ಬಾಗಲಕೋಟೆ: ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತದ ನಿರಂತರ ನಿರ್ಲಕ್ಷ್ಯಕ್ಕೆ ಬೇಸತ್ತ ಬಾಗಲಕೋಟೆ(Bagalkote) ಜಿಲ್ಲೆಯ ಜಮಖಂಡಿ ತಾಲೂಕಿನ ಕೊಣ್ಣೂರು ಮಡ್ಡಿ ಪ್ಲಾಟ್‌ನ ನೂರಾರು ಗ್ರಾಮಸ್ಥರು ತಮ್ಮ ನ್ಯಾಯಯುತ ಹಕ್ಕುಗಳಿಗಾಗಿ ರಾಜಧಾನಿ ಬೆಂಗಳೂರಿಗೆ(Bengaluru) ಬರೋಬ್ಬರಿ 550 ಕಿಲೋಮೀಟರ್ ಸುದೀರ್ಘ ಪಾದಯಾತ್ರೆ ಆರಂಭಿಸಿದ್ದಾರೆ.
ಕಳೆದ 30 ವರ್ಷಗಳಿಂದ ಸೂರು ಮತ್ತು ಹಕ್ಕುಪತ್ರಕ್ಕಾಗಿ ನಡೆಸುತ್ತಿರುವ ಹೋರಾಟಕ್ಕೆ ಜಿಲ್ಲಾಮಟ್ಟದಲ್ಲಿ ಯಾವುದೇ ನ್ಯಾಯ ಸಿಗದ ಹಿನ್ನೆಲೆಯಲ್ಲಿ, ಅಂತಿಮವಾಗಿ ಮುಖ್ಯಮಂತ್ರಿಗಳ ಮೊರೆ ಹೋಗಲು ಗ್ರಾಮಸ್ಥರು ಈ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.
ಕೊಣ್ಣೂರು ಮಡ್ಡಿ ಪ್ಲಾಟ್ ನಿವಾಸಿಗಳು ಹಕ್ಕುಪತ್ರಕ್ಕಾಗಿ ಬರೋಬ್ಬರಿ ಮೂರು ದಶಕಗಳಿಂದ ಕಾಯುತ್ತಿದ್ದಾರೆ. ಕಳೆದ 8 ವರ್ಷಗಳಿಂದ ಜಿಲ್ಲಾಧಿಕಾರಿಗಳ ಕಚೇರಿ, ಜಿಲ್ಲಾ ಪಂಚಾಯತ್ ಹಾಗೂ ಜನಪ್ರತಿನಿಧಿಗಳ ಮನೆ ಬಾಗಿಲು ತಟ್ಟಿ ಅಲೆದಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳ ಬೇಜವಾಬ್ದಾರಿತನದಿಂದ ರೊಚ್ಚಿಗೆದ್ದಿರುವ ಗ್ರಾಮಸ್ಥರು, “ಇನ್ನು ಸ್ಥಳೀಯವಾಗಿ ಮನವಿ ಕೊಟ್ಟು ಪ್ರಯೋಜನವಿಲ್ಲ, ರಾಜ್ಯದ ಮುಖಂಡರ ಬಳಿಯೇ ನ್ಯಾಯ ಕೇಳುತ್ತೇವೆ” ಎಂದು ಪಾದಯಾತ್ರೆಗಿಳಿದಿದ್ದಾರೆ.
ಗ್ರಾಮಸ್ಥರ ಬೇಡಿಕೆಗಳು ಏನು?
ಕೊಣ್ಣೂರು ಮಡ್ಡಿ ಪ್ಲಾಟ್‌ನ 300 ಬಡ ಕುಟುಂಬಗಳಿಗೆ ತಕ್ಷಣವೇ ಹಕ್ಕುಪತ್ರ ಹಾಗೂ ಇ-ಸ್ವತ್ತು ವಿತರಿಸಬೇಕು. ಅರ್ಹ ನಿವಾಸಿಗಳಿಗೆ ಆಶ್ರಯ ಯೋಜನೆಯಡಿ ಮನೆಗಳನ್ನು ಮಂಜೂರು ಮಾಡಬೇಕು. ಇದನ್ನೂ ಓದಿ: ಕತ್ರಿನಾ ವಿರುದ್ಧ ಬಾಡಿ ಶೇಮಿಂಗ್ ಮಾಡಿದವರಿಗೆ ಸಲ್ಮಾನ್ ಖಾನ್ ವಾರ್ನಿಂಗ್
ತಮ್ಮ ಹಕ್ಕುಗಳ ರಕ್ಷಣೆಗಾಗಿ ಮಹಿಳೆಯರು, ಯುವಕರು ಹಾಗೂ ವೃದ್ಧರು ಎನ್ನದೆ ನೂರಾರು ಗ್ರಾಮಸ್ಥರು ಕೈಯಲ್ಲಿ ಬುತ್ತಿ-ರೊಟ್ಟಿ ಕಟ್ಟಿಕೊಂಡು ಬೆಂಗಳೂರಿನತ್ತ ಹೆಜ್ಜೆ ಹಾಕುತ್ತಿದ್ದಾರೆ. 550 ಕಿಲೋಮೀಟರ್‌ನ ಈ ಕಠಿಣ ಪಾದಯಾತ್ರೆಯು ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ಬೆಂಗಳೂರು ತಲುಪುವ ನಿರೀಕ್ಷೆಯಿದೆ.
ಅಂದು ಬೆಂಗಳೂರಿನ ವಿಧಾನಸೌಧದ ಎದುರು ಬೃಹತ್ ಧರಣಿ ನಡೆಸಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಖುದ್ದಾಗಿ ಮನವಿ ಸಲ್ಲಿಸಲಿದ್ದಾರೆ. “ಕೇವಲ ಆಶ್ವಾಸನೆ ನೀಡಿದರೆ ನಾವು ಮರಳುವುದಿಲ್ಲ; ಸ್ಥಳದಲ್ಲೇ ನಮ್ಮ ಬೇಡಿಕೆಗಳಿಗೆ ಸಂಬಂಧಿಸಿದಂತೆ ಅಧಿಕೃತ ಸರ್ಕಾರಿ ಆದೇಶ ಪತ್ರ ಹೊರಡಿಸಿದ ನಂತರವೇ ಊರಿಗೆ ಹಿಂತಿರುಗುತ್ತೇವೆ,” ಎಂದು ಹೋರಾಟಗಾರರು ಖಡಕ್ ಎಚ್ಚರಿಕೆ ನೀಡಿದ್ದಾರೆ.

