ಬೆಂಗಳೂರು: ಚುನಾವಣೆ ಹತ್ತಿರ ಬರಲಿ ಅಶೋಕ್ ಹಾಗು ವಿಜಯೇಂದ್ರ ಅವರಿಗೆ ಯಾವ ಅಧಿಕಾರವೂ ಇರೋದಿಲ್ಲ. ಬೇರೆಯವರು ಪ್ಯಾರಾಚೂಟ್ ಮೂಲಕ ಇಳಿಯುತ್ತಾರೆ ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ವ್ಯಂಗ್ಯವಾಡಿದ್ದಾರೆ.
ಅಶೋಕ್, ವಿಜಯೇಂದ್ರ ಅವರ ಕತೆ ಏನಿದ್ದರೂ, ಬರೀ ಬುಟ್ಟಿ ಬೇವಿನ ಸೊಪ್ಪು, ನಂದೇ ಬೆಳಗು ಪೂಜಾರಿ ಅನ್ನೋ ತರಹ. ಕುಮಾರಸ್ವಾಮಿ ಇವರಿಬ್ಬರನ್ನು ಇಳಿಸಿ ನನಗೇನಾದರೂ ಸಿಗಬಹುದಾ ಅಂತಾ ನೋಡುತ್ತಿದ್ದಾರೆ. ಹೀಗಾಗಿ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಬಾಂಬ್ ಹಾಕುತ್ತೇನೆ ಎನ್ನುತ್ತಿದ್ದಾರೆ ಎಂದೂ ಸಿಎಂ ಅವರು ಛೇಡಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ಬಿಜೆಪಿ ಮಾಜಿ ಶಾಸಕ ನೆ.ಲ. ನರೇಂದ್ರಬಾಬು ಅವರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕುಮಾರಸ್ವಾಮಿ ಅವರಿಗೆ ಕೇಂದ್ರದಲ್ಲಿ ದೊಡ್ಡ ಮಂತ್ರಿ ಸ್ಥಾನ ಸಿಕ್ಕಿದೆ. ಅದರ ಮೂಲಕ ಕರ್ನಾಟಕದ 50 ಸಾವಿರ ಜನರಿಗೆ ಉದ್ಯೋಗ ಸಿಗುವಂತೆ ಮಾಡಲಿ. ಅವರಿಗೆ ಎಲ್ಲಿ ಬೇಕೋ ಅಲ್ಲಿ, ಮಂಡ್ಯದಲ್ಲೇ ಬೇಕಾದರೂ ಭೂಸ್ವಾಧೀನ ಮಾಡಿ ಕೊಡೋಣ. ಆದರೆ ಅವರು ನನ್ನನ್ನು ಅಧಿಕಾರದಿಂದ ಇಳಿಸಿ ಬಿಡ್ತೇನೆ, ದೆಹಲಿಯಿಂದ ಬಾಂಬ್ ಹಾಕಿ ಬಿಡ್ತೇನೆ, ಅಲ್ಲೋಲ ಕಲ್ಲೋಲ ಮಾಡಿ ಬಿಡ್ತೇನೆ ಅಂತ ಮಾತಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
“ಅದೇನೋ ಅಲ್ಲೋಲ ಕಲ್ಲೋಲ ಆಗಿದೆಯಲ್ಲ. ಅದನ್ನು ನಾನು ಬಿಡಿಸಿ ಹೇಳಬೇಕೆ? ದಿನವೂ ನಾವು ಟಿವಿಯಲ್ಲಿ ನೋಡುತ್ತಿದ್ದೇವಲ್ಲ”ಎಂದಾಗ ಸಭಿಕರೊಬ್ಬರು ‘ಪೆನ್ ಡ್ರೈವ್’ ಎಂದು ಕೂಗಿದರು. ಆಗ ಸಿಎಂ ಅವರು, “ನಮಗೆ ಪೆನ್ ಡ್ರೈವ್ ವಿಚಾರ ಬೇಡ, ಅವರುಗಳು ಏನು ಬೇಕಾದರೂ ಮಾಡಿಕೊಳ್ಳಲಿ. ಸೆಂಟ್ರಲ್ ಜೈಲ್ ವಿಚಾರವೆಲ್ಲ ಅವರವರದ್ದು. ಅದೆಲ್ಲವೂ ಅವರ ಸಿದ್ದಾಂತ. ಅವರಿಂದ ಯಾರ್ಯಾರ ಕುಟುಂಬ ಏನಾಯಿತು ಎಂದು ಈಗ ಮಾತನಾಡುವುದು ಬೇಡ” ಎಂದೂ ಮಾತಿನ ಬಾಣ ಬಿಟ್ಟರು.
“ನಮ್ಮನ್ನು ಏನು ಬೇಕಾದರೂ ಮಾಡಲಿ. ನಮ್ಮನ್ನು ಬೇಕಾದರೆ ಸೀಳಿ ಇಡಿ, ಸಿಬಿಐಗೆ ತೆಗೆದುಕೊಂಡು ಹೋಗಲಿ, ಯಾವ ತನಿಖೆ ಬೇಕಾದರೂ ಮಾಡಲಿ. ಆದರೆ ಅವರ ವಿರುದ್ಧ ತನಿಖೆ ಮಾಡಿದಾಗ ನ್ಯಾಯಾಲಯಕ್ಕೆ ಹೋಗಿ ಏಕೆ ತಡೆಯಾಜ್ಞೆ ತರಲಾಗುತ್ತಿದೆ. ನೀವೆಲ್ಲವೂ ಟೀಮ್ ಅಲ್ಲವೇ? ಈ ಸ್ಥಾನದಲ್ಲಿದ್ದುಕೊಂಡು ದ್ವೇಷ ಬೇಡ ಎಂದು ಆ ವಿಚಾರಗಳಿಗೆ ನಾನು ಹೋಗಿಲ್ಲ. ಯಾರಿಗೂ ತೊಂದರೆ ಆಗಬಾರದು ಎಂಬುದು ನನ್ನ ಆಶಯ. ಈ ಅಧಿಕಾರ ಸಕಾರಾತ್ಮಕವಾಗಿ ಉಪಯೋಗವಾಗಬೇಕು. ಈ ಅಧಿಕಾರ ಇರುವುದು ದುರುಪಯೋಗ ಮಾಡಲು ಅಲ್ಲ. ಹತ್ತು ಜನಕ್ಕೆ ಒಳ್ಳೆಯದನ್ನು ಮಾಡಲು ಎಂಬುದು ನನ್ನ ಬದ್ಧತೆ” ಎಂದರು.
“10 ದಿನ ಸದನ ನಡೆಸಲೂ ಬಿಡಲಿಲ್ಲ. ಆನಂತರವೂ ಪಾದಯಾತ್ರೆ ಮಾಡಿದರು. ಈಗ ಕರೆದಿರುವ ಅಧಿವೇಶನದಲ್ಲಿ ಬೇರೆ ವಿಚಾರ ಮಾತನಾಡುವಂತಿಲ್ಲ. ಕೇವಲ ರೈತರ ವಿಚಾರ ಮಾತ್ರ. ಕಸ್ತೂರಿ ರಂಗನ್ ವರದಿ ಜಾರಿಗೆ ತಂದವರು ಯಾರು? ಇದರ ಬಗ್ಗೆ ಚರ್ಚೆ ಮಾಡಲಿ, ಬಿಡಲಿ. ಅದು ಅವರಿಗೆ ಬಿಟ್ಟಿದ್ದು. ಆನಂತರ ಅವರು ಗದೆಯಾದರೂ ಬೀಸಲಿ, ಬಾಣವನ್ನಾದರೂ ಬಿಡಲಿ. ಇದನ್ನು ಅನುಭವಿಸಲು ನಮ್ಮ ಪಕ್ಷ, ನಾವು ಹಾಗೂ ಕಾರ್ಯಕರ್ತರು ಸಿದ್ಧರಿದ್ದೇವೆ” ಎಂದರು.


