ಭಾರತೀಯ ಸಿನಿಮಾ ಕ್ಷೇತ್ರದ ಅತ್ಯುನ್ನತ ಗೌರವ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸಿಕ್ಕಿರುವುದಕ್ಕೆ ಹಿರಿಯ ನಟ ಅನಂತ್ ನಾಗ್ ಖುಷಿ ವ್ಯಕ್ತಪಡಿಸಿದ್ದಾರೆ.
ಪ್ರಶಸ್ತಿ ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರೇ ಘೋಷಿಸಿದ್ದು ನನಗೆ ಬಹಳ ಖುಷಿ ಎನಿಸಿತು ಎಂದು ನಟ ಪ್ರತಿಕ್ರಿಯಿಸಿದ್ದಾರೆ.
ರಾಷ್ಟ್ರೀಯ ಮಟ್ಟದಲ್ಲಿ ಮತ್ತೊಮ್ಮೆ ಪ್ರಶಸ್ತಿ ಸಿಕ್ಕಿದೆ. ಪದ್ಮಭೂಷಣ ಪ್ರಶಸ್ತಿಯನ್ನು ನಾನು ಕನ್ನಡಿಗರಿಗೆ ಅರ್ಪಿಸಿದ್ದೆ. ಫಾಲ್ಕೆ ಪ್ರಶಸ್ತಿ ಕೂಡ ನಾಡಿನ ಜನತೆ ಮತ್ತು ಕರ್ನಾಟಕಕ್ಕೆ ಅರ್ಪಿಸುತ್ತೇನೆ ಎಂದು ‘ಪಬ್ಲಿಕ್ ಟಿವಿ’ ಜೊತೆ ಅನಂತ್ ನಾಗ್ ತಿಳಿಸಿದರು.
ನಾನು ಬಹಳ ವರ್ಷಗಳಿಂದ ಪ್ರಧಾನಿ ಮೋದಿ ಅವರನ್ನು ಫಾಲೋ ಮಾಡುತ್ತಾ ಬಂದಿದ್ದೇನೆ. ನಾನು ಕೂಡ ರಾಜಕಾರಣದಲ್ಲಿ ಜನತಾ ಪಕ್ಷಕ್ಕಾಗಿ ಕೆಲಸ ಮಾಡಿದ್ದೆ. ಜನತಾ ದಳದಲ್ಲೂ ಇದ್ದೆ. ಸುಮಾರು 21 ವರ್ಷ ನಾನು ರಾಜಕೀಯ ಪಕ್ಷದಲ್ಲಿದ್ದೆ. ಚುನಾವಣೆಯಲ್ಲಿ ಸೋತ ನಂತರ ಪಕ್ಷ ಬಿಟ್ಟೆ. ಅದೇ ಸಂದರ್ಭದಲ್ಲಿ ಗುಜರಾತ್ನಲ್ಲಿ ಮೋದಿ ಅವರು ಮುಖ್ಯಮಂತ್ರಿಯಾಗಿದ್ದರು. ಅಲ್ಲಿಂದಲೂ ನಾನು ಅವರನ್ನು ಫಾಲೋ ಮಾಡಿದ್ದೇನೆ. ಈ ರೀತಿಯ ವ್ಯಕ್ತಿ ಯಾವತ್ತೂ ರಾಜಕಾರಣಕ್ಕೆ ಸಿಕ್ಕಿರಲಿಲ್ಲ. ಮೋದಿ ಅವರನ್ನು ನಾನು ಮೆಚ್ಚುತ್ತೇನೆ. ಪ್ರಶಸ್ತಿ ವಿಚಾರವನ್ನು ಪ್ರಧಾನಿಗಳೇ ಟ್ವೀಟ್ ಮಾಡಿದ್ದು ಬಹಳ ವಿಶೇಷ ಎಂದು ನಟ ಖುಷಿ ಹಂಚಿಕೊಂಡರು.

