ಶಿವಮೊಗ್ಗ: ಸಾಗರ (Sagar) ತಾಲೂಕಿನ ತುಮರಿ ಬಳಿಯ ಕೆರೆಕೈ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಡುಗೆ ಕೋಣೆಗೆ ಕಿಡಿಗೇಡಿಗಳು ಬೆಂಕಿ (Fire) ಹಚ್ಚಿ ಸಿಲಿಂಡರ್ ಸ್ಫೋಟಿಸಲು ಯತ್ನಿಸಿದ ಆರೋಪ ಕೇಳಿಬಂದಿದೆ.
ತಡರಾತ್ರಿ ಶಾಲೆಯ ಅಡುಗೆ ಕೋಣೆಯ ಬಾಗಿಲ ಬಳಿ ಕಸ ಕಡ್ಡಿ ಹಾಕಿ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಅಲ್ಲದೇ ಶಾಲೆಯ ಆವರಣದಲ್ಲಿದ್ದ ಪೈಪ್ ಲೈನ್, ಗೇಟ್, ನೀರಿನ ಟ್ಯಾಂಕ್ಗೆ ಹಾನಿ ಮಾಡಿದ್ದಾರೆ. ಸಿಲಿಂಡರ್ ಸ್ಪೋಟಿಸುವ ಉದ್ದೇಶದಿಂದಲೇ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ: ದೀಪಾವಳಿ ಬಾಡೂಟಕ್ಕೆ ವನ್ಯಜೀವಿಗಳ ಬೇಟೆ – ಓರ್ವ ಆರೋಪಿ ಅರೆಸ್ಟ್, ಮೂವರು ಪರಾರಿ
ಕಿಡಿಗೇಡಿಗಳ ಕೃತ್ಯ ಖಂಡಿಸಿ ತುಮರಿ ಗ್ರಾ.ಪಂ ಮಾಜಿ ಅಧ್ಯಕ್ಷ ಜಿ.ಟಿ.ಸತ್ಯನಾರಾಯಣ್ ನೇತೃತ್ವದಲ್ಲಿ ಸ್ಥಳೀಯರು ಪ್ರತಿಭಟನೆ (Protest) ನಡೆಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ -369ರಲ್ಲಿ ರಸ್ತೆ ತಡೆದು, ಟೈರ್ಗೆ ಬೆಂಕಿ ಹಚ್ಚಿ ಕಿಡಿಗೇಡಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮಕ್ಕೆ ಸ್ಥಳೀಯರು ಆಗ್ರಹಿಸಿದ್ದಾರೆ.
ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಆಗಾಗ ಇಂತಹ ಕೃತ್ಯಗಳು ನಡೆಯುತ್ತಿವೆ. ಇತ್ತೀಚೆಗೆ ರಂಗಮಂದಿರಕ್ಕೂ ದುಷ್ಕರ್ಮಿಗಳು ಹಾನಿ ಮಾಡಿದ್ದರು. ಈ ಬಗ್ಗೆ ಪೊಲೀಸರು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಖಾಕಿ ಯಡವಟ್ಟು, ನರಕ ಕಂಡ ನಿರಪರಾಧಿ – ಕೊಲೆಯಾದ ಮಹಿಳೆ ಜೀವಂತ ಪ್ರತ್ಯಕ್ಷ
