ಲಕ್ನೋ: ಅಯೋಧ್ಯೆಯ ರಾಮಮಂದಿರದ (Rammandir) ಆಡಳಿತ ವ್ಯವಸ್ಥೆಯಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ದೇವಾಲಯದ ಆಂತರಿಕ ಮಾಹಿತಿ ಹೊರಗೆ ಸೋರಿಕೆಯಾಗದಂತೆ ಸಿಬ್ಬಂದಿ, ಅಧಿಕಾರಿಗಳು ಹಾಗೂ ಅರ್ಚಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಮಂದಿರದ ಆವರಣದಲ್ಲಿ ನಡೆಯುವ ಚಟುವಟಿಕೆಗಳು, ಕೈಗೊಳ್ಳುವ ನಿರ್ಧಾರಗಳು, ಆಡಳಿತಾತ್ಮಕ ವ್ಯವಸ್ಥೆಗಳು ಹಾಗೂ ಇತರ ಆಂತರಿಕ ಮಾಹಿತಿಗಳನ್ನು ಅನಧಿಕೃತವಾಗಿ ಹೊರಗೆ ಹಂಚಿಕೊಳ್ಳದಂತೆ ಸಿಬ್ಬಂದಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ. ಮಂದಿರದ ಆಂತರಿಕ ವ್ಯವಸ್ಥೆಗೆ ಸಂಬಂಧಿಸಿದ ಮಾಹಿತಿಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವುದಕ್ಕೆ ನಿರ್ಬಂಧ ಹೇರಲಾಗಿದೆ. ಇದನ್ನೂ ಓದಿ: ಮೈಸೂರಿನಲ್ಲಿ ದಸರಾ ಸೊಬಗು, ಅರಮನೆ ಬೆಡಗು – ದಸರೆಯಲ್ಲಿ ನೀವು ನೋಡಲೇಬೇಕಾದ ಅರಮನೆಗಳಿವು!
ಹೊಸ ವ್ಯವಸ್ಥೆಯಲ್ಲಿ ಮಾಹಿತಿ ಗೌಪ್ಯತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ನಿಯಮ ಉಲ್ಲಂಘಿಸಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಲಾಗಿದೆ. ಮಂದಿರದೊಳಗಿನ ಮಾಹಿತಿ ಹೊರಗೆ ಹೋಗದಂತೆ ಮೇಲ್ವಿಚಾರಣೆ ಮತ್ತು ಶಿಸ್ತನ್ನು ಮತ್ತಷ್ಟು ಬಲಪಡಿಸಲಾಗುತ್ತಿದೆ.
ಇತ್ತೀಚೆಗೆ ಹೊಸ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿರುವ ನಿವೃತ್ತ ಏರ್ ಮಾರ್ಷಲ್ ಜಿತೇಂದ್ರ ಮಿಶ್ರಾ ಅವರಿಗೂ ಮಂದಿರದ ಆಂತರಿಕ ಚಟುವಟಿಕೆಗಳ ಗೌಪ್ಯತೆ ಕಾಪಾಡುವ ಕುರಿತು ಟ್ರಸ್ಟ್‌ನಿಂದ ಸೂಚನೆ ನೀಡಲಾಗಿದೆ. ಅಧಿಕಾರ ವಹಿಸಿಕೊಂಡ ಬಳಿಕ ಅವರು ಕೂಡ ಸಿಬ್ಬಂದಿಗೆ ಅನಧಿಕೃತವಾಗಿ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳದಂತೆ ಸಲಹೆ ನೀಡಿದ್ದಾರೆ. ಇದನ್ನೂ ಓದಿ: ನಾಯಕನಾದವನಿಗೆ ಅಡಿಗಡಿಗೂ ಅಡಚಣೆಗಳು ಜಾಸ್ತಿ: ಡಿ.ಕೆ.ಶಿವಕುಮಾರ್
ಅರ್ಚಕರಿಗೂ ಕಟ್ಟುನಿಟ್ಟಿನ ನಿಯಮ:
ರಾಮಲಲ್ಲಾ ಸೇವೆಯಲ್ಲಿ ತೊಡಗಿರುವ ಅರ್ಚಕರಿಗೂ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ಮಂದಿರದ ಒಳಗಿನ ಚಟುವಟಿಕೆಗಳು, ವ್ಯವಸ್ಥೆಗಳು ಹಾಗೂ ಸೇವೆಯ ಸಂದರ್ಭದಲ್ಲಿ ನಡೆಯುವ ಆಂತರಿಕ ವಿಚಾರಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವುದಕ್ಕೆ ನಿರ್ಬಂಧ ವಿಧಿಸಲಾಗಿದೆ. ಅಲ್ಲದೆ, ಮಂದಿರದೊಳಗೆ ಅರ್ಚಕರು ಮೊಬೈಲ್ ಫೋನ್ ಬಳಸುವುದಕ್ಕೂ ನಿರ್ಬಂಧ ಹೇರಲಾಗಿದೆ. ನಿಯಮಗಳನ್ನು ಉಲ್ಲಂಘಿಸಿದರೆ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಮಂದಿರ ಆಡಳಿತ ಸ್ಪಷ್ಟಪಡಿಸಿದೆ.ಇದನ್ನೂ ಓದಿ: ಹೋಬಳಿಗೊಂದು ವಸತಿ ಶಾಲೆ ನಿರ್ಮಾಣಕ್ಕೆ 650 ಕೋಟಿ ಮೀಸಲು: ಮುನಿಯಪ್ಪ

