– ತಲೆಯನ್ನು ಮೇಜಿಗೆ ಬಡಿದು, ಕಲ್ಲು ಹೂಕುಂಡದಿಂದ ಹಲ್ಲೆ ಮಾಡಿದ್ದ ಬಾಲಕ
ಚಂಡೀಗಢ: ಹರಿಯಾಣದ ಪಂಚಕುಲ (Panchkula ) ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ 6 ವರ್ಷದ ಬಾಲಕಿ ಮೇಲೆ 8 ವರ್ಷದ ಬಾಲಕ ರಾಕ್ಷಸೀ ಕೃತ್ಯ ಎಸಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಕರ್ತವ್ಯಲೋಪದ ಆರೋಪದಡಿ ಶಾಲೆಯ ಪ್ರಾಂಶುಪಾಲೆಯನ್ನ ಸರ್ಕಾರ ಅಮಾನತುಗೊಳಿಸಿದೆ.
ಅಕ್ಟೋಬರ್ 28ರಂದು ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಪ್ರಕರಣದ ಗಂಭೀರತೆಯನ್ನ ಪರಿಗಣಿಸಿ ನವೆಂಬರ್ 1ರಂದು ಹರಿಯಾಣ ಸರ್ಕಾರ ಅಮಾನತು ಆದೇಶ ಹೊರಡಿಸಿದೆ.
ಪಂಚಕುಲದ ಸೆಕ್ಟರ್ 20ರಲ್ಲಿರುವ ಶಹೀದ್ ಮೇಜರ್ ಅನುಜ್ ರಜಪೂತ್ ಸರ್ಕಾರಿ ಮಾದರಿ ಸಂಸ್ಕೃತಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಾಂಶುಪಾಲೆ ನೀಲು ಅವರನ್ನ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. ಹರಿಯಾಣ ನಾಗರಿಕ ಸೇವಾ (ಶಿಕ್ಷೆ ಮತ್ತು ಮೇಲ್ಮನವಿ) ನಿಯಮಗಳು, 2016ರ ನಿಯಮ 5ರ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಅಮಾನತು ಅವಧಿಯಲ್ಲಿ ನೀಲು ಅವರ ಕೇಂದ್ರ ಕಚೇರಿಯನ್ನ ಅಂಬಾಲಾ ಜಿಲ್ಲಾ ಶಿಕ್ಷಣಾಧಿಕಾರಿಗಳ ಕಚೇರಿಗೆ ನಿಗದಿಪಡಿಸಲಾಗಿದೆ. ಸಕ್ಷಮ ಪ್ರಾಧಿಕಾರದ ಅನುಮತಿಯಿಲ್ಲದೆ ಕೇಂದ್ರ ಕಚೇರಿ ತೊರೆಯುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. ನಿಯಮಾನುಸಾರ ಅವರಿಗೆ ಜೀವನಾಧಾರ ಭತ್ಯೆ ನೀಡಲಾಗುತ್ತದೆ.
ತರಗತಿಯೊಳಗೆ ಬಾಲಕಿ ಮೇಲೆ ಭೀಕರ ಹಲ್ಲೆ
ಅಕ್ಟೋಬರ್ 28ರಂದು ಶಾಲೆಯ ಮೊದಲ ಮಹಡಿಯಲ್ಲಿರುವ ತರಗತಿ ಕೊಠಡಿಯಲ್ಲಿ ಈ ಘಟನೆ ನಡೆದಿದೆ. ಬಾಲಕಿಯ ತಂದೆ ತರಗತಿಯೊಳಗೆ ಕಾಯುತ್ತಿದ್ದಾರೆ ಎಂದು ಹೇಳಿ 8 ವರ್ಷದ ಬಾಲಕ 6 ವರ್ಷದ ಬಾಲಕಿಯನ್ನ ಕರೆದೊಯ್ದಿದ್ದಾನೆ. ನಂತರ ಬಾಲಕಿಯ ಕೂದಲು ಹಿಡಿದು ಬೆಂಚಿಗೆ ತಲೆಯನ್ನ ಗುದ್ದಿಸಿದ್ದಾನೆ. ಅಷ್ಟೇ ಅಲ್ಲದೇ, ಆಕೆಗೆ ಕಾಲಿನಿಂದ ಒದ್ದು, ಕಲ್ಲು ಹೂವಿನ ಕುಂಡವನ್ನ ಎತ್ತಿ ಮುಖಕ್ಕೆ ಅಪ್ಪಳಿಸಿದ್ದಾನೆ. ವಿಕೃತಿ ಮೆರೆದು ರಕ್ತದ ಮಡುವಿನಲ್ಲಿ ಬಾಲಕಿಯನ್ನು ಬಿಟ್ಟು ಹೋಗಿದ್ದಾನೆ.
ಸುಮಾರು 30 ನಿಮಿಷಗಳ ಬಳಿಕ ಮತ್ತೆ ತರಗತಿಗೆ ಬಂದ ಬಾಲಕ, ಬಾಲಕಿ ಮೇಲೆ ಮತ್ತೊಮ್ಮೆ ಹಲ್ಲೆ ನಡೆಸಿದ್ದಾನೆ. ಈ ಸಂಪೂರ್ಣ ಘಟನೆ ಶಾಲೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಘಟನೆಗೆ ಸಂಬಂಧಿಸಿದಂತೆ ಬಾಲಕಿಯ ಕುಟುಂಬಸ್ಥರು ಶಾಲಾ ಆಡಳಿತದ ವಿರುದ್ಧ ನಿರ್ಲಕ್ಷ್ಯದ ಆರೋಪ ಮಾಡಿದ್ದಾರೆ. ಶಾಲೆಯ ಸಿಸಿಟಿವಿಯಲ್ಲಿ ಇಡೀ ಘಟನೆ ಸೆರೆಯಾಗಿದ್ದರೂ, ಬಾಲಕಿಯನ್ನು ರಕ್ಷಿಸಲು ಅಥವಾ ಹಲ್ಲೆ ತಡೆಯಲು ಯಾರೂ ಮುಂದಾಗಿಲ್ಲ ಎಂದು ಕುಟುಂಬಸ್ಥರು ದೂರಿದ್ದಾರೆ.
ಬಾಲಕಿಯ ಸ್ಥಿತಿಯಲ್ಲಿ ಸುಧಾರಣೆ ಕಂಡುಬಂದಿದೆ. ಆದರೆ, ಆಕೆಯ ಮೇಲೆ ನಡೆದ ಹಲ್ಲೆಯ ಭೀಕರತೆಯನ್ನು ನೋಡಿದಾಗ ಬದುಕುಳಿಯುವುದು ಕಷ್ಟ ಎಂದು ಭಾವಿಸಿದ್ದೆವು ಎಂದು ಬಾಲಕಿಯ ಚಿಕ್ಕಪ್ಪ ಫಾಜಿಲ್ ಆತಂಕ ವ್ಯಕ್ತಪಡಿಸಿದ್ದಾರೆ.
ಪಿಜಿಐಎಂಇಆರ್ನಲ್ಲಿ ಬಾಲಕಿಗೆ ಚಿಕಿತ್ಸೆ
ಸದ್ಯ ಗಾಯಗೊಂಡಿರುವ ಬಾಲಕಿಗೆ ಚಂಡೀಗಢದ ಪೋಸ್ಟ್ಗ್ರಾಜುಯೇಟ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಜುಕೇಶನ್ ಆ್ಯಂಡ್ ರಿಸರ್ಚ್ (PGIMER) ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
