– ಚಿಲ್ಲರೆ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಲಿ
– ಕೇಂದ್ರ ಮಂತ್ರಿ ಎನ್ನುವುದನ್ನು ಮರೆತು ಗ್ರಾಮ ಪಂಚಾಯಿತಿ ಸದಸ್ಯರಂತೆ ವರ್ತಿಸುತ್ತಿದ್ದಾರೆ
ರಾಮನಗರ: ನೈಸ್ ಮತ್ತು ಕೆಪಿಎಸ್ಸಿ ಅಕ್ರಮಗಳನ್ನು ಮುಚ್ಚಿಹಾಕಲು ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಮುನ್ನೆಲೆಗೆ ತರಲಾಗುತ್ತಿದೆ ಎಂಬ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (H D Kumarswamy) ಅವರ ಆರೋಪಕ್ಕೆ ಶಾಸಕ ಹಾಗೂ ಸಚಿವ ಹೆಚ್.ಸಿ. ಬಾಲಕೃಷ್ಣ (H C Balakrishna) ತಿರುಗೇಟು ನೀಡಿದ್ದಾರೆ.
ರಾಮನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ವಿಚಾರದ ಬಗ್ಗೆ ಯಾಕೆ ಮಾತನಾಡ್ತಾರೆ? ಅದು ಅಸಹ್ಯ. ಪ್ರಜ್ವಲ್ ಪ್ರಕರಣಕ್ಕೂ, ನೈಸ್-ಕೆಪಿಎಸ್ಸಿಗೂ ಏನು ಸಂಬಂಧ? ಹೀಗೆ ಪದೇ ಪದೇ ಮಾತನಾಡಿಯೇ ಪ್ರಜ್ವಲ್ರನ್ನ ಜೈಲಿಗೆ ಕಳುಹಿಸಿದರು. ಪ್ರಜ್ವಲ್ ಜೈಲಲ್ಲೇ ಇರಬೇಕು, ಅವರನ್ನು ರಾಜಕೀಯವಾಗಿ ಮುಗಿಸಿ ತಮ್ಮ ಮಗನನ್ನು ಪ್ರತಿಷ್ಠಾಪನೆ ಮಾಡಬೇಕು ಎನ್ನುವುದೇ ಕುಮಾರಸ್ವಾಮಿ ಅವರ ಅಸಲಿ ಅಭಿಲಾಷೆ ಎಂದು ಬಾಲಕೃಷ್ಣ ನೇರ ಆರೋಪ ಮಾಡಿದರು.
ಜವಾಬ್ದಾರಿಯುತ ಸ್ಥಾನದಲ್ಲಿರುವ ಕೇಂದ್ರ ಸಚಿವರು ಗೌರವಯುತವಾಗಿ ಮಾತನಾಡಬೇಕು. ಕೇಂದ್ರ ಮಂತ್ರಿ ಎನ್ನುವುದನ್ನು ಮರೆತು ಗ್ರಾಮ ಪಂಚಾಯಿತಿ ಸದಸ್ಯರಂತೆ ವರ್ತಿಸುತ್ತಿದ್ದಾರೆ. ಪ್ರಜ್ವಲ್ ಬಳಿ ಮೊಬೈಲ್ ಹೇಗೆ ಬಂತು ಎಂದು ಅನುಮಾನವಿದ್ದರೆ ಸಿಬಿಐ ತನಿಖೆಗೆ ಪತ್ರ ಬರೆಯಲಿ ಎಂದು ಸವಾಲು ಎಸೆದರು.
ರಾಜ್ಯ ಸರ್ಕಾರದ 100ನೇ ದಿನದ ಸಾಧನಾ ಕಾರ್ಯಕ್ರಮವನ್ನು ಹೆಚ್ಡಿಕೆ ವ್ಯಂಗ್ಯ ಮಾಡಿದ್ದಕ್ಕೆ ಪ್ರತಿಕ್ರಿಯಿಸಿ, ಪ್ರಪಂಚದಲ್ಲಿ ಕುಮಾರಸ್ವಾಮಿ ಒಬ್ಬರೇ ಮೇಧಾವಿ, ಉಳಿದವರೆಲ್ಲ ದಡ್ಡರು ಎನ್ನುವ ಮನಸ್ಥಿತಿ ಅವರದ್ದು. ನಾನು ಹುಟ್ಟಿದ್ದೇ ಬಡವರಿಗಾಗಿ ಎನ್ನುವ ಅವರ ಮನಸ್ಥಿತಿಯ ಬಗ್ಗೆ ನಾವೇನೂ ಮಾತನಾಡಲು ಸಾಧ್ಯವಿಲ್ಲ ಎಂದರು. ಇದನ್ನೂ ಓದಿ: ವಿಡಿಯೋ ಡಿಲೀಟ್ ಮಾಡುವಂತೆ ಸ್ಥಳೀಯ ವಾಹಿನಿಗಳಿಗೆ ಧನಂಜಯ ಧಮ್ಕಿ ಆರೋಪ!
ದೇವೇಗೌಡರ ಕುಟುಂಬವನ್ನು ಮುಗಿಸಲು ಸಂಚು ರೂಪಿಸಲಾಗಿದೆ ಎಂಬ ಆರೋಪಕ್ಕೆ ತಿರುಗೇಟು ನೀಡಿದ ಅವರು, ಯಾರೋ ಯಾರನ್ನೂ ಮುಗಿಸಲು ಸಾಧ್ಯವಿಲ್ಲ. ನಮ್ಮನ್ನು ಮುಗಿಸಲು ಅವರು ನೋಡಿದರೆ, ನಾವು ಅದನ್ನೇ ಮಾಡುತ್ತೇವೆ, ಇದು ರಾಜಕಾರಣ. ದೇವೇಗೌಡರು, ಕುಮಾರಸ್ವಾಮಿ ಎಂದರೆ ಒಕ್ಕಲಿಗರು ಎದ್ದು ನಿಲ್ಲುತ್ತಾರೆ ಎನ್ನುವ ಸೆಂಟಿಮೆಂಟ್ ರಾಜಕಾರಣ ಬಿಡಲಿ. ಕೇಂದ್ರ ಮಂತ್ರಿಯಾಗಿದ್ದಾರೆ, ರಾಜ್ಯಕ್ಕೆ ಉದ್ಯೋಗಗಳನ್ನು ತರಲಿ ನಮ್ಮ ಸರ್ಕಾರ ಜಾಗ ನೀಡಲು ಸಿದ್ಧವಿದೆ ಎಂದರು.
ನಾನು ವಿದೇಶದಿಂದ ಬರುವವರೆಗೆ ಯಾರೂ ನಿದ್ದೆ ಮಾಡಿಲ್ಲ ಎಂಬ ಕುಮಾರಸ್ವಾಮಿ ಹೇಳಿಕೆಗೆ ವ್ಯಂಗ್ಯವಾಡಿದ ಬಾಲಕೃಷ್ಣ, ಅಯ್ಯೋ.. ಅವರು ಬರುವವರೆಗೂ ನಾವ್ಯಾರೂ ನಿದ್ದೆಯೇ ಮಾಡಿರಲಿಲ್ಲ. ನಾಳೆಯಿಂದ ನೆಮ್ಮದಿಯಾಗಿ ನಿದ್ದೆ ಮಾಡುತ್ತೇವೆ. ಎಲ್ಲಿ ಎದೆ ಡಮ್ ಅನ್ನುತ್ತೋ ಅಂತ ಭಯ ಇತ್ತು, ಎದೆ ಗಟ್ಟಿಯಾಗಿ ಇಟ್ಟುಕೊಂಡಿದ್ದೆವು. ಇಂತಹ ಚಿಲ್ಲರೆ ಹೇಳಿಕೆಗಳನ್ನು ನೀಡುವುದನ್ನು ಅವರು ನಿಲ್ಲಿಸಲಿ ಎಂದು ಬಾಲಕೃಷ್ಣ ವ್ಯಂಗ್ಯವಾಡಿದರು.ಇದನ್ನೂ ಓದಿ: ಇನ್ಸ್ಪೆಕ್ಟರ್ ಮಾಡಬಾರದ್ದು ಏನು ಮಾಡಿಲ್ಲ, ಪೊಲೀಸ್ ಲಾಂಗ್ವೇಜ್ನಲ್ಲಿ ಹೇಳಿದ್ದಾರೆ; ಡಿಕೆಶಿ

