ನವದೆಹಲಿ: ತೃಣಮೂಲ ಕಾಂಗ್ರೆಸ್ (TMC) ಪಕ್ಷದ ಹೆಸರು ಹಾಗೂ ಚುನಾವಣಾ ಚಿಹ್ನೆ ಬಳಕೆಗೆ ತಡೆ ನೀಡಿರುವ ಚುನಾವಣಾ ಆಯೋಗದ ಮಧ್ಯಂತರ ಆದೇಶ ಪ್ರಶ್ನಿಸಿ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಸಲ್ಲಿಸಿರುವ ಅರ್ಜಿಯನ್ನು ತುರ್ತು ವಿಚಾರಣೆಗೆ ಪಟ್ಟಿ ಮಾಡಲು ಸುಪ್ರೀಂ ಕೋರ್ಟ್ (Supreme Court) ಒಪ್ಪಿಗೆ ಸೂಚಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಾಲ್ಯ ಬಾಗ್ಚಿ ಹಾಗೂ ವಿ. ಮೊಹನಾ ಅವರನ್ನೊಳಗೊಂಡ ಪೀಠದ ಮುಂದೆ ಟಿಎಂಸಿ ಪರ ಹಿರಿಯ ವಕೀಲ ಕಪಿಲ್ ಸಿಬಲ್ ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಪಟ್ಟಿ ಮಾಡುವಂತೆ ಮನವಿ ಮಾಡಿದರು. ಚುನಾವಣಾ ಆಯೋಗವು (Election Commission) ನೋಟಿಸ್ ನೀಡಿರುವ ಪ್ರಕ್ರಿಯೆ ನಡೆಯುತ್ತಿರುವಾಗಲೇ ಪಕ್ಷದ ಚುನಾವಣಾ ಚಿಹ್ನೆಗೆ ತಡೆ ನೀಡಿರುವುದನ್ನು ಪ್ರಶ್ನಿಸಿದರು. ಇದನ್ನೂ ಓದಿ: TMC ಹೆಸರು, ಚಿಹ್ನೆ ಬಳಕೆಗೆ ತಡೆ – ಚುನಾವಣಾ ಆಯೋಗ ಆದೇಶ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಮಮತಾ
ಪಕ್ಷದ ಹೆಸರು, ಚಿಹ್ನೆ ಹಾಗೂ ಸಂಘಟನಾ ನಿಯಂತ್ರಣದ ಮೇಲೆ ಮಮತಾ ಬ್ಯಾನರ್ಜಿ ನೇತೃತ್ವದ ಬಣ ಮತ್ತು ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ರಿತಬ್ರತ ಬ್ಯಾನರ್ಜಿ ನೇತೃತ್ವದ ಬಣ ಹಕ್ಕು ಮಂಡಿಸಿರುವ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ. ಟಿಎಂಸಿ (TMC) ಪಕ್ಷದ ಹೆಸರು ಮತ್ತು ಪಕ್ಷದ ಸಾಂಪ್ರದಾಯಿಕ ‘ಹೂವು ಮತ್ತು ಹುಲ್ಲು’ ಚಿಹ್ನೆಯನ್ನು ಬಳಸುವುದನ್ನು ಎರಡೂ ಬಣಗಳಿಗೆ ನಿರ್ಬಂಧಿಸಿ ಚುನಾವಣಾ ಆಯೋಗ ಸೆಪ್ಟೆಂಬರ್ 17ರಂದು ಮಧ್ಯಂತರ ಆದೇಶ ಹೊರಡಿಸಿತ್ತು.
ನಂತರ ಮುಂಬರುವ ಉಪಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಎರಡೂ ಬಣಗಳಿಗೆ ಪ್ರತ್ಯೇಕ ಹೆಸರು ಹಾಗೂ ಚಿಹ್ನೆಗಳನ್ನು ಆಯೋಗ ಹಂಚಿಕೆ ಮಾಡಿದೆ. ಮಮತಾ ಬ್ಯಾನರ್ಜಿ ನೇತೃತ್ವದ ಬಣಕ್ಕೆ ‘ಮಮತಾ ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್’ ಎಂಬ ಹೆಸರು ಹಾಗೂ ‘ಫುಟ್ಬಾಲ್ ಆಟಗಾರ’ ಚಿಹ್ನೆ ನೀಡಲಾಗಿದೆ. ಮತ್ತೊಂದು ಬಣಕ್ಕೆ ‘ಡೆಮಾಕ್ರಟಿಕ್ ತೃಣಮೂಲ ಕಾಂಗ್ರೆಸ್’ ಎಂಬ ಹೆಸರು ಮತ್ತು ‘ಲಕೋಟೆ’ ಚಿಹ್ನೆ ಹಂಚಿಕೆ ಮಾಡಲಾಗಿದೆ. ಇದನ್ನೂ ಓದಿ: ‘ಹೊಸ ಚಿಹ್ನೆಯೊಂದಿಗೆ ಜನರ ಬಳಿ ಹೋಗ್ತೀನಿ – ಮತ್ತೆ ಯೂಟರ್ನ್ ಹೊಡೆದ ಮಮತಾ ಅಭ್ಯರ್ಥಿ
ಸೆಪ್ಟೆಂಬರ್ 18ರಂದು ಮಮತಾ ಬ್ಯಾನರ್ಜಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ಚುನಾವಣಾ ಆಯೋಗದ ಮಧ್ಯಂತರ ಆದೇಶವನ್ನು ಪ್ರಶ್ನಿಸಿದ್ದಾರೆ. ಆಯೋಗದ ತೀರ್ಮಾನದಿಂದ ಟಿಎಂಸಿಯ ಮೂಲ ಹೆಸರು ಮತ್ತು ಚುನಾವಣಾ ಚಿಹ್ನೆ ಬಳಕೆಗೆ ತಡೆ ಉಂಟಾಗಿರುವುದನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ. ಚುನಾವಣಾ ಆಯೋಗ ಹಾಗೂ ಪ್ರತಿಸ್ಪರ್ಧಿ ಬಣದ ನಾಯಕ ರಿತಬ್ರತ ಬ್ಯಾನರ್ಜಿ ಅವರನ್ನು ಅರ್ಜಿಯಲ್ಲಿ ಪ್ರತಿವಾದಿಗಳಾಗಿ ಹೆಸರಿಸಲಾಗಿದೆ.
ವಿಚಾರಣೆಯನ್ನು ತ್ವರಿತವಾಗಿ ನಡೆಸುವಂತೆ ಕಪಿಲ್ ಸಿಬಲ್ ಮನವಿ ಮಾಡಿದಾಗ, ಪ್ರಕರಣ ಪಟ್ಟಿ ಮಾಡಿದ ಸಂದರ್ಭದಲ್ಲಿ ಎರಡೂ ಬಣಗಳಿಗೆ ತಮ್ಮ ವಾದ ಮಂಡಿಸಲು ಅವಕಾಶವಿರಲಿದೆ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹೇಳಿದ್ದಾರೆ. ಪ್ರಕರಣವನ್ನು ಇದೇ ವಾರ ಪಟ್ಟಿ ಮಾಡಲು ಪ್ರಯತ್ನಿಸುವುದಾಗಿ ಪೀಠ ತಿಳಿಸಿದೆ.ಇದನ್ನೂ ಓದಿ: ಮಮತಾಗೆ ಮತ್ತೊಂದು ಶಾಕ್ – ರೆಜಿನಗರ ಕ್ಷೇತ್ರದ ಅಭ್ಯರ್ಥಿ ಕಣದಿಂದ ಔಟ್!

