– ಟೆಲಿಕಾಂ ಕಂಪನಿಗಳಿಗೆ ಟ್ರಾಯ್ ಸೂಚನೆ
ನವದೆಹಲಿ: ಮೊಬೈಲ್ ಡೇಟಾ(Mobile Data) ಬಳಸದೇ ಕೇವಲ ಕರೆಗಾಗಿ ಸಿಮ್ ಬಳಸುವ ಗ್ರಾಹಕರಿಗೆ ಸಿಹಿ ಸುದ್ದಿ. ಇನ್ನು ಮುಂದೆ ನೀವು ಕರೆಗಾಗಿ ಮಾತ್ರ ವಾಯ್ಸ್(Voice Pack) ಇರುವ ಪ್ಯಾಕ್ ಹಾಕಬಹುದು.
ಕಡಿಮೆ ದರ ಕಡಿತದೊಂದಿಗೆ ಕಡಿಮೆ ಅವಧಿಯ ವಾಯ್ಸ್ ಮತ್ತು ಎಸ್ಎಂಎಸ್ ಮಾತ್ರ (voice-and-SMS-only) ಇರುವ ಪ್ಲಾನ್ಗಳನ್ನು ಕಡ್ಡಾಯವಾಗಿ ನೀಡುವಂತೆ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (TRAI) ಟೆಲಿಕಾಂ ಕಂಪನಿಗಳಿಗೆ ಸೂಚಿಸಿದೆ.
ಟ್ರಾಯ್ ತನ್ನ ‘ಟೆಲಿಕಾಂ ಗ್ರಾಹಕ ಸಂರಕ್ಷಣಾ (ಹದಿಮೂರನೇ ತಿದ್ದುಪಡಿ) ನಿಯಮಗಳು, 2026’ರಲ್ಲಿ ಡೇಟಾ ಪ್ಯಾಕ್ ಅಗತ್ಯವಿಲ್ಲದ ಗ್ರಾಹಕರಿಗೆ ಅವರ ಅಗತ್ಯತೆಗಳು ಮತ್ತು ಆರ್ಥಿಕ ಸಾಮರ್ಥ್ಯಕ್ಕೆ ತಕ್ಕಂತೆ ರೀಚಾರ್ಜ್ ಮಾಡಲು ಈ ಕ್ರಮವು ಹೆಚ್ಚಿನ ಆಯ್ಕೆಗಳನ್ನು ಒದಗಿಸುತ್ತದೆ ಎಂದು ಹೇಳಿದೆ.
ಹೊಸ ನಿಯಮಾವಳಿಯ ಪ್ರಕಾರ, ಪ್ರಸ್ತುತ ವಾಯ್ಸ್, ಎಸ್ಎಂಎಸ್ ಮತ್ತು ಡೇಟಾ ಒಳಗೊಂಡಿರುವ 30 ದಿನಗಳು ಮತ್ತು 30 ದಿನಗಳಿಗಿಂತ ಕಡಿಮೆ ಅವಧಿಯ ಸ್ಪೆಷಲ್ ಟ್ಯಾರಿಫ್ ವೋಚರ್ಗಳಿಗೆ (STVs) ಸರಿಸಮಾನವಾಗಿ, ಸೂಕ್ತ ದರ ಕಡಿತದೊಂದಿಗೆ ‘ಕೇವಲ ವಾಯ್ಸ್ ಮತ್ತು ಎಸ್ಎಂಎಸ್’ ಇರುವ ಎಸ್ಟಿವಿಗಳನ್ನು ಟೆಲಿಕಾಂ ಕಂಪನಿಗಳು ನೀಡಬೇಕಾಗುತ್ತದೆ. ಇದನ್ನೂ ಓದಿ: SIM ಕಾರ್ಡ್ ದುರ್ಬಳಕೆ ಮಾಡಿದ್ರೆ 50 ಲಕ್ಷ ದಂಡ, 3 ವರ್ಷ ಜೈಲು – ನೀವು ತಿಳಿಯಬೇಕಾಗಿದ್ದು ಏನು?
ಇದರ ಜೊತೆಗೆ, ಕಡಿಮೆ ಅವಧಿ ಮತ್ತು ಮಾಸಿಕ ವ್ಯಾಲಿಡಿಟಿ ಆಯ್ಕೆಗಳಿಗಿಂತ ಹೆಚ್ಚಿನ ಅವಧಿಯನ್ನು ಹೊಂದಿರುವ, ಪ್ರಸ್ತುತ ವಾಯ್ಸ್, ಎಸ್ಎಂಎಸ್ ಮತ್ತು ಡೇಟಾ ಯೋಜನೆಗಳಿಗೆ ಸರಿಸಮಾನವಾದ ಕನಿಷ್ಠ ಒಂದು ದೀರ್ಘಾವಧಿಯ ‘ವಾಯ್ಸ್ ಮತ್ತು ಎಸ್ಎಂಎಸ್ ಮಾತ್ರ’ ಇರುವ ಎಸ್ಟಿವಿಯನ್ನು ಟೆಲಿಕಾಂ ಆಪರೇಟರ್ಗಳು ನೀಡಬೇಕಾಗುತ್ತದೆ.

