂದ 18 ಮತಗಳು ಹೆಚ್ಚುವರಿಯಾಗಿ ದೊರೆಯಲಿವೆ ಎಂದು ಬಿಜೆಪಿ (BJP) ಮೂಲಗಳು ತಿಳಿಸಿವೆ.
ಮಹಿಳಾ ಮೀಸಲಾತಿ ಜಾರಿಗೆ ಸಂಬಂಧಿಸಿದ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಲು ಲೋಕಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತದ ಅಗತ್ಯವಿದೆ. ಪ್ರಸ್ತುತ ಲೋಕಸಭೆಯ 543 ಸ್ಥಾನಗಳ ಪೈಕಿ ಮೂರು ಸ್ಥಾನಗಳು ಖಾಲಿ ಇದ್ದು, ಮಸೂದೆ ಅಂಗೀಕಾರಕ್ಕೆ 361 ಮತಗಳ ಅಗತ್ಯವಿದೆ. ಇದನ್ನೂ ಓದಿ: ‘ಲಕ್ಷ್ಮೀ ಪೂಜೆ’ ಹೆಸರಿನಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ‘ಅಕ್ಕ ಪಡೆ’ಯ ಮಿಂಚಿನ ಕಾರ್ಯಾಚರಣೆ -11 ಮಂದಿ ಅರೆಸ್ಟ್
ಪ್ರಸ್ತಾವಿತ ಸಂವಿಧಾನ ತಿದ್ದುಪಡಿಯ ಮೂಲಕ ಲೋಕಸಭೆಯ ಒಟ್ಟು ಸ್ಥಾನಗಳ ಸಂಖ್ಯೆಯನ್ನು ಈಗಿನ 543ರಿಂದ ಗರಿಷ್ಠ 850ಕ್ಕೆ ಹೆಚ್ಚಿಸುವ ಉದ್ದೇಶ ಹೊಂದಲಾಗಿದೆ. ಕ್ಷೇತ್ರ ಮರುವಿಂಗಡಣೆ ಮೂಲಕ ಲೋಕಸಭೆಯ ಸ್ಥಾನಗಳನ್ನು ಹೆಚ್ಚಿಸಿ, ಸಂಸತ್ತು ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ 33ರಷ್ಟು ಮೀಸಲಾತಿ ಕಲ್ಪಿಸುವುದು ಸರ್ಕಾರದ ಉದ್ದೇಶವಾಗಿದೆ. 2029ರ ಲೋಕಸಭಾ ಚುನಾವಣೆಗೆ ಮುನ್ನ ಮಹಿಳಾ ಮೀಸಲಾತಿ ಕಾಯ್ದೆಯನ್ನು ಜಾರಿಗೆ ತರುವ ಗುರಿಯನ್ನು ಕೇಂದ್ರ ಹೊಂದಿದೆ.
ಇದೇ ರೀತಿಯ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಈ ವರ್ಷದ ಏಪ್ರಿಲ್ 17ರಂದು ಬಜೆಟ್ ಅಧಿವೇಶನದ ವಿಶೇಷ ಕಲಾಪದಲ್ಲಿ ಮಂಡಿಸಲಾಗಿತ್ತು. ಆದರೆ, ಅಗತ್ಯ ಬಹುಮತ ದೊರೆಯದ ಕಾರಣ ಲೋಕಸಭೆಯಲ್ಲಿ ಮಸೂದೆ ಅಂಗೀಕಾರವಾಗಿರಲಿಲ್ಲ. ಇದೀಗ ಮತ್ತೊಮ್ಮೆ ಮಸೂದೆಯನ್ನು ಮಂಡಿಸಿ ಅಂಗೀಕಾರ ಪಡೆಯಲು ಸರ್ಕಾರ ಮುಂದಾಗಿದೆ.ಇದನ್ನೂ ಓದಿ: ಪಸಂದೈತಿ `ಹುಬ್ಬಳ್ಳಿ ಹಂಟರ್ಸ್’ ಚಿತ್ರದ ಹುಬ್ಬಳ್ಳಿದ ಜಾದು ಲಿರಿಕಲ್ ಸಾಂಗ್
ಈ ಮಧ್ಯೆ, ಆಗಸ್ಟ್ 13ರಂದು ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದ್ದ ಮುಂಗಾರು ಅಧಿವೇಶನಕ್ಕೆ ಸಂಸತ್ತಿನ ಅಧಿಕೃತ ಸತ್ರಾವಸಾನ ಇನ್ನೂ ಘೋಷಣೆಯಾಗಿಲ್ಲ. ಹೀಗಾಗಿ, ಹಾಲಿ ಅಧಿವೇಶನದ ಮುಂದುವರಿದ ಭಾಗವಾಗಿ ವಿಶೇಷ ಕಲಾಪ ನಡೆಸುವ ಸಾಧ್ಯತೆಯೂ ಇದೆ. ಹಾಲಿ ಅಧಿವೇಶನವನ್ನು ಮುಂದುವರಿಸಲು ಕನಿಷ್ಠ ಎರಡು ದಿನಗಳ ಮುನ್ಸೂಚನೆ ಸಾಕಾಗುತ್ತದೆ. ಹೊಸ ಅಧಿವೇಶನ ಕರೆಯಬೇಕಾದರೆ ಕನಿಷ್ಠ 14 ದಿನಗಳ ಮುನ್ಸೂಚನೆ ನೀಡಬೇಕಾಗುತ್ತದೆ.
ಮುಂಗಾರು ಅಧಿವೇಶನವನ್ನು ಅಧಿಕೃತವಾಗಿ ಮುಕ್ತಾಯಗೊಳಿಸದೇ ಉಳಿಸಿಕೊಂಡಿರುವುದು ವಿಶೇಷ ಅಧಿವೇಶನದ ಸಾಧ್ಯತೆ ಕುರಿತು ಚರ್ಚೆಗೆ ಕಾರಣವಾಗಿದೆ. ಈ ಅಧಿವೇಶನ ಸತತ 91 ದಿನಗಳಿಂದ ಸತ್ರಾವಸಾನವಾಗದೆ ಮುಂದುವರಿದಿದ್ದು, 2008ರಲ್ಲಿ ದಾಖಲಾಗಿದ್ದ 87 ದಿನಗಳ ಹಿಂದಿನ ದಾಖಲೆಯನ್ನೂ ಮೀರಿಸಿದೆ.
ಇನ್ನು, ಕ್ಷೇತ್ರ ಮರುವಿಂಗಡಣೆ ವಿಚಾರದಲ್ಲಿ ದಕ್ಷಿಣ ಭಾರತದ ರಾಜ್ಯಗಳಿಂದ ವ್ಯಕ್ತವಾಗಿರುವ ಆತಂಕಗಳನ್ನು ನಿವಾರಿಸಲು ಕೇಂದ್ರ ಸರ್ಕಾರ ರಾಜ್ಯಗಳ ಲೋಕಸಭಾ ಸ್ಥಾನಗಳನ್ನು ಶೇ.50ರಷ್ಟು ಹೆಚ್ಚಿಸುವ ಪ್ರಸ್ತಾವನೆಯನ್ನೂ ಪರಿಶೀಲಿಸುತ್ತಿದೆ. 1971ರ ಜನಗಣತಿಯ ಆಧಾರದ ಮೇಲೆ ರಾಜ್ಯಗಳ ನಡುವಿನ ಹಾಲಿ ಲೋಕಸಭಾ ಸ್ಥಾನಗಳ ಅನುಪಾತವನ್ನು ಮುಂದುವರಿಸುವ ಪ್ರಸ್ತಾವನೆಯೂ ಹೊಸ ಕರಡಿನಲ್ಲಿ ಸೇರಿದೆ ಎನ್ನಲಾಗಿದೆ.ಇದನ್ನೂ ಓದಿ: UP Elections| ಒವೈಸಿ-ಚಂದ್ರಶೇಖರ್ ಆಜಾದ್ ನೇತೃತ್ವದಲ್ಲಿ ‘ಸಾಮಾಜಿಕ ಪರಿವರ್ತನ ಮೋರ್ಚಾ’ ಘೋಷಣೆ
