ಬಾಗಲಕೋಟೆ: ಬೆಳಗಾವಿ ಜಿಲ್ಲೆಯ ರಾಮದುರ್ಗ ಸೇರಿದಂತೆ ಜಲಾನಯನ ಪ್ರದೇಶದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಮಲಪ್ರಭಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು ನದಿಗೆ ಈಗ ಮತ್ತೆ ಜೀವಕಳೆ ಬಂದಿದೆ.
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕುಳಗೇರಿ ಕ್ರಾಸ್ ವ್ಯಾಪ್ತಿಯಲ್ಲಿ ಹರಿಯುವ ಮಲಪ್ರಭಾ ನದಿಯಲ್ಲಿ ನೀರಿನ ಒಳಹರಿವು ಗಣನೀಯವಾಗಿ ಹೆಚ್ಚಾಗಿದ್ದು, ನದಿ ಎರಡು ದಂಡೆಗಳನ್ನು ಮುಟ್ಟಿ ಭೋರ್ಗರೆದು ಹರಿಯುತ್ತಿದೆ. ನದಿಯ ಒಡಲು ಮತ್ತೆ ಭರ್ತಿಯಾಗುತ್ತಿರುವ ದೃಶ್ಯ ನದಿ ತೀರದ ಜನರಲ್ಲಿ ಸಂತಸ ತಂದಿದೆ. ಇದನ್ನೂ ಓದಿ: ಕೋಲಾರದಲ್ಲಿ ತಡರಾತ್ರಿ ಸುರಿದ ಮಳೆಗೆ ಸರ್ವಜ್ಞ ಪಾರ್ಕ್ ಸಂಪೂರ್ಣ ಜಲಾವೃತ
ಮಲಪ್ರಭಾ ನದಿಯ ನೀರನ್ನೇ ನಂಬಿ ಕೃಷಿ ಮಾಡುತ್ತಿದ್ದ ನದಿ ಪಾತ್ರದ ರೈತರಲ್ಲಿ ಈ ಹರಿವು ಭರವಸೆಯ ಬೆಳಕು ಮೂಡಿಸಿದೆ. ಹಲವು ದಿನಗಳಿಂದ ನೀರಿನ ಕೊರತೆಯಿಂದ ಕಂಗೆಟ್ಟಿದ್ದ ಅನ್ನದಾತರಿಗೆ ಈಗ ಜೀವಜಲ ಲಭಿಸಿದಂತಾಗಿದೆ. ನದಿಯಲ್ಲಿ ಭರಪೂರ ನೀರು ಹರಿಯುತ್ತಿರುವುದರಿಂದ ಮುಂಗಾರು ಕೃಷಿ ಚಟುವಟಿಕೆಗಳು ಗರಿಗೆದರಲಿದ್ದು, ಬೆಳೆಗಳಿಗೆ ಸಮರ್ಪಕ ನೀರು ಸಿಗಲಿದೆ ಎಂದು ಸ್ಥಳೀಯ ರೈತರು ಹರ್ಷ ವ್ಯಕ್ತಪಡಿಸಿದ್ದಾರೆ.
ಜೊತೆಗೆ ನದಿ ಪಾತ್ರದ ಬಾವಿ, ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟವೂ ಹೆಚ್ಚಾಗುವ ನಿರೀಕ್ಷೆಯಿದ್ದು, ನದಿ ತೀರದ ಜನರಿಗೆ ಕುಡಿಯುವ ನೀರಿನ ಆತಂಕವೂ ದೂರವಾದಂತಾಗಿದೆ.


