– ಸಿದ್ರಾಮಯ್ಯರನ್ನ ಒಗ್ಗರಣೆಗೆ ಬಳಸಿಕೊಂಡು ಬಿಸಾಕಿದ್ದಾರೆ ಅಂತ ಲೇವಡಿ
ಬೆಂಗಳೂರು: ಕಾಂಗ್ರೆಸ್‌ನ ಬಹಳಷ್ಟು ನಾಯಕರು (Congress Leaders) ಅಸಮಾಧಾನಗೊಂಡಿದ್ದು, ಬಿಜೆಪಿ – ಜೆಡಿಎಸ್ ಸೇರೋದಕ್ಕೆ ಸಂಪರ್ಕ ಮಾಡ್ತಿದ್ದಾರೆ. 2028ರ ಚುನಾವಣೆ ಹತ್ತಿರ ಬರ್ತಿದ್ದಂತೆ ಬಹಳ ಜನ ಕಾಂಗ್ರೆಸ್ ತೊರೆದು ಎನ್‌ಡಿಎ ಒಕ್ಕೂಟ ಸೇರುತ್ತಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ (R. Ashok) ಹೊಸ ಬಾಂಬ್ ಸಿಡಿಸಿದರು.
ಬೆಂಗಳೂರಿನಲ್ಲಿ (Bengaluru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಮಾರ್ಮಿಕ ಮಾತುಗಳಿಗೆ ಪ್ರತಿಕ್ರಿಯಿಸಿದರು.
ಸಿದ್ದರಾಮಯ್ಯ ಅವರನ್ನ ಸಿಎಂ ಸ್ಥಾನದಿಂದ ತೆಗೆದಾಗಲೇ ಅವರಿಗೆ ಗೌರವ ಕೊಡಲಿಲ್ಲ. 3 ತಿಂಗಳು ಕಾಲಾವಕಾಶ ಕೊಡದೇ ಸಿಎಂ ಸ್ಥಾನದಿಂದ ಇಳಿಸಿದ್ರು. ಸಿಎಂ ಸ್ಥಾನದಿಂದ ಇಳಿಸಿದ್ದೇಕೆ ಅನ್ನೋದಕ್ಕೆ ರಾಹುಲ್ ಗಾಂಧಿ (Rahul Gandhi) ಇನ್ನೂ ಕಾರಣ ಕೊಟ್ಟಿಲ್ಲ. ಇವತ್ತು ಸಿದ್ದರಾಮಯ್ಯ ಅರ್ಥಗರ್ಭಿತವಾಗಿ ಮಾತಾಡಿದ್ದಾರೆ ಎಂದು ಬ್ಯಾಟ್ ಬೀಸಿದ್ರು.
ಸಂಪುಟ ವಿಸ್ತರಣೆ ಆದಾಗಿಂದಲೂ ಸಿದ್ದರಾಮಯ್ಯ (Siddaramaiah) ಅವರ ಮಾತು ನಡೀತಿಲ್ಲ. ಸಿದ್ದರಾಮಯ್ಯ ಅವರನ್ನ ಕಾಂಗ್ರೆಸ್ ಯೂಸ್ ಆಂಡ್ ತ್ರೋ ಥರ ನೋಡ್ತಿದೆ. ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಕರಿಬೇವಿನ ಸೊಪ್ಪಿನ ತರ, ಒಗ್ಗರಣೆಗೆ ಬಳಸಿ ಬಳಿಕ ಬಿಸಾಡುವ ಹಾಗೆ ಸಿದ್ದರಾಮಯ್ಯ ಅವರನ್ನ ನಡೆಸಿಕೊಳ್ಳಲಾಗಿದೆ. ಇತರೆ ನಾಯಕರೂ ಕಾಂಗ್ರೆಸ್‌ನಲ್ಲಿ ಅಸಮಧಾನ ಆಗಿದ್ದಾರೆ. ಬಹಳ ಜನ ಬೇರೆ ಪಕ್ಷ ಸೇರಲು ತಯಾರಿ ಮಾಡಿಕೊಳ್ತಿದ್ದಾರೆ. ಬಿಜೆಪಿ – ಜೆಡಿಎಸ್ ಸೇರಲು ಬಹಳ ಜನ ಸಂಪರ್ಕ ಮಾಡ್ತಿದ್ದಾರೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಬಹಳ ಜನ ಕಾಂಗ್ರೆಸ್ ಬಿಟ್ಟು ಎನ್‌ಡಿಎ ಒಕ್ಕೂಟ ಸೇರ್ತಾರೆ ಎಂದು ಭವಿಷ್ಯ ನುಡಿದರು.
ಡಿಕೆಶಿ ಕೂಡ ಮೂಗಿಗೆ ತುಪ್ಪ ಸವರಿ ಬರ್ತಾರೆ
ಇನ್ನೂ ಮಂಗಳೂರು ಸಚಿವ ಸಂಪುಟ ಸಭೆ ಬಗ್ಗೆ ಮಾತನಾಡಿ, ಮಂಗಳೂರು ಕ್ಯಾಬಿನೆಟ್ ಉಪಯೋಗ ಇಲ್ಲ. ಸರ್ಕಾರದಲ್ಲಿ ಹಣ ಇಲ್ಲ, ಮೂಗಿಗೆ ತುಪ್ಪ ಸವರಿ ಬರ್ತಾರೆ ಅಷ್ಟೇ. ಸಿದ್ದರಾಮಯ್ಯ ಸಿಎಂ ಇದ್ದಾಗಲೇ ಮಂಗಳೂರಿಗೆ ಏನೂ ಕೊಡಲಿಲ್ಲ, ಈಗ ಆರ್ಥಿಕ ಸಂಕಷ್ಟದಲ್ಲಿ ಡಿಕೆಶಿ ಕೂಡ ಏನೂ ಕೊಡಲ್ಲ ಎಂದು ಟೀಕೆ ಮಾಡಿದರು.
ಮೂರು ದಿನ ವಿಶೇಷ ಅಧಿವೇಶ ಕರೆಯಲಾಗಿದೆ. ನಾವು ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡ್ತೇವೆ. ವಿಶೇಷ ಅಧಿವೇಶನಲ್ಲೂ ನಾವು ಸಾಲಮನ್ನಾ ಆಗ್ರಹಿಸಿ ಚರ್ಚೆ ಮಾಡ್ತೇವೆ. ಸರ್ಕಾರ ಕಾಟಾಚಾರಕ್ಕೆ ಅಧಿವೇಶನ ಕರೆದಿದೆ ಅಷ್ಟೇ ಎಂದು ವಾಗ್ದಾಳಿ ನಡೆಸಿದರು.
ಇನ್ನೂ ಸತೀಶ್ ಜಾರಕಿಹೊಳಿ ಮೇಲಿನ ಇಡಿ ದಾಳಿ ಬಗ್ಗೆ ಮಾತನಾಡಿ, ಸತೀಶ್ ಜಾರಕಿಹೊಳಿ ಸಿಂಪಲ್ ಮನುಷ್ಯ ಅಂತ ನಾವೆಲ್ಲ ಅಂದುಕೊಂಡಿದ್ವಿ. ಆದ್ರೆ ಅವರು ಲೂಟಿ ಮಾಡಿ ಚಿನ್ನದ ಗಣಿ ಖರೀದಿಸಿದವರು. ಸ್ಮಶಾನದಲ್ಲಿ ಊಟ ಮಾಡಿ ಸಿಂಪಲ್ ಅಂತ ತೋಸಿಕೊಂಡ್ರು. ಆದ್ರೆ ಲೂಟಿ ಮಾಡ್ತಾ ಬಂದಿದ್ದಾರೆ ಎಂದು ಲೇವಡಿ ಮಾಡಿದರು.

