ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ನಂತರ ವ್ಯತ್ಯಾಸಗಳ ಕಾರಣದಿಂದಾಗಿ ದೆಹಲಿ ಹಾಲಿ ಮತ್ತು ಮಾಜಿ ಸಿಎಂ ಇಬ್ಬರಿಗೂ ನೋಟಿಸ್ ನೀಡಲಾಗಿದೆ.
ಸುಮಾರು 31.6 ಲಕ್ಷಕ್ಕೂ ಹೆಚ್ಚು ಮತದಾರರಿಗೆ ಎಸ್‌ಐಆರ್ ನೋಟಿಸ್ ನೀಡಲಾಗಿದೆ. ಅವರ ಪೈಕಿ ದೆಹಲಿ ಸಿಎಂ ರೇಖಾ ಗುಪ್ತಾ (Rekha Gupta) ಹಾಗೂ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರೂ ಸೇರಿದ್ದಾರೆಂದು ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿರುವ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ದೆಹಲಿಯ ಮತದಾರರ ಪಟ್ಟಿಯಲ್ಲಿ ಕೇಜ್ರಿವಾಲ್ ಹೆಸರಿಲ್ಲ ಅಂತ AAP ಆರೋಪ; ಚುನಾವಣಾ ಆಯೋಗ ಸ್ಪಷ್ಟನೆ ಏನು?
ದೆಹಲಿಯ ಮತದಾರರ ಕರಡು ಪಟ್ಟಿಯನ್ನು ಆಗಸ್ಟ್ 31 ರಂದು ಬಿಡುಗಡೆ ಮಾಡಲಾಯಿತು. ಅದಾದ ಮೂರು ವಾರಗಳ ನಂತರ, ದೆಹಲಿಯ ಮುಖ್ಯ ಚುನಾವಣಾ ಅಧಿಕಾರಿಯ (CEO) ಕಚೇರಿಯು ನೋಟಿಸ್‌ಗಳನ್ನು ಪಡೆದ ಮತದಾರರ ಪಟ್ಟಿಯನ್ನು ಪ್ರಕಟಿಸಿತು. ಗುರುತಿಸಲಾದ ಮತದಾರರು ಅಂತಿಮ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲು, ತಮ್ಮ ಪ್ರತಿಕ್ರಿಯೆಗಳು ಮತ್ತು ಅಗತ್ಯ ದಾಖಲೆಗಳನ್ನು ಚುನಾವಣಾ ಅಧಿಕಾರಿಗಳಿಗೆ ಸಲ್ಲಿಸಬೇಕಾಗುತ್ತದೆ.
ಪಟ್ಟಿಗಳಲ್ಲಿರುವ ಮತದಾರರನ್ನು ಎರಡು ವಿಭಾಗಗಳಾಗಿ ವರ್ಗೀಕರಿಸಲಾಗಿದೆ. ಮ್ಯಾಪಿಂಗ್ ಇಲ್ಲದಿರುವವರು (no mapping) – ಅಂದರೆ 2002ರ ಹಿಂದಿನ ಪರಿಷ್ಕರಣೆಯ ಮತದಾರರ ಪಟ್ಟಿಯೊಂದಿಗೆ ಸೇರಿಸಲು ಸಾಧ್ಯವಾಗದ ಮತದಾರರು ಮತ್ತು ತಾರ್ಕಿಕ ವ್ಯತ್ಯಾಸಗಳು (logical discrepancies) – ಅಂದರೆ ಹಿಂದಿನ ಪಟ್ಟಿಯೊಂದಿಗೆ ಹೋಲಿಸಿದಾಗ ವಿವರಗಳಲ್ಲಿ ತಾಳೆಯಾಗದ ಮತದಾರರು. ಇದನ್ನೂ ಓದಿ: ಹೆಚ್1ಬಿ ವೀಸಾ; ಉದ್ಯೋಗದಾತರಿಗೆ 1 ಲಕ್ಷ ಡಾಲರ್ ಶುಲ್ಕ ಮುಂದುವರಿಕೆ
SIR ನಂತರ ದೆಹಲಿಯ ಕರಡು ಮತದಾರರ ಪಟ್ಟಿಯಲ್ಲಿ ಪ್ರಕಟವಾದ ಒಟ್ಟು 9,753,577 ಮತದಾರರ ಪೈಕಿ, 1,379,785 ಮಂದಿಯನ್ನು ಈಗ ‘ಮ್ಯಾಪಿಂಗ್ ಇಲ್ಲದ’ (no mapping) ವರ್ಗಕ್ಕೆ ಸೇರಿಸಲಾಗಿದೆ ಮತ್ತು 1,933,134 ಮಂದಿಯನ್ನು ‘ತಾರ್ಕಿಕ ವ್ಯತ್ಯಾಸಗಳು’ (logical discrepancies) ಇರುವವರೆಂದು ಗುರುತಿಸಲಾಗಿದೆ.

