– ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಕೆ ಮಾಡಲು ಸೂಚನೆ
ಶಿವಮೊಗ್ಗ: ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ನಿರೀಕ್ಷಿತ ಮಳೆ ಬಾರದ ಹಿನ್ನೆಲೆಯಲ್ಲಿ ಭದ್ರಾ ಅಚ್ಚುಕಟ್ಟು (Bhadra Dam) ಪ್ರದೇಶದ ಜನ-ಜಾನುವಾರುಗಳ ಕುಡಿಯುವ ನೀರಿನ ಅಗತ್ಯತೆಗಾಗಿ ಜಲಾಶಯದ ವಿತರಣಾ ನಾಲೆಗಳಿಗೆ ಸೆ.17ರ ಮಧ್ಯರಾತ್ರಿ 12 ಗಂಟೆಯಿಂದ ಅಕ್ಟೋಬರ್ 2ರವರೆಗೆ ಒಟ್ಟು 15 ದಿನಗಳ ಕಾಲ ನೀರು ಹರಿಸಲು ನಿರ್ಧರಿಸಲಾಗಿದೆ.
ಅಚ್ಚುಕಟ್ಟು ಭಾಗದಲ್ಲಿ ಎದುರಾಗಿರುವ ಕುಡಿಯುವ ನೀರಿನ ಅಭಾವವನ್ನ ನೀಗಿಸಲು ಹಾಗೂ ಕೆರೆ-ಹಳ್ಳಗಳನ್ನು ತುಂಬಿಸಲು ನೀರು ಹರಿಸುವಂತೆ ರೈತರು, ಶಾಸಕರು ಹಾಗೂ ರೈತ ಮುಖಂಡರು ಒತ್ತಾಯಿಸಿದ್ದರು. ಅಲ್ಲದೇ ಶಿವಮೊಗ್ಗ, ಭದ್ರಾವತಿ, ದಾವಣಗೆರೆ, ಶಾಂತಿಸಾಗರ ಮತ್ತು ಮಲೆಬೆನ್ನೂರು ಭಾಗಗಳಲ್ಲಿ ಪ್ರತಿಭಟನೆಗಳು ಸಹ ನಡೆದಿದ್ದವು.
ಈ ಕುರಿತು ಶಿವಮೊಗ್ಗ ಹಾಗೂ ದಾವಣಗೆರೆ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಸಲ್ಲಿಸಿದ್ದ ವರದಿಯ ಅನ್ವಯ, ಜಲಸಂಪನ್ಮೂಲ ಸಚಿವರು ಹಾಗೂ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರಾದ ಮಧು ಬಂಗಾರಪ್ಪ ಮತ್ತು ಸಂಬಂಧಪಟ್ಟ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಇದನ್ನೂ ಓದಿ: ಟಾಟಾ ಗ್ರೂಪ್ ಅಧ್ಯಕ್ಷರಾಗಿ ಎನ್. ಚಂದ್ರಶೇಖರನ್ ಮರುನೇಮಕ
ಈ ನೀರನ್ನು ಕೇವಲ ಕುಡಿಯುವ ನೀರು, ಅಂತರ್ಜಲ ವೃದ್ಧಿ ಹಾಗೂ ಕೆರೆಗಳನ್ನು ತುಂಬಿಸಲು ಮಾತ್ರ ಬಳಸಬೇಕಾಗಿದ್ದು, ಡಿಸೆಂಬರ್ 2026 ರವರೆಗೆ ಅಭಾವ ಎದುರಾಗದಂತೆ ಸದ್ಬಳಕೆ ಮಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಈ ನೀರನ್ನು ಬೆಳೆಗಳಿಗೆ ಬಳಸುವಂತಿಲ್ಲ ಹಾಗೂ ಅನಧಿಕೃತವಾಗಿ ನೀರೆತ್ತುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಸಾರ್ವಜನಿಕ ಹಿತದೃಷ್ಟಿಯಿಂದ ಕಾಲುವೆ ಪಾತ್ರಗಳಲ್ಲಿ ಸಾರ್ವಜನಿಕರು ತಿರುಗಾಡುವುದು, ದನಕರುಗಳನ್ನು ತೊಳೆಯುವುದು ಮತ್ತು ದೈನಂದಿನ ಚಟುವಟಿಕೆಗಳಿಗೆ ನೀರಿನ ಬಳಕೆಯನ್ನು ನಿಷೇಧಿಸಲಾಗಿದ್ದು, ಅಚ್ಚುಕಟ್ಟು ಭಾಗದ ರೈತರು ಇಲಾಖೆಯೊಂದಿಗೆ ಸಹಕರಿಸಬೇಕಾಗಿ ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಹಾಗೂ ಅಧೀಕ್ಷಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.ಇದನ್ನೂ ಓದಿ: ಅಮೆರಿಕ ಮಹಿಳೆ ಮೇಲಿನ ಅತ್ಯಾಚಾರ ಕೇಸ್ – ಹೋಂಸ್ಟೇ ಮಾಲೀಕನಿಗೆ 5 ಲಕ್ಷ ಪರಿಹಾರ ನೀಡದ ಸರ್ಕಾರ!

