– ಹಳೆ ಚಂದಾಪುರ ರೈಲ್ವೆ ಬ್ರಿಡ್ಜ್ ರಸ್ತೆ ಜಲಾವೃತ
– ಕಿಲೋಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್
ಬೆಂಗಳೂರು: ಬ್ರ‍್ಯಾಂಡ್ ಬೆಂಗಳೂರಿನ (Bengaluru) ಅಸಲಿ ಮುಖವನ್ನು ರಾತ್ರಿ ಸುರಿದ ಮಳೆ ಬಯಲು ಮಾಡಿದೆ. ಬೆಂಗಳೂರಿನಲ್ಲಿ ತಡರಾತ್ರಿ ಬಂದ ಮಳೆಗೆ ಅಂಡರ್‌ಪಾಸ್‌ಗಳು ಕೆರೆಯಂತಾಗಿದೆ. ಪಣತ್ತೂರು ರೈಲ್ವೆ ಅಂಡರ್ ಪಾಸ್ ಜಲಾವೃತವಾಗಿ, ಬೆಳಗ್ಗೆಯಿಂದಲೂ ವಾಹನ ಸವಾರರು ಮೊಣಕಾಲುದ್ದದ ನೀರಿನಲ್ಲಿ ಪರದಾಡುವಂತಾಗಿತ್ತು.
ವಾಹನಗಳ ಒಳಗೆ ನೀರು ತುಂಬಿಕೊಂಡು ಕೆಟ್ಟು ನಿಂತಿತ್ತು. BMW ಕಾರು ಸೇರಿದಂತೆ 2 ರಿಂದ 3 ಕಾರುಗಳು ಕೆಟ್ಟು ಹೋದ್ವು. ಹೀಗಾಗಿ ಜನರ ಸಹಾಯದಿಂದ ನೀರಿನಲ್ಲೇ ಕಾರನ್ನ (Car) ತಳ್ಳಿಕೊಂಡು ಹೋಗಬೇಕಾಯ್ತು. ಇನ್ನು ಕೆಲ ದ್ವಿಚಕ್ರ ವಾಹನ ಸವಾರರು ನೀರಿನಲ್ಲೇ ತಳ್ಳಿಕೊಂಡು ಹೋದ್ರು. ಸಮಸ್ಯೆಗೆ ಸ್ಪಂದಿಸದ ಜಿಬಿಎ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದ್ರು.

ಮಡಿವಾಳ ಅಂಡರ್‌ಪಾಸ್‌ನಲ್ಲೂ ಅವಾಂತರ
ರಾತ್ರಿ ಸುರಿದ ಮಳೆಗೆ ಮಡಿವಾಳ ಅಂಡರ್‌ಪಾಸ್ ಸಹ ಕೆರೆಯಂತಾಗಿತ್ತು. ನಿಂತ ನೀರಿನಲ್ಲೇ ವಾಹನ ಸವಾರರು ಪರದಾಡಿಕೊಂಡು ಸಂಚರಿಸಬೇಕಾಯ್ತು. ಮಳೆ ಬಂದಾಗಲೆಲ್ಲ ಇದೇ ಗೋಳು. ಅಂಡರ್‌ಪಾಸ್ ಒಳಗೆ ನೀರು ನಿಂತರೂ ಜಿಬಿಎ ಅಧಿಕಾರಿಗಳು ಇತ್ತ ಗಮನ ಹರಿಸದ್ದಕ್ಕೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ರು.
ಕೆಸರು ಗದ್ದೆಯಂತಾದ ಹೆದ್ದಾರಿ ರಸ್ತೆ
ಕಳೆದ ರಾತ್ರಿ ಸುರಿದ ಮಳೆಗೆ ಹೆದ್ದಾರಿ ರಸ್ತೆ ಕೆಸರು ಗದ್ದೆಯಾಗಿದೆ. ಬೆಂಗಳೂರು-ಹೊಸೂರು ಹೆದ್ದಾರಿಯ ಹಳೆ ಚಂದಾಪುರ ರೈಲ್ವೆ ಬ್ರಿಡ್ಜ್ ಬಳಿ ರಸ್ತೆ ಜಲಾವೃತವಾಗಿ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಕಳೆದೊಂದು ವರ್ಷದಿಂದ ನಡೆಯುತ್ತಿರುವ ಹೆದ್ದಾರಿ ಕಾಮಗಾರಿ ಪರಿಣಾಮ ಹಳೆ ಚಂದಾಪುರ ಬಳಿಯ ರೈಲ್ವೆ ಬ್ರಿಡ್ಜ್ ಬಳಿ ಅಪಾರ ಪ್ರಮಾಣದ ನೀರು ನಿಂತು ಅವಘಡ ಸಂಭವಿಸಿದೆ. ಗಂಟೆಗಟ್ಟಲೇ ಟ್ರಾಫಿಕ್‌ನಲ್ಲಿ ಸಿಲುಕಿದ ವಾಹನ ಸವಾರರು ಪರದಾಡುವಂತಾಯ್ತು. ಟ್ರಾಫಿಕ್ ನಿಯಂತ್ರಿಸಲು ಸೂರ್ಯನಗರ ಪೊಲೀಸರು ಹರಸಾಹಸ ಪಡಬೇಕಾಯ್ತು. ಆಮೆಗತಿಯಲ್ಲಿ ಹೆದ್ದಾರಿ ಕಾಮಗಾರಿ ನಡೆಯುತ್ತಿರುವುದಕ್ಕೆ ಸವಾರರು ಕಿಡಿ ಕಾರಿದ್ರು.

ರಾಜ್ಯದಲ್ಲಿ ಮುಂದಿನ 5 ದಿನ ವ್ಯಾಪಕ ಮಳೆ
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆ ರಾಜ್ಯದಲ್ಲಿ ಮುಂದಿನ 5 ದಿನ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ವ್ಯಾಪಕ ಮಳೆ ಆಗಲಿದೆ ಎಂದಿದೆ. ಬೆಂಗಳೂರು, ಬೀದರ್, ಗದಗ, ಹಾಸನ, ಬೆಳಗಾವಿ, ಧಾರವಾಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಕಲಬುರಗಿ, ಹಾವೇರಿ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇನ್ನು ಕೋಲಾರದಲ್ಲಿ ರಾತ್ರಿ ಸುರಿದ ಮಳೆಯಿಂದ ತಗ್ಗುಪ್ರದೇಶಗಳಿಗೆ ನೀರು ನುಗ್ಗಿದೆ. ಮಾಲೂರು ತಾಲೂಕು ಕೂರ್ನಹಳ್ಳಿ ಗ್ರಾಮದಲ್ಲಿ ಗೋಡೆ ಕುಸಿದು ಅವಾಂತರವಾಗಿದೆ.

