ಬೆಳಗಾವಿ: ಮುಂಬರುವ ಗೋವಾ ವಿಧಾನಸಭಾ ಚುನಾವಣೆಯನ್ನು(Goa Election) ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್ ಹೈಕಮಾಂಡ್ (Congress High Command) ಚುನಾವಣಾ ಮಾಧ್ಯಮ ಮತ್ತು ಪ್ರಚಾರ ತಂತ್ರಗಾರಿಕೆಗಾಗಿ ನಾಲ್ವರು ಪ್ರಮುಖ ಸಂಯೋಜಕರನ್ನು ನೇಮಿಸಿದೆ. ಈ ಪೈಕಿ ಬೆಳಗಾವಿಯ ಯುವ ಕಾಂಗ್ರೆಸ್ ಮುಖಂಡ ಮಾಜಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್(Mrinal Hebbalkar) ಅವರಿಗೆ ಮಹತ್ವದ ಜವಾಬ್ದಾರಿ ವಹಿಸಲಾಗಿದೆ.
ಎಐಸಿಸಿ (AICC) ಮಾಧ್ಯಮ ಮತ್ತು ಪ್ರಚಾರ ವಿಭಾಗದ ಅಧ್ಯಕ್ಷ ಪವನ್ ಖೇರಾ ಅವರು ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಪಕ್ಷದ ಪರ ಸಮರ್ಥ ಮಾಧ್ಯಮ ನಿರ್ವಹಣೆ, ಪ್ರಚಾರ ತಂತ್ರ ಮತ್ತು ಸಂವಹನವನ್ನು ಚುರುಕುಗೊಳಿಸುವ ಉದ್ದೇಶದಿಂದ ಈ ನೇಮಕಾತಿ ಮಾಡಲಾಗಿದೆ.
ಮ್ಯಾಥ್ಯೂ ಆಂಟನಿ ಅವರನ್ನು ರಾಷ್ಟ್ರೀಯ ಮಾಧ್ಯಮ ಸಂಯೋಜಕರನ್ನಾಗಿ ನೇಮಿಸಿದ್ದರೆ ಮೃಣಾಲ್ ಹೆಬ್ಬಾಳ್ಕರ್, ನಿಶಾಂತ್ ಆನಂದ್, ಅಲಿ ಮೆಹದಿ ಅವರನ್ನು ಸಂಯೋಜಕರನ್ನಾಗಿ ಆಯ್ಕೆ ಮಾಡಲಾಗಿದೆ. ಇದನ್ನೂ ಓದಿ: ಧನಂಜಯ್ ಧಮ್ಕಿಗೆ ತಿರುಗೇಟು: ಟಿ. ನರಸೀಪುರದಲ್ಲಿ ಮಸೀದಿ ರಸ್ತೆಯಲ್ಲಿ ಶೋಭಾಯಾತ್ರೆಗೆ ಹಿಂದೂ ಜಾಗರಣ ವೇದಿಕೆ ಸಜ್ಜು
ನೇಮಕಗೊಂಡಿರುವ ನಾಯಕರು ಗೋವಾ ಪ್ರದೇಶ ಕಾಂಗ್ರೆಸ್ ಸಮಿತಿ (GPCC) ಜತೆ ನಿಕಟ ಸಮನ್ವಯ ಸಾಧಿಸಿ, ಸಮಗ್ರ ಮಾಧ್ಯಮ ಮತ್ತು ಸಾರ್ವಜನಿಕ ಸಂಪರ್ಕ ಚಟುವಟಿಕೆಗಳ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.
ರಾಷ್ಟ್ರಮಟ್ಟದ ಸಾಂಸ್ಥಿಕ ಚಟುವಟಿಕೆಗಳಲ್ಲಿ ನಿರಂತರವಾಗಿ ಸಕ್ರಿಯವಾಗಿರುವ ಮೃಣಾಲ್ ಹೆಬ್ಬಾಳ್ಕರ್ ಅವರಿಗೆ ಈ ಮಹತ್ವದ ಹೊಣೆಗಾರಿಕೆ ನೀಡಿರುವುದು ಅವರ ಸಂಘಟನಾ ಸಾಮರ್ಥ್ಯಕ್ಕೆ ಸಂದ ಮನ್ನಣೆಯಾಗಿದೆ. ಈ ನೇಮಕದ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಮೃಣಾಲ್ ಅವರ ರಾಜಕೀಯ ಪಾತ್ರ ಮತ್ತಷ್ಟು ವಿಸ್ತಾರಗೊಂಡಿದೆ.

