ಚಿಕ್ಕಮಗಳೂರು: 380 ಎಕರೆ ವಿಸ್ತೀರ್ಣದ ಬೃಹತ್ ಬೆಳವಾಡಿ ಕೆರೆ (Belavadi Lake) ಭರ್ತಿಯಾಗಿ ಕೋಡಿಬಿದ್ದಿದೆ. ಈ ಹಿನ್ನೆಲೆ ಎಂಎಲ್‌ಸಿ ಸಿ.ಟಿ ರವಿಯವರು (C.T Ravi) ಬಾಗಿನ ಅರ್ಪಿಸಿದ್ದಾರೆ.
ಎತ್ತಿನಹೊಳೆ (Yettinahole) ಯೋಜನೆಯಿಂದ ಬೃಹತ್ ಬೆಳವಾಡಿ ಕೆರೆ ಭರ್ತಿಯಾಗಿ ಕೋಡಿ ಬಿದ್ದಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಿ.ಟಿ ರವಿಯವರು, ಶಾಸಕ ತಮ್ಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಯೋಜನೆಗೆ ಖರ್ಚಾದ ಒಟ್ಟು 17 ಸಾವಿರ ಕೋಟಿ ರೂ.ನಲ್ಲಿ10,700 ಕೋಟಿ ರೂ. ಬಿಡುಗಡೆ ಮಾಡಿದ್ದು ಬಿಜೆಪಿ ಸರ್ಕಾರ. ಎತ್ತಿನಹೊಳೆ ಯೋಜನೆ ಎಲ್ಲಿಂದ ಬಂತು? ನೀರು ಎಲ್ಲಿಂದ ಬಂತು ಎಂಬುದರ ಅರಿವೇ ಇಲ್ಲದವರು ಈಗ ನಾನೇ ನೀರು ತಂದೆ ಎಂದು ಕ್ರೆಡಿಟ್ ತೆಗೆದುಕೊಳ್ಳಲು ಹೊರಟಿದ್ದಾರೆ ಎಂದು ಪರೋಕ್ಷವಾಗಿ ಶಾಸಕ ತಮ್ಮಯ್ಯ ವಿರುದ್ಧ ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಸತೀಶ್ ಜಾರಕಿಹೊಳಿ ವಿರುದ್ಧ ಎಡಿಜಿಪಿ ಕಂಪನಿಯಿಂದ ಕಿಕ್‌ಬ್ಯಾಕ್ ಪಡೆದಿರೋ ಆರೋಪ; ED ಸ್ಫೋಟಕ ಮಾಹಿತಿ
2012ರಲ್ಲಿ ಯೋಜನೆ ಆರಂಭವಾದಾಗಿನಿಂದ 2023ರವರೆಗೂ ಬಿಜೆಪಿಯಲ್ಲೇ ಇದ್ದು ಬಳಿಕ ಪಕ್ಷಾಂತರ ಮಾಡಿದ ತಮ್ಮಯ್ಯ ಈಗ ಅಭಿವೃದ್ಧಿ ಕೆಲಸಗಳಿಗೆ ಸಾಕ್ಷಿ ಕೇಳುತ್ತಿದ್ದಾರೆ. ಮೆಡಿಕಲ್ ಕಾಲೇಜು ಉದ್ಘಾಟನೆ, ಬೆಳವಾಡಿ ಕೆರೆಗೆ ಬಾಗಿನ ಅರ್ಪಣೆ, ಡಿಸಿ ಕಚೇರಿ ಶಂಕುಸ್ಥಾಪನೆ ಹಾಗೂ ಕರಗಡ ಯೋಜನೆ ಸಂದರ್ಭದಲ್ಲಿ ತಮ್ಮ ಪಕ್ಕದಲ್ಲೇ ನಿಂತಿದ್ದ ಫೋಟೋಗಳನ್ನು ಸಾಕ್ಷಿ ಕೇಳುವವರಿಗೆ ತೋರಿಸಬೇಕೇ ಎಂದು ಪ್ರಶ್ನಿಸಿದರು.
ಕಣ್ಣು, ಕಿವಿ ಹಾಗೂ ಆತ್ಮಸಾಕ್ಷಿ ಇರುವವರಿಗೆ ಪ್ರತ್ಯೇಕ ಸಾಕ್ಷಿಯ ಅಗತ್ಯವಿಲ್ಲ. ಆತ್ಮಸಾಕ್ಷಿಯೇ ಇಲ್ಲದವರಿಗೆ ಎಷ್ಟೇ ಸಾಕ್ಷಿ ಕೊಟ್ಟರೂ ಆಗಲ್ಲ ಎಂದು ಶಾಸಕ ತಮ್ಮಯ್ಯ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು. ದೇವರು ಅವಕಾಶ ಕೊಟ್ಟಾಗ ತಾವು ಕ್ಷೇತ್ರದ ಅಭಿವೃದ್ಧಿಗಾಗಿ ಉತ್ತಮ ಕೆಲಸ ಮಾಡಿದ್ದೇವೆ. ಈಗ ಅಧಿಕಾರದಲ್ಲಿ ಇರೋರು ಕೂಡ ಜನ ಮೆಚ್ಚುವ ಕೆಲಸ ಮಾಡಲಿ. ಅಂತಿಮವಾಗಿ ಜನರೇ ಯಾರು ಏನು ಎಂಬುದನ್ನು ತೀರ್ಮಾನಿಸುತ್ತಾರೆ.
ನಾನು ಅಧಿಕಾರಕ್ಕಾಗಿ ರಾಜಕಾರಣಕ್ಕೆ ಬಂದವನಲ್ಲ. ಸಿದ್ಧಾಂತಕ್ಕಾಗಿ ಬಂದವನು. ವಿರೋಧಿಗಳನ್ನು ಸೈದ್ಧಾಂತಿಕವಾಗಿ ಟೀಕಿಸಿದ್ದೇನೆಯೇ ಹೊರತು ವೈಯಕ್ತಿಕ ದ್ವೇಷ ಮಾಡಿಲ್ಲ. ಇದೇ ಕಾರಣಕ್ಕೆ ಎದುರಾಳಿ ಪಕ್ಷದ ನಾಯಕರೂ ವೈಯಕ್ತಿಕವಾಗಿ ಸಿಕ್ಕಾಗ ಗೌರವಿಸುತ್ತಾರೆ. ರಾಜಕಾರಣದಲ್ಲಿ ಅಧಿಕಾರಕ್ಕಿಂತ ಗೌರವವೇ ಮುಖ್ಯ ಎಂದಿದ್ದಾರೆ. ಇದನ್ನೂ ಓದಿ: ರಾಷ್ಟ್ರಧ್ವಜ ಹಾರಿಸದ, ರಾಷ್ಟ್ರಗೀತೆ ಹೇಳದ ಬಿಜೆಪಿ, RSSನವರಿಂದ ನಾವು ಪಾಠ ಕಲಿಯುವ ಅಗತ್ಯ ಇಲ್ಲ: ಹೆಚ್.ಸಿ.ಬಾಲಕೃಷ್ಣ

