ನವದೆಹಲಿ: ಉದ್ಯೋಗಿಗಳ ಸಾಮಾಜಿಕ ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ (Central Govt) ಮಹತ್ವದ ನಿರ್ಧಾರ ಕೈಗೊಂಡಿದ್ದು, ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ವ್ಯಾಪ್ತಿಗೆ ಬರುವ ವೇತನ ಮಿತಿಯನ್ನು 15 ಸಾವಿರ ರೂ.ಯಿಂದ 25 ಸಾವಿರ ರೂ.ಕ್ಕೆ ಹೆಚ್ಚಿಸಲು ಅನುಮೋದನೆ ನೀಡಿದೆ.
ಈ ನಿರ್ಧಾರದಿಂದ ಪ್ರಸ್ತುತ 15 ಸಾವಿರ ರೂ.ಯಿಂದ 25 ಸಾವಿರ ರೂ.ವರೆಗೆ ಮಾಸಿಕ ವೇತನ ಪಡೆಯುತ್ತಿರುವ ಸುಮಾರು 51 ಲಕ್ಷಕ್ಕೂ ಅಧಿಕ ಹೆಚ್ಚುವರಿ ಉದ್ಯೋಗಿಗಳು EPFO ಸಾಮಾಜಿಕ ಭದ್ರತಾ ವ್ಯವಸ್ಥೆಯ ವ್ಯಾಪ್ತಿಗೆ ಬರಲಿದ್ದಾರೆ. ಇದರಿಂದ ಈ ಉದ್ಯೋಗಿಗಳಿಗೆ ಭವಿಷ್ಯ ನಿಧಿ, ಉದ್ಯೋಗಿಗಳ ಪಿಂಚಣಿ ಯೋಜನೆ ಹಾಗೂ ಉದ್ಯೋಗಿಗಳ ಠೇವಣಿ ಲಿಂಕ್ಡ್ ವಿಮಾ ಯೋಜನೆ ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಸೌಲಭ್ಯಗಳ ಲಾಭ ದೊರೆಯಲಿದೆ. ಇದನ್ನೂ ಓದಿ: ಪ್ರಶಸ್ತಿ ಬಗ್ಗೆ ಪ್ರಧಾನಿ ಮೋದಿಯವರೇ ಘೋಷಿಸಿದ್ದು ಖುಷಿಯಾಯ್ತು: ದಾದಾಸಾಹೇಬ್ ಫಾಲ್ಕೆ ಬಗ್ಗೆ ಅನಂತ್ ನಾಗ್ ರಿಯಾಕ್ಷನ್
EPFO ಕಡ್ಡಾಯ ವ್ಯಾಪ್ತಿಗೆ ಸಂಬಂಧಿಸಿದ ವೇತನ ಮಿತಿಯನ್ನು 2014ರಲ್ಲಿ 15 ಸಾವಿರ ರೂ.ಗೆ ಹೆಚ್ಚಿಸಲಾಗಿತ್ತು. ಇದೀಗ ಒಂದು ದಶಕಕ್ಕೂ ಹೆಚ್ಚು ಅವಧಿಯ ಬಳಿಕ ಈ ಮಿತಿಯನ್ನು 25 ಸಾವಿರ ರೂ.ಗೆ ಹೆಚ್ಚಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ಕೇಂದ್ರ ಸರ್ಕಾರದ ಪ್ರಕಾರ, ವೇತನ ಮಿತಿ ಹೆಚ್ಚಳದಿಂದ ಹೆಚ್ಚಿನ ಸಂಖ್ಯೆಯ ಉದ್ಯೋಗಿಗಳು ಔಪಚಾರಿಕ ಸಾಮಾಜಿಕ ಭದ್ರತಾ ವ್ಯವಸ್ಥೆಗೆ ಸೇರ್ಪಡೆಯಾಗಲಿದ್ದು, ಅವರ ನಿವೃತ್ತಿ ಭದ್ರತೆ ಹಾಗೂ ಕುಟುಂಬದ ಸಾಮಾಜಿಕ ಭದ್ರತೆ ಮತ್ತಷ್ಟು ಬಲಗೊಳ್ಳಲಿದೆ.
ವೇತನ ಮಿತಿ ಹೆಚ್ಚಳದಿಂದ ಸರ್ಕಾರಕ್ಕೆ ವಾರ್ಷಿಕ ಅಂದಾಜು 11,339 ಕೋಟಿ ರೂ. ಹೆಚ್ಚುವರಿ ವೆಚ್ಚವಾಗಲಿದೆ. ಐದು ವರ್ಷಗಳ ಅವಧಿಯಲ್ಲಿ ಒಟ್ಟು ವೆಚ್ಚ ಸುಮಾರು 56,696 ಕೋಟಿ ರೂ. ಎಂದು ಅಂದಾಜಿಸಲಾಗಿದೆ. EPFO ಹಾಗೂ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಅಗತ್ಯ ಕಾನೂನು ಮತ್ತು ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಈ ನಿರ್ಧಾರವನ್ನು ಜಾರಿಗೆ ತರಲಿದೆ.ಇದನ್ನೂ ಓದಿ: ಯುಪಿಐ ಶುಲ್ಕ ನಿಯಮ; ಟ್ರಂಪ್ ಮುಂದೆ ಶರಣಾಗಬೇಡಿ – ಮೋದಿ ವಿರುದ್ಧ ರಾಹುಲ್ ಗಾಂಧಿ ಕಿಡಿ

