ಬೆಳಗಾವಿ: ಜಿಲ್ಲಾ ಕೇಂದ್ರ ಸಹಕಾರಿ (ಡಿಸಿಸಿ) ಬ್ಯಾಂಕ್‌ನಲ್ಲಿ ರಾಜಕೀಯ ಮೇಲಾಟ ತಾರಕಕ್ಕೇರಿದ್ದು, ಜಾರಕಿಹೊಳಿ ಸಹೋದರರ(Jarakiholi Brothers) ಲೆಕ್ಕಾಚಾರವನ್ನು ಸಹಕಾರ ಸಚಿವ ಲಕ್ಷ್ಮಣ ಸವದಿ(Laxman Savadi) ಸಂಪೂರ್ಣವಾಗಿ ಉಲ್ಟಾ ಮಾಡಿದ್ದಾರೆ. ಸದ್ದಿಲ್ಲದೆ ಕಾರ್ಯಾಚರಣೆ ನಡೆಸಿದ ಸವದಿ, ತಮ್ಮ ಅತ್ಯಾಪ್ತ ಮುತ್ತಣ್ಣ ಕಾತ್ರಾಳ(Muttanna Katrala) ಅವರಿಗೆ ಅಪೆಕ್ಸ್ ಬ್ಯಾಂಕ್ ವತಿಯಿಂದ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಡಿಸಿಸಿ ಬ್ಯಾಂಕ್‌ನ ತೆರವಾದ ಸ್ಥಾನಕ್ಕೆ ಕುರುಬ ಸಮುದಾಯದ ಮುಖಂಡರೊಬ್ಬರನ್ನು ನೇಮಕ ಮಾಡಲು ಜಾರಕಿಹೊಳಿ ಸಹೋದರರು ಸಿದ್ಧತೆ ನಡೆಸಿದ್ದರು. ಈ ಕುರಿತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಬಹಿರಂಗವಾಗಿಯೇ ಹೇಳಿಕೆ ನೀಡುವ ಮೂಲಕ ತಮ್ಮ ಬಣದ ಪ್ರಭಾವ ಸಾಬೀತುಪಡಿಸಲು ಮುಂದಾಗಿದ್ದರು. ಆದರೆ ಸಹಕಾರ ಖಾತೆಯ ಚುಕ್ಕಾಣಿ ಹಿಡಿದಿರುವ ಸಚಿವ ಲಕ್ಷ್ಮಣ ಸವದಿ, ತಮ್ಮ ಇಲಾಖಾ ವ್ಯಾಪ್ತಿಯ ನಿರ್ದೇಶನದ ಬಲ ಬಳಸಿ ಜಾರಕಿಹೊಳಿ ಬಣದ ಲೆಕ್ಕಾಚಾರಕ್ಕೆ ಭರ್ಜರಿ ಬ್ರೇಕ್ ಹಾಕಿದ್ದಾರೆ.
ಅಪೆಕ್ಸ್ ಬ್ಯಾಂಕ್‌ನ(APEX Bank) ಪ್ರತಿನಿಧಿಯಾಗಿ ಬೆಳಗಾವಿ ಡಿಸಿಸಿ ಬ್ಯಾಂಕ್‌ಗೆ ನೇಮಕಗೊಂಡಿರುವ ಅಥಣಿ ಮೂಲದ ಜೈನ ಸಮುದಾಯದ ಮುತ್ತಣ್ಣ ಕಾತ್ರಾಳ ಅವರು ಕಳೆದ ಮೂರು ದಶಕಗಳಿಂದಲೂ ಲಕ್ಷ್ಮಣ ಸವದಿ ಅವರ ನಂಬಿಕಸ್ಥ ಹಾಗೂ ಕಟ್ಟಾ ಬೆಂಬಲಿಗರಾಗಿ ಗುರುತಿಸಿಕೊಂಡಿದ್ದಾರೆ. ತಮ್ಮ ಪರಮಾಪ್ತನಿಗೆ ಈ ಮಹತ್ವದ ಹುದ್ದೆ ಕೊಡಿಸುವ ಮೂಲಕ ಜಿಲ್ಲಾ ಸಹಕಾರ ರಾಜಕಾರಣದಲ್ಲಿ ತಮ್ಮ ಹಿಡಿತ ಮತ್ತು ಪ್ರಾಬಲ್ಯವನ್ನು ಸವದಿ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

