– ಬಂಧನಕ್ಕೂ ಮುನ್ನ ಪೊಲೀಸರ ಮೇಲೆಯೇ 3 ಸುತ್ತು ಗುಂಡು ಹಾರಿಸಿದ್ದ ಆರೋಪಿ
ನವದೆಹಲಿ: ದೆಹಲಿಯ ಕಲ್ಕಾಜಿ ದೇವಸ್ಥಾನದ (Kalkaji Temple) ಸಮೀಪದ ಆಸ್ಥಾ ಕುಂಜ್ ಪಾರ್ಕ್‌ನಲ್ಲಿ 17 ವರ್ಷದ ಬಾಲಕಿಯ ಮೇಲೆ ಮೂವರು ಕಾಮುಕರು ಮೂಹಿಕ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನ ಪೊಲೀಸರು ಬಂಧಿಸಿದ್ದು, ಮತ್ತಿಬ್ಬರು ಆರೋಪಿಗಳಿಗಾಗಿ ಶೋಧ ಮುಂದುವರಿದಿದೆ.
ಪೊಲೀಸರು ಹೇಳಿದ್ದೇನು?
ದೆಹಲಿ (Delhi) ನಿವಾಸಿಯಾಗಿರುವ ಬಾಲಕಿ ಸೋಮವಾರ ಸಂಜೆ ಸುಮಾರು 7 ಗಂಟೆಗೆ ತನ್ನ 17 ವರ್ಷದ ಪುರುಷ ಸ್ನೇಹಿತನೊಂದಿಗೆ ಕಲ್ಕಾಜಿ ದೇವಸ್ಥಾನಕ್ಕೆ ತೆರಳಿದ್ದಳು. ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ರಾತ್ರಿ ಸುಮಾರು 7.30ರ ವೇಳೆಗೆ ಇಬ್ಬರೂ ಆಸ್ಥಾ ಕುಂಜ್ ಪಾರ್ಕ್‌ಗೆ ತೆರಳಿದ್ದರು. ಈ ವೇಳೆ ಸುಮಾರು 25 ರಿಂದ 30 ವರ್ಷ ವಯಸ್ಸಿನ ಮೂವರು ವ್ಯಕ್ತಿಗಳು ಬಾಲಕಿ ಹಾಗೂ ಆಕೆಯ ಸ್ನೇಹಿತನನ್ನ ಸಂಪರ್ಕಿಸಿದ್ದಾರೆ. ತಾವು ಪೊಲೀಸರು ಎಂದು ಹೇಳಿಕೊಂಡು ಇಬ್ಬರಿಗೂ ಬೆದರಿಕೆ ಹಾಕಿದ್ದಾರೆ. ಬಳಿಕ ಆರೋಪಿಗಳ ಪೈಕಿ ಒಬ್ಬಾತ ಆಕೆಯ ಸ್ನೇಹಿತನನ್ನ ಹಿಡಿದುಕೊಂಡಿದ್ದು, ಬಳಿಕ ಮೂವರು ಸೇರಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಕಲ್ಕಾಜಿ ಮಂದಿರ ಮತ್ತು ಇಸ್ಕಾನ್ ದೇವಸ್ಥಾನವನ್ನ ಸಂಪರ್ಕಿಸುವ ಪ್ರದೇಶದಲ್ಲಿರುವ ಉದ್ಯಾನದಲ್ಲಿ ಈ ಘಟನೆ ನಡೆದಿದೆ ಎಂದು ಬಾಲಕಿ ನೀಡಿದ ದೂರಿನಲ್ಲಿ ಉಲ್ಲೇಖಿಸಿರುವುದಾಗಿ ಪೊಲೀಸರು (Delhi Police) ತಿಳಿಸಿದ್ದಾರೆ.

ಘಟನೆ ಸಂಬಂಧ ರಾತ್ರಿ ಸುಮಾರು 8.45ಕ್ಕೆ ಪೊಲೀಸ್ ಕಂಟ್ರೋಲ್ ರೂಮ್‌ಗೆ (PCR) ಕರೆ ಬಂದಿದೆ. ಮಾಹಿತಿ ತಿಳಿದ ತಕ್ಷಣವೇ ಪೊಲೀಸರ ತಂಡ ಘಟನಾ ಸ್ಥಳಕ್ಕೆ ತೆರಳಿದೆ. ಬಳಿಕ ಬಾಲಕಿಯನ್ನ ರಕ್ಷಿಸಿದ್ದು, ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ಆಕೆ ಹೇಳಿಕೆ ಪಡೆದ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ (POCSO) ಸೇರಿದಂತೆ ಸಂಬಂಧಿತ ಕಾನೂನುಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಓರ್ವನನ್ನ ಬಂಧಿಸಲಾಗಿದೆ. ಉಳಿದ ಇಬ್ಬರಿಗಾಗಿ ಶೋಧ ಮುಂದುವರಿದಿದೆ.
ಸಿಸಿಟಿವಿ CCTV ದೃಶ್ಯಗಳ ಪರಿಶೀಲನೆ
ತನಿಖೆ ಶುರು ಮಾಡಿದ ಪೊಲೀಸರು ಆಸ್ಥಾ ಕುಂಜ್ ಪಾರ್ಕ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಸಿಸಿಟಿವಿ ದೃಶ್ಯಗಳನ್ನ ಪರಿಶೀಲಿಸಿದ್ದಾರೆ. ಆರೋಪಿಗಳನ್ನು ಪತ್ತೆಹಚ್ಚುವ ಜೊತೆಗೆ ಘಟನೆ ನಡೆದಿರುವ ಕ್ರಮವನ್ನ ದೃಢಪಡಿಸಲು ಸಿಸಿಟಿವಿ ದೃಶ್ಯಗಳನ್ನ ಪರಿಶೀಲಿಸಲಾಗುತ್ತಿದೆ. ಅಲ್ಲದೇ ಘಟನೆ ವೇಳೆ ಉದ್ಯಾನವನದ ಸುತ್ತಮುತ್ತ ಪ್ರದೇಶದಲ್ಲಿದ್ದ ವ್ಯಕ್ತಿಗಳಿಂದಲೂ ಹೇಳಿಕೆ ಪಡೆಯಲಾಗುತ್ತಿದೆ.

ಗುಂಡಿನ ಚಕಮಕಿಯಲ್ಲಿ ಒಬ್ಬ ಆರೋಪಿ ಬಂಧನ
ತನಿಖೆ ಮುಂದುವರಿದಿರುವ ನಡುವೆಯೇ ಪ್ರಕರಣದ ಆರೋಪಿಗಳ ಪೈಕಿ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ದೆಹಲಿ ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಆರೋಪಿಯನ್ನ ಬಂಧಿಸಲು ಮುಂದಾದ ವೇಳೆ ಪೊಲೀಸರೊಂದಿಗೆ ಗುಂಡಿನ ಚಕಮಕಿ ನಡೆದಿದೆ. ಬಂಧಿತ ಆರೋಪಿಯನ್ನ ಆಸಿಫ್ ಎಂದು ಗುರುತಿಸಲಾಗಿದೆ. ಗುಂಡಿನ ಚಕಮಕಿ ವೇಳೆ ಆರೋಪಿ ಬಲಗಾಲಿಗೆ ಗುಂಡು ತಗುಲಿದೆ. ಬಳಿಕ ಆತನನ್ನ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಪೊಲೀಸರು ತಡೆದಾಗ ಆತ ಪೊಲೀಸರ ಮೇಲೆಯೇ ಮೂರು ಸುತ್ತು ಗುಂಡು ಹಾರಿಸಿದ್ದಾನೆ. ಶರಣಾಗುವಂತೆ ಸೂಚಿಸಿದರೂ ಆತ ಗುಂಡಿನ ದಾಳಿ ಮುಂದುವರಿಸಿದ್ದಾನೆ. ಈ ವೇಳೆ ಪೊಲೀಸರು ಪ್ರತಿದಾಳಿ ನಡೆಸಿದ್ದು, ಒಂದು ಗುಂಡು ಆರೋಪಿಯ ಬಲಗಾಲಿಗೆ ತಗುಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

